ಬೆಂಗಳೂರು: ಪ್ರತಿಪಕ್ಷಗಳ ನಾಯಕ ಮೇಲೆ ಗುರಿ ಇಟ್ಟುಕೊಂಡು ಉದ್ದೇಶ ಪೂರ್ವಕವಾಗಿ ದಾಳಿ ಮಾಡಿದ್ದ ಐಟಿ ಅಧಿಕಾರಿಗಳಿಗೆ 10 ರೂ. ಕೂಡ ಸಿಕ್ಕಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಲೂಟಿ ಮಾಡುವವರು, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಇಟ್ಟ ಹಾಗೆ ನಾನು ಹಣ ಇಟ್ಟಿದ್ದೇನಾ? ಅಶೋಕ್ ಎಲ್ಲೆಲ್ಲಿ ಲೂಟಿ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ.
ಅವರು ಅಧಿಕಾರದಲ್ಲಿದ್ದಾಗ ಬಿಎಂಟಿಸಿಯನ್ನು ಹರಾಜು ಹಾಕಿದ್ದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಬಿಎಂಟಿಸಿಗೆ 1000 ಕೋಟಿ ರೂ. ಠೇವಣಿ ಇಟ್ಟಿದ್ದೆ. ಅದನ್ನು ಲೂಟಿ ಹೊಡೆದಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆದಾಯ ತೆರಿಗೆ ಇಲಾಖೆಯವರು ಬಿಜೆಪಿ ನಾಯಕರ ಮನೆಗಳ ಮೇಲೆ ಯಾಕೆ ದಾಳಿ ಮಾಡಿಲ್ಲ. ಪಾಪ ಬಿಜೆಪಿಯವರು ಬಡವರು, ಅವರು ದುಡ್ಡಿಲ್ಲದೇ ಕೈ ಮುಗಿದು ಜನರ ಬಳಿ ಓಟು ಕೇಳುತ್ತಾರಾ? ಯಡಿಯೂರಪ್ಪ ಏನು ಮಾಡಿದ್ದಾರೆ ಎನ್ನುವುದು ಗೊತ್ತಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವವರು ಯಾರು ? ಯಡಿಯೂರಪ್ಪ ನನ್ನ ಮೇಲೆ ಹಾಕಿರುವ ಪ್ರಕರಣವನ್ನು 12 ವರ್ಷವಾದರೂ ಹೋರಾಟ ನಡೆಸುತ್ತಿದ್ದೇನೆ.
ಆದರೆ, ಯಡಿಯೂರಪ್ಪ ಅವರ ವಿರುದ್ಧ ಇದ್ದ ಎಲ್ಲ ಪ್ರಕರಣಗಳನ್ನು ಹೇಗೆ ಕ್ಲೀಯರ್ ಮಾಡಿಸಿಕೊಂಡರು ಎಂದು ನನಗೆ ಗೊತ್ತಿದೆ. ಅವರಿಗೆ ಯಾವ ನೈತಿಕತೆ ಇದೆ. ಯಾವುದೇ ಸಂಸ್ಥೆಯನ್ನು ನಾನು ದುಡ್ಡುಕೊಟ್ಟು ಕೊಂಡಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ಮಾಡಿದ್ದಾರೆ.