Advertisement

ಆರ್‌.ಆರ್‌.ನಗರ ಸಸ್ಪೆನ್ಸ್‌; ಚುನಾವಣೆ ಪ್ರಕ್ರಿಯೆ ಬಗ್ಗೆ ನಿರ್ಧಾರ

06:00 AM May 10, 2018 | Team Udayavani |

ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಅಪಾರ್ಟ್‌ಮೆಂಟ್‌ನಲ್ಲಿ ಮತದಾರರನ್ನು ಮನವೊಲಿಕೆ ಮತ್ತು ಆಮಿಷಗೊಳಪಡಿಸುವ ಸಲುವಾಗಿಯೇ ವೋಟರ್‌ ಐಟಿಗಳನ್ನು ಸಂಗ್ರಹಿಸಿ ಇಡಲಾಗಿತ್ತು ಎಂಬುದು ಸ್ಪಷ್ಟವಾಗಿ ಗೋಚರಿಸಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ಹೇಳಿದ್ದಾರೆ.

Advertisement

ಈ ಸಂಬಂಧ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತರು ಗುರುವಾರ ನಗರಕ್ಕೆ ಆಗಮಿಸಲಿದ್ದು, ಪರಿಶೀಲನೆ ನಂತರ ಚುನಾವಣೆ ಪ್ರಕ್ರಿಯೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಈ ಮಧ್ಯೆ, ಪ್ರಕರಣದ ಬಗ್ಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಪರಸ್ಪರ ಕೆಸೆರೆರೆಚಾಟದಲ್ಲಿ ತೊಡಗಿವೆ. ಕಾಂಗ್ರೆಸ್‌ ಕೃತ್ಯ ಎಂದು ಬಿಜೆಪಿ ಆರೋಪಿಸಿದರೆ, ಬಿಜೆಪಿಯ ಷಡ್ಯಂತ್ರ ಎಂದು ಕಾಂಗ್ರೆಸ್‌ ತಿರುಗೇಟು ನೀಡಿದೆ. ಈ ಸಂಬಂಧ ಎರಡೂ ಪಕ್ಷಗಳು ನವದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿವೆ. ಅಲ್ಲದೆ ಕ್ಷೇತ್ರದ ಚುನಾವಣೆ ಮುಂದೂಡುವಂತೆ ಬಿಜೆಪಿ ಮತ್ತು ಜೆಡಿಎಸ್‌ ಆಗ್ರಹಿಸಿದ್ದರೆ, ಕಾಂಗ್ರೆಸ್‌ ಅಗತ್ಯವಿಲ್ಲವೆಂದಿದೆ.

ಎಲ್ಲ ಎಪಿಕ್‌ ಕಾರ್ಡ್‌ ಅಸಲಿ: ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿರುವ ಎಲ್ಲ 9,896 ಎಪಿಕ್‌ ಕಾರ್ಡ್‌ಗಳು ಅಸಲಿಯಾಗಿವೆ. ಈ ಎಪಿಕ್‌ ಕಾರ್ಡ್‌ಗಳನ್ನು  ಕಾಗದದ ಪೊಟ್ಟಣಗಳಲ್ಲಿ ಏರಿಯಾವಾರು ಕ್ರಮಬದ್ಧವಾಗಿ ಜೋಡಿಸಿ, ಅದರ ಮೇಲೆ ಏರಿಯಾದ ಹೆಸರು, ವ್ಯಕ್ತಿಯ ಹೆಸರು ಮತ್ತು ಮೊಬೈಲ್‌ ಸಂಖ್ಯೆ ಬರೆಯಲಾಗಿದೆ. ವಶಪಡಿಸಿಕೊಂಡ ಎಲ್ಲ ವಸ್ತುಗಳು ಮತ್ತು ದಾಖಲೆಗಳನ್ನು ಗಮನಿಸಿದರೆ ಇದು ಮತದಾರರನ್ನು ಮನವೊಲಿಸುವ, ಆಮಿಷಕ್ಕೊಳಪಡಿಸುವ ಮತ್ತು ಒತ್ತಡ ಹೇರುವ ಪೂರ್ವಯೋಜಿತ ವ್ಯವಸ್ಥಿತ ಪ್ರಯತ್ನ ಅನ್ನುವುದು ಸ್ಪಷ್ಟವಾಗಿ ಕಾಣುತ್ತದೆ. ಇಡೀ ಪ್ರಕರಣವನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ ಎಂದು ಸಂಜೀವ್‌ ಕುಮಾರ್‌ ಹೇಳಿದ್ದಾರೆ.

