Advertisement

ಸರಕಾರಿ ಶಾಲೆಗೆ ಸೇರಿದರೆ 1,000 ರೂ.

10:05 PM Mar 31, 2019 | sudhir |

ಬೆಳ್ಮಣ್‌: ವಿವಿಧ ಕಾರಣಗಳಿಂದಾಗಿ ನೇಪಥ್ಯಕ್ಕೆ ಸೇರುತ್ತಿರುವ ಸರಕಾರಿ ಶಾಲೆಗಳನ್ನುಳಿಸಲು ವಿವಿಧೆಡೆ ವಿವಿಧ ಹೊಸ ಯೋಜನೆಗಳನ್ನು ಅಳವಡಿಸುತ್ತಿದ್ದರೆ ಮುಂಡ್ಕೂರಿನ 130 ವರ್ಷಗಳ ಇತಿಹಾಸವುಳ್ಳ ಸರಕಾರಿ ಶಾಲೆಯನ್ನುಳಿಸಲು ಇಲ್ಲಿನ ಹಳೆ ವಿದ್ಯಾರ್ಥಿಗಳ ಬಳಗದಿಂದ ರಚನೆಗೊಂಡ ಮುಂಡ್ಕೂರು ಫ್ರೆಂಡ್ಸ್‌ ಸಾಮಾಜಿಕ ಕಳಕಳಿಯ ಸಂಸ್ಥೆ ಮುಂದಿನ ವರ್ಷದಿಂದ ಈ ಶಾಲೆಗೆ ಸೇರ್ಪಡೆಗೊಳ್ಳಲಿರುವ ವಿದ್ಯಾರ್ಥಿಗಳಿಗೆ 1,000 ರೂಪಾಯಿಯ ಹೊಸ ಆಫರ್‌ ಘೋಷಿಸಿದೆ.

Advertisement

ಈಗಾಗಲೇ ಕಳೆದ ಮೂರು ವರ್ಷಗಳಿಂದ ಸಮಾಜಮುಖೀ ಚಿಂತನೆ ಗಳ ಮೂಲಕ ಗಮನ ಸೆಳೆದಿರುವ ಮುಂಡ್ಕೂರು ಪರಿಸರ ಮಾತ್ರವಲ್ಲದೆ ಕರಾವಳಿ ಭಾಗದ ಹತ್ತು ಹಲವು ಮಂದಿಗೆ ಶೈಕ್ಷಣಿಕ, ವೈದ್ಯಕೀಯ ನೆರವು ನೀಡಿದ್ದು ಮುಂಡ್ಕೂರಿನ ಜಾತ್ರಾ ಮಹೋತ್ಸವದ ಸಂದರ್ಭ ಧಾರ್ಮಿಕ ಸಭೆ ಸಂಘಟಿಸಿ ಸಾಧಕರನ್ನು ಗೌರವಿಸಿದೆ.

