Advertisement

ತುಂಡುಗುತ್ತಿಗೆಯಲ್ಲಿ 10 ಸಾವಿರ ಕೋಟಿ ಅಕ್ರಮ: ಶ್ರೀರಾಮುಲು

02:04 PM May 14, 2019 | Team Udayavani |

ಹುಬ್ಬಳ್ಳಿ: ತುಂಡುಗುತ್ತಿಗೆ ಕಾಮಗಾರಿಯಲ್ಲಿ ಮೈತ್ರಿ ಸರ್ಕಾರ ಹತ್ತು ಸಾವಿರ ಕೋಟಿ ಅವ್ಯವಹಾರ ನಡೆಸಿದೆ ಎಂದು ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹದೇವಪ್ಪ ಅವರು ಎಸಿಬಿಗೆ ದೂರು ನೀಡಿದ್ದು, ನೈತಿಕ ಹೊಣೆ ಹೊತ್ತು ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಶಾಸಕ ಶ್ರೀರಾಮುಲು ಆಗ್ರಹಿಸಿದ್ದಾರೆ.

Advertisement

ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡರ ಪರ ಮತಯಾಚನೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಯಮಾವಳಿಗಳನ್ನು ಗಾಳಿಗೆ ತೂರಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು ತುಂಡುಗುತ್ತಿಗೆ ಕಾಮಗಾರಿಗಳನ್ನು ನೀಡಿದ್ದಾರೆ. ಇದರಿಂದ ಸರ್ಕಾರಕ್ಕೆ ಸುಮಾರು 10 ಸಾವಿರ ಕೋಟಿ ರೂ. ನಷ್ಟವಾಗಿದೆ. ಈ ಕುರಿತು ಸಿಎಂ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.

ಮೈತ್ರಿ ಸರ್ಕಾರದಲ್ಲಿ ಗೊಂದಲಗಳು ಎದ್ದಿದ್ದು, ಆಡಳಿತ ಯಂತ್ರ ಕುಸಿದು ಹೋಗಿದೆ. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಗಳ ನೋಡಿದರೆ ಮೈತ್ರಿ ಸರ್ಕಾರ ಹೆಚ್ಚು ದಿನ ಇರಲಾರದು. ಮೈತ್ರಿಯ ಶಾಸಕರಿಗೂ ಈ ಸರ್ಕಾರ ಬೇಡವಾಗಿದೆ. ಸರ್ಕಾರ ರಚನೆ ಇಲ್ಲವೆ ಮಧ್ಯಂತರ ಚುನಾವಣೆಗೆ ನಾವು ಸಿದ್ಧರಿದ್ದೇವೆ ಎಂದರು.

ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಅವರ ಹಿಂಬಾಲಕರು ಹೇಳುತ್ತಿದ್ದಾರೆ ಎನ್ನುವ ಎಚ್. ವಿಶ್ವನಾಥರ ಹೇಳಿಕೆ ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಆದರೆ, ವಾಸ್ತವದಲ್ಲಿ ಸಿದ್ದರಾಮಯ್ಯ ಅವರ ಜತೆ ಯಾವೊಬ್ಬ ಶಾಸಕರೂ ಇಲ್ಲ ಎನ್ನುವುದು ಸಹ ಅಷ್ಟೇ ಸತ್ಯ ಎಂದರು.

ಕುಂದಗೋಳ ಕ್ಷೇತ್ರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಭಾಗದಲ್ಲಿರುವ ಬರ ಸ್ಥಿತಿ ನೋಡಬೇಕು. ಐದು ಜಿಲ್ಲೆಗಳಿಗೆ ನೀಡಿದ ಅನುದಾನವನ್ನು ಉತ್ತರ ಕರ್ನಾಟಕದ ಬರಗಾಲ ಪ್ರದೇಶಕ್ಕೆ ನೀಡಬೇಕು. ಕುಂದಗೋಳ ಕ್ಷೇತ್ರಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕೈ ಕೈ ಮಿಲಾಯಿಸಿದ ಕಾರ್ಯಕರ್ತರು

ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ಇತ್ತೀಚೆಗೆ ಕೆಲವು ಕಾಂಗ್ರೆಸ್‌ ಯುವಕರು ಬಿಜೆಪಿಗೆ ಆಗಮಿಸಿದ್ದು, ಇದರಿಂದ ಬೇಸರಗೊಂಡಿರುವ ಕಾಂಗ್ರೆಸ್‌ ಕಾರ್ಯಕರ್ತರು ಶ್ರೀರಾಮುಲು ಅವರು ಪ್ರಚಾರಕ್ಕೆ ಆಗಮಿಸಿದ ಸಮಯದಲ್ಲಿ ಪರಸ್ಪರ ಕಿತ್ತಾಡಿಕೊಂಡರು. ಚಿಕ್ಕನಗೌಡರ ಕ್ಷೇತ್ರದಲ್ಲಿ ಏನು ಮಾಡಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಏರುಧ್ವನಿಯಿಂದ ಕೇಳಿದರು. ಇದರಿಂದ ಕೆರಳಿದ ಬಿಜೆಪಿ ಕಾರ್ಯಕರ್ತರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿ ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋದರು. ನಂತರ ಪೊಲೀಸರು ಅವರನ್ನು ತಡೆದು ಅಲ್ಲಿಂದ ಕಳುಹಿಸಿದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next