Advertisement

ಸರಗಳ್ಳನಿಂದ 1.06 ಕೋಟಿ ರೂ. ಚಿನ್ನಾಭರಣ ಜಪ್ತಿ

12:21 PM Aug 08, 2018 | |

ಬೆಂಗಳೂರು: ಎರಡು ತಿಂಗಳ ಹಿಂದೆ ಗುಂಡು ಹಾರಿಸಿ ಬಂಧಿಸಲಾಗಿದ್ದ ಕುಖ್ಯಾತ ಸರಗಳ್ಳ ಧಾರವಾಡ ಮೂಲದ ಅಚ್ಯುತ್‌ ಕುಮಾರ್‌ ನೀಡಿದ ಮಾಹಿತಿ ಮೇರೆಗೆ 1.06 ಕೋಟಿ ರೂ. ಮೌಲ್ಯದ 3,543 ಗ್ರಾಂ ಚಿನ್ನಾಭರಣ, 5 ಬೈಕ್‌ ವಶಪಡಿಸಿಕೊಳ್ಳಲಾಗಿದೆ.

Advertisement

ಈ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸಗಿದ್ದ 105 ಸರಗಳ್ಳತನ ಪ್ರಕರಣಗಳನ್ನು ಪತ್ತೆಯಾಗಿದ್ದು, ಆರೋಪಿಯು 2009ರಿಂದಲೇ ಸರಗಳ್ಳತನ ಕೃತ್ಯದಲ್ಲಿ ತೊಡಗಿದ್ದ. ಮೊದಲಿಗೆ ಧಾರವಾಡ, ದಾವಣಗೆರೆ, ಗದಗ ಜಿಲ್ಲೆಗಳಲ್ಲಿ ಕೃತ್ಯ ಎಸಗುತ್ತಿದ್ದ ಆರೋಪಿ ಕೆಲ ವರ್ಷಗಳ ಹಿಂದೆ ಪತ್ನಿ ಜತೆ ಬೆಂಗಳೂರಿಗೆ ಬಂದಿದ್ದು, ನಗರದಲ್ಲಿ 77 ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಚಾರವೂ ಬೆಳಕಿಗೆ ಬಂದಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಟಿ. ಸುನಿಲ್‌ ಕುಮಾರ್‌, ಆರೋಪಿಯು ನಗರದಲ್ಲಿ ಕೃತ್ಯವೆಸಗಿ ಬಳಿಕ ಕೊಪ್ಪಳ ಮೂಲದ ಸ್ನೇಹಿತ ಗವಿಸಿದ್ದೇಶ್‌ಗೆ ಕಡಿಮೆ ಬೆಲೆಗೆ ಚಿನ್ನಭಾರಣ ಮಾರಾಟ ಮಾಡುತ್ತಿದ್ದ ಎಂದರು.

ಅಚ್ಯುತ್‌ಕುಮಾರ್‌ ಜತೆ ಸೇರಿ ಸರಗಳ್ಳತನ ಮಾಡುತ್ತಿದ್ದ ಗದಗದ ಶಿವು ಹಿರೇಮಠ ಎಂಬಾತನನ್ನು ಪತ್ತೆ ಹಚ್ಚಲಾಗಿದೆ. ಆರೋಪಿಯ ಬಂಧನದಿಂದ ಬೆಂಗಳೂರಿನ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ 77, ಬಳ್ಳಾರಿ 10, ತುಮಕೂರು 5, ಬೆಂಗಳೂರು ಗ್ರಾಮಾಂತರ 4, ಹಾಸನ 3, ರಾಮನಗರ 2, ಧಾರವಾಡ 2, ದಾವಣಗೆರೆ 1, ರಾಮನಗರ ಪೊಲೀಸ್‌ ಠಾಣೆಯ 2 ಪ್ರಕರಣಗಳು ಸೇರಿ ಒಟ್ಟು 105 ಪ್ರಕರಣ ಬೆಳಕಿಗೆ ಬಂದಿದೆ ಎಂದು ವಿವರಿಸಿದರು.

ಕೃತ್ಯಕ್ಕೆ ಪತ್ನಿ ಸಹಕಾರ: ರಿಯಲ್‌ ಎಸ್ಟೇಟ್‌ ಕೆಲಸ ಮಾಡುತ್ತೇನೆ ಎಂದು ಹೇಳಿಕೊಂಡಿದ್ದ ಅಚ್ಯುತ್‌ ಕುಮಾರ್‌ ಮಹಾದೇವಿ ಎಂಬಾಕೆಯನ್ನು ವಿವಾಹವಾಗಿದ್ದ. ಬಳಿಕ ಬೆಂಗಳೂರಿನ ಕುಂಬಳಗೋಡು ಬಳಿ ಪತ್ನಿ ಜತೆ ವಾಸವಾಗಿದ್ದ. ಪತಿ ಸರಗಳ್ಳ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ತಿಳಿದಿದ್ದ ಈಕೆ ಕೂಡ ಪತಿಯ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದಳು. ಸದ್ಯ ಆಕೆ ತಲೆಮರೆಸಿಕೊಂಡಿದ್ದಾಳೆ ಎಂದು ಹೇಳಿದರು.

Advertisement

ಮೂರು ತಿಂಗಳಿಗೊಮ್ಮೆ ಮನೆ ಬದಲು: ಕಳೆದ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ವಿರುದ್ಧ 18 ವಾರೆಂಟ್‌ಗಳು ಜಾರಿಯಾಗಿತ್ತು. ಹೀಗಾಗಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರತಿ ಮೂರು ತಿಂಗಳಿಗೊಮ್ಮೆ ಮನೆ ಬದಲು ಮಾಡುತ್ತಿದ್ದ. ಹೀಗಾಗಿ ಆರೋಪಿಯ ಪತ್ತೆ ಕಷ್ಟವಾಗಿತ್ತು. ಚಿನ್ನಾಭರಣ ಮಾರಾಟ ಮಾಡಿ ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದ ಎಂದು ತಿಳಿಸಿದರು. ಇದೇ ವೇಳೆ ಆರೋಪಿಗಳಿಂದ ವಶಕ್ಕೆ ಪಡೆದ ಚಿನ್ನಾಭರಣಗಳನ್ನು ವಾಸರುಧಾರರಿಗೆ ನೀಡಲಾಯಿತು. ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಬಿ.ಕೆ.ಸಿಂಗ್‌, ಡಿಸಿಪಿ ರವಿ ಡಿ.ಚೆನ್ನಣ್ಣವರ್‌ ಉಪಸ್ಥಿತರಿದ್ದರು.

ಬಹುಮಾನ ಘೋಷಣೆ: ಪ್ರಕರಣ ಬೇಧಿಸಿದ ಪಶ್ಚಿಮ ವಿಭಾಗದ ಪೊಲೀಸರಿಗೆ 2 ಲಕ್ಷ ರೂ.ನಗದು ಬಹುಮಾನ ಮತ್ತು ಆರೋಪಿಯನ್ನು ಪತ್ತೆಹಚ್ಚಿದ ಜ್ಞಾನಭಾರತಿ ಠಾಣೆ ಪೇದೆ ಚಂದ್ರಕುಮಾರ್‌ಗೆ 25 ಸಾವಿರ ರೂ. ಬಹುಮಾನವನ್ನು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌  ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next