ಕಲಿತ ಶಾಲೆಯ ನೆನಪು
ದೇಶ ವಿದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಸಂಸ್ಥೆಯ ಸದಸ್ಯರು ತಮ್ಮ ದುಡಿಮೆಯ ಒಂದಿಷ್ಟನ್ನು ಸಮಾಜಕ್ಕಾಗಿ ಮೀಸಲಿಟ್ಟು ಅಶಕ್ತರಿಗೆ ನೆರವು ನೀಡುತ್ತಿರುವುದೂ ಉಲ್ಲೇಖನೀಯ. ಅದರಲ್ಲೂ ತಾವು ಕಲಿತ ಸರಕಾರಿ ಶಾಲೆಯ ನೆನಪನ್ನು ಮರೆಯದೆ ಕಳೆದ ವರ್ಷ ವಿದ್ಯಾರ್ಥಿಗಳ ವಾಹನದ ವೆಚ್ಚಕ್ಕಾಗಿ 25,000 ರೂ.ದೇಣಿಗೆ ಘೋಷಿಸಿದ್ದು( ಈಗಾಗಲೇ 10,000 ರೂ. ನೀಡಿದ್ದಾರೆ) ಇದೀಗ ಆ ಕೊಡುಗೆಯನ್ನು ನಿರಂತರವಾಗಿ ಮುಂದುವರಿಸುವ ಬಗ್ಗೆ ಆಶಯ ವ್ಯಕ್ತಪಡಿಸಿದ್ದಾರೆ. ಮುಂದಿನ ಸಾಲಿನಲ್ಲಿ ಒಂದನೇ ತರಗತಿಗೆ ಸೇರ್ಪಡೆ ಯಾಗುವ ವಿದ್ಯಾರ್ಥಿಗಳಿಗೆ ತಲಾ 1,000ರೂ. ಆಫ‌ರ್‌ ಘೋಷಿಸಿದ್ದಾರೆ. ಈ ಮೂಲಕ ಕನ್ನಡ ಶಾಲೆಯ ಉಳಿವಿಗೆ ತಾವೂ ಕಂಕಣ ಬದ್ಧರು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಮುಂಡ್ಕೂರು ಫ್ರೆಂಡ್ಸ್‌ ಬಳಗದಲ್ಲಿ ವಿದೇಶದಲ್ಲಿರುವ ಆನಂದ ಸಾಲ್ಯಾನ್‌, ಮುಂಬಯಿಯಲ್ಲಿರುವ ಜೈನಪೇಟೆಯ ಜಗದೀಶ್‌ ಶೆಟ್ಟಿ, ಪ್ರಶಾಂತ್‌ ಕುಲಾಲ್‌, ಸಚ್ಚೇರಿಪೇಟೆಯ ಅರುಣ್‌ ಕುಲಾಲ್‌(ಅಧ್ಯಕ್ಷ), ನವನೀತ್‌ ಅಮೀನ್‌ (ಕಾರ್ಯದರ್ಶಿ), ಸಂತೋಷ್‌ ಆರ್‌ .ಮೆಂಡನ್‌, ಪ್ರಮೋದ್‌ ಕಜೆ, ಕರಿಯ ಪೂಜಾರಿ (ಪಂಚಾಯತ್‌ ಸದಸ್ಯ), ಸತ್ಯನಾರಾಯಣ ಭಟ್‌ ಕಲ್ಲಿಮಾರು, ಲೋಕೇಶ್‌ ಆರ್‌. ಮೆಂಡನ್‌, ಲೋಕೇಶ್‌ ಕುಲಾಲ್‌, ಶಿವರಾಮ ಸಪಳಿಗ, ದಯಾನಂದ ಕುಲಾಲ್‌, ಸಂಕಲಕರಿಯ ಶಿವಪ್ರಕಾಶ್‌ ಶೆಟ್ಟಿ, ಅರುಣ್‌ ರಾವ್‌ (ವಿ.ಎಸ್‌.ಎಸ್‌. ಬ್ಯಾಂಕ್‌), ಮುಂಬಯಿಯ ಗಣೇಶ್‌ ಕುಂದರ್‌, ರಾಜಮುಗುಳಿಯ ರಾಘವೇಂದ್ರ ಕುಲಾಲ್‌, ಮಾರ್ಗ ದರ್ಶಕರಾದ ವಿದ್ಯಾವರ್ಧಕ ಪ.ಪೂ. ಕಾಲೇಜಿನ ಪ್ರಕಾಶ್‌ ನಾೖಕ್‌, ಪ್ರಭಾಕರ ಶೆಟ್ಟಿ ಈ ತಂಡದಲ್ಲಿದ್ದಾರೆ.

ಕನ್ನಡ ಶಾಲೆ ಉಳಿಸುವ ಕನಸು
ಸಾಮಾಜಿಕ ಕಳಕಳಿಯ ನಮ್ಮ ಮುಂಡ್ಕೂರು ಫ್ರೆಂಡ್ಸ್‌ ಅಶಕ್ತರ ಪಾಲಿಗೆ ಆಶಾಕಿರಣವಾಗ ಬಯಸಿದೆ. ನಮ್ಮ ದುಡಿಮೆಯ ಒಂದಿಷ್ಟನ್ನು ಸಮಾಜದಲ್ಲಿ ವೈದ್ಯಕೀಯ, ಶೈಕ್ಷಣಿಕ, ಸಾಮಾಜಿಕ ಉದ್ದೇಶಗಳಿಗಾಗಿ ಮೀಸಲಿರಿಸಿದ್ದೇವೆ. ಆದರಲ್ಲೂ ನಾವು ಕಲಿತ ಕನ್ನಡ ಶಾಲೆಯನ್ನುಳಿಸುವ ಮಹೋನ್ನತ ಕನಸುಗಳಿವೆ. ಈ ನಿಟ್ಟಿನಲ್ಲಿ ನಮ್ಮ ಇನ್ನೂ ಹಲವು ಉದ್ದೇಶಗಳಿವೆ.
– ಆನಂದ ಸಾಲ್ಯಾನ್‌, ಸಂಸ್ಥೆಯ ಪ್ರತಿನಿಧಿ

Advertisement
Advertisement

Udayavani is now on Telegram. Click here to join our channel and stay updated with the latest news.

Next