Advertisement

ಮೈಸೂರಿನ ಅಭಿವೃದ್ಧಿಗೆ ಕೇಂದ್ರದಿಂದ 11 ಸಾವಿರ ಕೋಟಿ

03:34 PM Jul 08, 2018 | Team Udayavani |

ಮೈಸೂರು: ಕಳೆದ ನಾಲ್ಕು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೈಸೂರು ಜಿಲ್ಲೆಗೆ 11 ಸಾವಿರ ಕೋಟಿ ರೂ.ಗಳ ಅನುದಾನ ನೀಡಿದ್ದು, ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಅಂಡರ್‌ಪಾಸ್‌ ರನ್‌ವೇ, ಮೈಸೂರು-ಬೆಂಗಳೂರು ನಡುವೆ 8 ಪಥದ ರಸ್ತೆ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಮಂಜೂರಾತಿ ನೀಡಿದೆ ಎಂದು ಸಂಸದ ಪ್ರತಾಪಸಿಂಹ ಹೇಳಿದರು. 

Advertisement

ವಿಮಾನಯಾನ ಸೌಲಭ್ಯ: ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ನೀಡಿದೆ. ಮೈಸೂರು ಹೊರತುಪಡಿಸಿ ರಾಜ್ಯದ ಬೇರಾವುದೇ ಜಿಲ್ಲೆಗೂ ಇಷ್ಟೊಂದು ಅನುದಾನ ನೀಡಿಲ್ಲ.

ಮೈಸೂರಿಗೆ ಪ್ರಮುಖವಾಗಿ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಒಪ್ಪಿಗೆ ನೀಡುವ ಮೂಲಕ ಸಣ್ಣ ವಿಮಾನಗಳು ಹಾರಾಟ ನಡೆಯುತ್ತಿರುವ ಮೈಸೂರಿನಲ್ಲಿ ಮುಂದೆ ದೊಡ್ಡ ವಿಮಾನಗಳ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲದೆ ಮುಂದಿನ ಡಿಸೆಂಬರ್‌ ವೇಳೆಗೆ ಉಡಾನ್‌-3 ಯೋಜನೆ ವಿಸ್ತರಿಸಿ ಮತ್ತಷ್ಟು ನಗರಗಳಿಗೆ ವಿಮಾನಯಾನ ಸೌಲಭ್ಯ ಕಲ್ಪಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಎಂಟು ಪಥದ ರಸ್ತೆ: ಮೈಸೂರು-ಬೆಂಗಳೂರು ನಡುವೆ ಎಂಟು ಪಥದ ರಸ್ತೆ ನಿರ್ಮಾಣ ಕಾಮಗಾರಿ ಸೆಪ್ಟಂಬರ್‌ನಲ್ಲಿ ಆರಂಭವಾಗಲಿದೆ. 10 ಕಡೆ ಏಕಕಾಲದಲ್ಲಿ ಆರಂಭವಾಗುವ ಕಾಮಗಾರಿ 24 ತಿಂಗಳಲ್ಲಿ ಮುಗಿಸುವ ಗಡುವು ನೀಡಲಾಗಿದೆ.

ಇನ್ನು ಮೈಸೂರು-ಬೆಂಗಳೂರು ನಡುವಿನ ಜೋಡಿರೈಲು ಮಾರ್ಗದ ಕೆಲಸ ಮುಗಿದಿದ್ದರೂ ಹೆಚ್ಚು ರೈಲುಗಳ ಓಡಾಟಕ್ಕೆ ಸಮಸ್ಯೆಯಾಗಿರುವ ಕಾರಣ ನಾಗನಹಳ್ಳಿ ಸಮೀಪ 789 ಕೋಟಿ ರೂ. ವೆಚ್ಚದಲ್ಲಿ 347ಎಕರೆಯಲ್ಲಿ ಸ್ಯಾಟಲೈಟ್‌ ರೈಲ್ವೆ ಟರ್ಮಿನಲ್‌ ಬರಲಿದೆ ಎಂದು ಹೇಳಿದರು.  

Advertisement

ಈಗಾಗಲೇ ಮೈಸೂರು-ಬೆಂಗಳೂರು ನಡುವೆ ಹೆಚ್ಚು ರೈಲುಗಳು ಸಂಚರುಸುತ್ತಿದ್ದು, ರೈಲ್ವೆ ಟರ್ಮಿನಲ್‌ ಸ್ಥಾಪನೆಯಾದರೆ ಸಾಕಷ್ಟು ರೈಲುಗಳ ಸಂಚಾರಕ್ಕೆ ಅವಕಾಶವಿದೆ. ಜತೆಗೆ ಮೈಸೂರು-ಕುಶಾಲನಗರಕ್ಕೆ ರೈಲು ಸಂಪರ್ಕ ಕಲ್ಪಿಸಲು 667 ಕೋಟಿ ರೂ., ಕಡಕೊಳ ಬಳಿ 102 ಕೋಟಿ ವೆಚ್ಚದಲ್ಲಿ ಗೂಡ್ಸ್‌ ಟರ್ಮಿನಲ್‌ ನಿರ್ಮಾಣ ಸೇರಿದಂತೆ ಆಯುಷ್‌ ಇಲಾಖೆಗೆ 143 ಕೋಟಿ ರೂ. ಮಂಜೂರು ಮಾಡಿದೆ ಎಂದು ತಿಳಿಸಿದರು. 