ಮಂಗಳವಾರದ ದಾಳಿ ವೇಳೆ ಎಪಿಕ್‌ ಕಾರ್ಡ್‌ಗಳನ್ನು ನಕಲು ಮಾಡುವ 3 ಮುದ್ರಣ ಯಂತ್ರಗಳು, 5 ಲ್ಯಾಪ್‌ಟಾಪ್‌, 9 ಮೊಬೈಲ್‌ ಫೋನ್‌ ಜೊತೆಗೆ ಪ್ಯಾನ್‌ ಕಾರ್ಡ್‌, ಎಟಿಎಂ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌, ವಿಸಿಟಿಂಗ್‌ ಕಾರ್ಡ್‌ ಸಿಕ್ಕಿವೆ. ಬಿಬಿಎಂಪಿ ಮುದ್ರೆ ಹೊಂದಿರುವ 6,342 ಮತದಾರರ ಅರ್ಜಿ ಸ್ವೀಕೃತಿಗಳು, ಬಿಬಿಎಂಪಿ ಮುದ್ರೆ ಇಲ್ಲದ 20,700 ಸ್ವೀಕೃತಿ ಅರ್ಜಿಗಳು ಪತ್ತೆಯಾಗಿವೆ. ಇದಲ್ಲದೇ ಕುಟುಂಬಗಳ ಸಂಖ್ಯೆ, ವ್ಯಕ್ತಿಗಳ ಹೆಸರು, ಜಾತಿ, ಮೊಬೈಲ್‌ ನಂಬರ್‌ ಮತ್ತಿತರ ವಿವರಗಳನ್ನು ಹೊಂದಿರುವ ಸರ್ವೆ ಫಾರಂಗಳು ಮತ್ತು ಸರ್ವೆ ಮಾಡಿದವರ ಹೆಸರುಗಳು ಸ್ಥಳದಲ್ಲಿ ಸಿಕ್ಕಿವೆ. ತನಿಖೆ ಬಳಿಕವೇ ಸತ್ಯಾಸತ್ಯತೆ ಹೊರಬರಲಿದೆ ಎಂದು ಸಂಜೀವ ಕುಮಾರ್‌ ವಿವರಿಸಿದರು.

Advertisement

ಜತೆಗೆ ಆಯೋಗದ ಸಾಫ್ಟ್ವೇರ್‌ ತಿರುಚಿ ಬೋಗಸ್‌ ಎಪಿಕ್‌ ಕಾರ್ಡ್‌ ತಯಾರಿಸಲಾಗಿದೆ ಅನ್ನುವುದು ಸತ್ಯಕ್ಕೆ ದೂರವಾದದ್ದು. ಅದೇ ರೀತಿ ಇದರಲ್ಲಿ ಅಧಿಕಾರಿಗಳ ಪಾತ್ರವೂ ಕಾಣುತ್ತಿಲ್ಲ. ಅದಾಗ್ಯೂ ಸುಮಾರು 9 ಸಾವಿರಕ್ಕೂ ಹೆಚ್ಚು ಎಪಿಕ್‌ ಕಾರ್ಡ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದು ದೊಡ್ಡ ಅಪರಾಧ. ವಿಚಾರಣೆ ಪೂರ್ಣಗೊಳ್ಳುವ ಮೊದಲು ಈ ಪ್ರಕರಣದಲ್ಲಿ ಯಾವುದೇ ನಿಲುವು ಅಥವಾ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. “ಯಾರದೇ ಭಾವಚಿತ್ರ ಇರುವ ಒಂದೆರಡು ಕರಪತ್ರಗಳು ಸಿಕ್ಕ ಮಾತ್ರಕ್ಕೆ ಅವರ ಬಗ್ಗೆ ಅನುಮಾನ ವ್ಯಕ್ತಪಡಿಸುವುದಾಗಲಿ, ತೀರ್ಮಾನಕ್ಕೆ ಬರುವುದಾಗಲಿ ಸರಿಯಲ್ಲ. ತನಿಖೆ ಬಳಿಕವಷ್ಟೇ ಸತ್ಯ ಏನೆಂದು ಗೊತ್ತಾಗುತ್ತದೆ’ ಎಂದು ಸಂಜೀವ್‌ ಕುಮಾರ್‌ ಹೇಳಿದರು.

ಉಪ ಆಯುಕ್ತರ ಪರಿಶೀಲನೆ
ಗುರುತಿನ ಚೀಟಿ ಪತ್ತೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹೇಳಲು ಕೇಂದ್ರ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತ ಚಂದ್ರ ಭೂಷಣ್‌ ಕುಮಾರ್‌ ಅವರು ಬುಧವಾರ ರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಕೂಡಲೇ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಂದ ಪ್ರಕರಣದ ಮಾಹಿತಿ ಪಡೆದುಕೊಂಡರು. ಬಳಿಕ ಮತದಾರರ ಗುರುತಿನ ಚೀಟಿ ಪತ್ತೆಯಾದ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಜತೆಗೆ ಜಿಲ್ಲಾ ಚುನಾವಣಾಧಿಕಾರಿ, ನಗರ ಪೊಲೀಸ್‌ ಆಯುಕ್ತರು, ಸ್ಥಳೀಯ ಚುನಾವಣಾಧಿಕಾರಿ ಮತ್ತು ಪೊಲೀಸ್‌ ಅಧಿಕಾರಿಗಳಿಂದ ಪ್ರಕರಣದ ಸಮಗ್ರ ಮಾಹಿತಿ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next