ಲಂಡನ್: ಇಂಗ್ಲೆಂಡ್ ಮತ್ತು ಶ್ರೀಲಂಕಾ (ENGvsSL) ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೂವರು ಬದಲಿ ಆಟಗಾರರು ಫೀಲ್ಡಿಂಗ್ ಗೆ ಬಂದರು. ಈ ಮೂವರಲ್ಲಿ ಒಬ್ಬರು ಲಂಕಾಶೈರ್ (Lancashire) ಬ್ಯಾಟರ್ ಹ್ಯಾರಿ ಸಿಂಗ್ (Harry Singh) ಒಬ್ಬರು. ಆರಂಭದಲ್ಲಿಯೇ ಬದಲಿ ಆಟಗಾರನಾಗಿಯೇ ಫೀಲ್ಡಿಂಗ್ ಗೆ ಬಂದ 20 ವರ್ಷದ ಹ್ಯಾರಿ ಸಿಂಗ್ ಮತ್ತೆ 37ನೇ ಓವರ್ ನಲ್ಲಿ ಹ್ಯಾರಿ ಬ್ರೂಕ್ (Harry Brook) ಅವರ ಬದಲಿಯಾಗಿ ಕ್ಷೇತ್ರ ರಕ್ಷಣೆಗೆ ಬಂದರು.
ಯಾರು ಈ ಹ್ಯಾರಿ ಸಿಂಗ್
20 ವರ್ಷದ ಲಂಕಾ ಶೈರ್ ತಂಡದ ಆರಂಭಿಕ ಆಟಗಾರ ಹ್ಯಾರಿ ಸಿಂಗ್ ಅವರು ಭಾರತದ ಮಾಜಿ ಆಟಗಾರ ರುದ್ರ ಪ್ರತಾಪ್ ಸಿಂಗ್ ಸೀನಿಯರ್ (Rudra Pratap Singh Senior) ಅವರ ಪುತ್ರ. ಆರ್.ಪಿ ಸಿಂಗ್ ಎಂದರೆ ಮೊದಲು ನೆನಪಾಗುವುದು 2007ರ ಟಿ20 ವಿಶ್ವಕಪ್ ಗೆದ್ದ ತಂಡದ ಸದಸ್ಯ. ಆದರೆ 80ರ ದಶಕದಲ್ಲಿ ಭಾರತ ತಂಡದ ಪರವಾಗಿ ಎರಡು ಪಂದ್ಯವಾಡಿದ್ದ ಆಟಗಾರ ರುದ್ರ ಪ್ರತಾಪ್ ಸಿಂಗ್ ಸೀನಿಯರ್ ಅವರ ಪುತ್ರ ಈ ಹ್ಯಾರಿ ಸಿಂಗ್.
ರುದ್ರ ಪ್ರತಾಪ್ ಸಿಂಗ್ ಸೀನಿಯರ್ ಅವರು 1986ರಲ್ಲಿ ಆಸ್ಟ್ರೇಲಿಯಾ ವಿರುದ್ದ ಎರಡು ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಕ್ರಿಕೆಟ್ ವೃತ್ತಿಜೀವನದ ಬಳಿಕ ರುದ್ರ ಪ್ರತಾಪ್ ಸಿಂಗ್ ಅವರು ಇಂಗ್ಲೆಂಡ್ ಗೆ ಹೋಗಿ ಸೆಟಲ್ ಆಗಿದ್ದಾರೆ.
ಹ್ಯಾರಿ ಸಿಂಗ್ ಅವರು ಜೂನ್ 16, 2004 ರಂದು ಇಂಗ್ಲೆಂಡ್ ನ ಲಂಕಾಶೈರ್ ನ ಬ್ಲ್ಯಾಕ್‌ಬರ್ನ್ ನಲ್ಲಿ ಜನಿಸಿದರು. ರುದ್ರ ಪ್ರತಾಪ್ ಸಿಂಗ್ ಅವರು ಲಂಕಾಶೈರ್ ಕೌಂಟಿ ಕ್ಲಬ್ ಮತ್ತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ECB) ನೊಂದಿಗೆ ಕೋಚಿಂಗ್ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು.
ಹ್ಯಾರಿ ಸಿಂಗ್ ಅವರು ಯುಕೆಯಲ್ಲಿ ತಮ್ಮದೇ ಆದ ಕ್ರಿಕೆಟ್ ವೃತ್ತಿಜೀವನದಲ್ಲಿ ಸ್ಥಿರವಾದ ಪ್ರಗತಿ ಸಾಧಿಸುತ್ತಿದ್ದಾರೆ. ಅವರು ಈ ವರ್ಷದ ಆರಂಭದಲ್ಲಿ ಲಂಕಾಶೈರ್ ಗಾಗಿ ಏಕದಿನ ಕಪ್ ನಲ್ಲಿ ಪದಾರ್ಪಣೆ ಮಾಡಿದರು. ಈ ಕೂಟದ ಎಲ್ಲಾ ಏಳು ಪಂದ್ಯಗಳನ್ನು ಆಡಿದರು.
“ನಾನು ನಾಲ್ಕನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದೆ, ಎಂಟನೇ ವಯಸ್ಸಿನಲ್ಲಿ ಲಂಕಾಶೈರ್ ನ ಪಾಥ್ ವೇ ಸಿಸ್ಟಮ್ ಗೆ ಸೇರಿಕೊಂಡೆ. ನಾನು 15 ನೇ ವಯಸ್ಸಿನಿಂದ ಲ್ಯಾಂಕ್ಸ್ ಅಕಾಡೆಮಿಯಲ್ಲಿದ್ದೇನೆ. ಆದ್ದರಿಂದ ನಾನು ಈ ಹಂತವನ್ನು ತಲುಪುವ ಇದು ದೀರ್ಘ ಪ್ರಯಾಣವಾಗಿದೆ” ಎಂದು ಹ್ಯಾರಿ ಸಿಂಗ್ ಹೇಳಿದರು.