ಹಲವರಿಗೆ ಅನುಕೂಲ: ಮೈಸೂರಿನಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಿಸುವ ಬಗ್ಗೆ ಅನೇಕ ವರ್ಷಗಳಿಂದ ಬೇಡಿಕೆ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಿಸಿದ್ದು, ಈವರೆಗೂ 20ಸಾರ ಮಂದಿ ಪ್ರಯೋಜನ ಪಡೆದಿದ್ದಾರೆ.

ಅಲ್ಲದೆ ಮಂಗಳೂರು ಭಾಗದಿಂದ ಕೊಡಗು ಜಿಲ್ಲೆಯನ್ನು ಮೈಸೂರಿಗೆ ಸೇರಿಸುವಂತೆ ಒತ್ತಡ ಬಂದಿದ್ದು, ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.ಅಮೃತ್‌ ಯೋಜನೆಯಡಿ 29 ಕೋಟಿ ವೆಚ್ಚದಲ್ಲಿ ಟ್ಯಾಂಕ್‌ ನಿರ್ಮಾಣ, ಹಿನಕಲ್‌ ರಸ್ತೆಯಲ್ಲಿ ಫ್ಲೈಓವರ್‌ ನಿರ್ಮಾಣ, ಕೆ.ಆರ್‌.ಆಸ್ಪತ್ರೆಯಲ್ಲಿ ವೈರಲ್‌ ರೀಸರ್ಚ್‌ ಮತ್ತು ಡಯಾಗ್ನೊಸ್ಟಿಕ್‌ ಲ್ಯಾಬೋರೇಟರಿ,

ಬಡವರ ಅನುಕೂಲಕ್ಕಾಗಿ 34 ಜನರಿಕ್‌ ಔಷಧ ಕೇಂದ್ರ ಆರಂಭ, ಸಿಆರ್‌ಎಫ್ ಅನುದಾನದಿಂದ ರಸ್ತೆಗಳನ್ನು ಅಭಿವೃದ್ಧಿ, 20 ಸಾವಿರ ಮಂದಿಗೆ ಗ್ಯಾಸ್‌ ವಿತರಣೆ ಜತೆಗೆ ಪರಿವಾರ-ತಳವಾರ ಪದದ ಸಮಸ್ಯೆ ನಿವಾರಿಸಲು ಕೇಂದ್ರ ಸರ್ಕಾರ ಎಸ್ಟಿಗೆ ಸೇರಿಸಲು ತೀರ್ಮಾನಿಸಿದ್ದು, ಅಧಿವೇಶನದಲ್ಲಿ ಅದನ್ನು ಅಂಗೀಕರಿಸಲಾಗುತ್ತದೆ ಎಂದು ಹೇಳಿದರು. 

ಇದೇ ವೇಳೆ 4 ವರ್ಷಗಳಲ್ಲಿ ಮೋದಿ ಮೈಸೂರಿಗೆ ಕೊಟ್ಟಿದ್ದೇನು? ಪ್ರತಾಪಸಿಂಹ ತಂದಿದ್ದೇನು?’ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು. ಗೋಷ್ಠಿಯಲ್ಲಿ ಶಾಸಕ ರಾಮದಾಸ್‌, ರಾಜ್ಯ ಕಾರ್ಯದರ್ಶಿ ರಾಜೇಂದ್ರ, ನಗರಾಧ್ಯಕ್ಷ ಡಾ.ಮಂಜುನಾಥ್‌, ಜಿಲ್ಲಾಧ್ಯಕ್ಷ ಶಿವಣ್ಣ ಹಾಜರಿದ್ದರು. 

ದೇಶದಲ್ಲೇ ಮೊದಲ ಬಾರಿಗೆ ಅಂಡರ್‌ಪಾಸ್‌ ರನ್‌ವೇ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದಕ್ಕಾಗಿ ಅಗತ್ಯವಿರುವ 160 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಮುಗಿದರೆ ಕೆಲಸ ಶುರುವಾಗಲಿದೆ. 
-ಪ್ರತಾಪ ಸಿಂಹ, ಸಂಸದ 

Advertisement

Udayavani is now on Telegram. Click here to join our channel and stay updated with the latest news.

Next