Advertisement

ರೊಯ್ಯನೆ ಬಾಲ್‌ ಎಸೆದೆ ಆಮೇಲೆ ಏನಾಯಿತೋ ಗೊತ್ತಿಲ್ಲ!

12:30 AM Jan 29, 2019 | Team Udayavani |

ಏನು ನಡೀತಿದೆ ಎಂದೇ ಅರ್ಥವಾಗದೇ ಕಂಗಾಲಾಗಿದ್ದ ನನ್ನ ಕೈಗೆ ಬಾಲ್‌ ಕೊಟ್ಟು ಬಿಟ್ಟರು. ಸರಿ, ಈಗ ನಾನು ಅದನ್ನೇನು ಮಾಡಬೇಕು? ನೋಡಿದರೆ ಎಲ್ಲಾ ನನ್ನನ್ನೇ ನೋಡುತ್ತಿದ್ದಾರೆ! ಕಾಲು ನಡುಗತೊಡಗಿತು. ಅಷ್ಟರಲ್ಲಿ ನನ್ನ ಟೀಮಿನವಳೊಬ್ಬಳು “ಸರ್ವ್‌ ಮಾಡು ದೀಪಾ… ಯೂ ಕ್ಯಾನ್‌ ಡೂ ಇಟ್‌’ ಎಂದಳು. 

Advertisement

ನಾನು ಹೈಸ್ಕೂಲಿಗೆ ಬರುವ ಹೊತ್ತಿಗಾಗಲೇ ಐದು ಅಡಿ ಆರಿಂಚು ಬೆಳೆದು ನಿಂತಿದ್ದೆ. ತಿಂದಿದ್ದೆಲ್ಲಾ ಉದ್ದುದ್ದಕ್ಕೇ ಹರಡುತ್ತಿತ್ತೋ ಏನೋ! ಸುತ್ತಳತೆ ಮಾತ್ರ ಖೋತಾ. ಒಟ್ಟಾರೆ, ಬಡವರ ಮನೆ ಕಂಬದ ಹಾಗೆ ತೆಳ್ಳಗೆ ಉದ್ದಕ್ಕೆ ಇದ್ದೆ. ಅದನ್ನು ನೋಡಿ ನಮ್ಮ ಪಿ.ಟಿ ಸರ್‌ ನನ್ನನ್ನು ಸ್ಕೂಲ್‌ ಥ್ರೋ ಬಾಲ್‌ ತಂಡಕ್ಕೆ ಸೇರಿಸಿಕೊಂಡರು. 

ಬಾಲ್‌ ಹಿಡಿದು ಸರ್ವ್‌ ಮಾಡುವ ರೀತಿಯನ್ನು ಕಲಿಯುವ ಹೊತ್ತಿಗೇ ನ್ಪೋರ್ಟ್ಸ್ ಡೇ ತೀರಾ ಹತ್ತಿರ ಬಂದು ಅನಿವಾರ್ಯವಾಗಿ ನನಗೆ ಬರೀ ಥಿಯರಿ ಹೇಳಿಕೊಟ್ಟು ಮ್ಯಾಚ್‌ ಕಣಕ್ಕಿಳಿಸಲಾಯಿತು. ಎದುರು ತಂಡದವರು ಮೊದಲು ಸರ್ವ್‌ ಮಾಡಿದರು. ನಮ್ಮವರು ಹಿಡಿದು ತಿರುಗಿ ಎಸೆದರು. ಅದರ ರಭಸ ನೋಡಿ ಏಕೋ ಎಡಗಣ್ಣು ಅದುರಿತು. ಬಾಲ್‌ ನನ್ನೆಡೆಗೆ ಬೀಸಿ ಬರುವಾಗ ಎರಡೂ ಅಂಗೈ ತೆರೆದು ತಯಾರಾಗಿರಬೇಕು ಎಂದು ನನಗೆ ಪಾಠ ಹೇಳಿಕೊಟ್ಟಿದ್ದರು. ನಾನೂ ಗಂಭೀರ ಮುಖಮುದ್ರೆ ಇಟ್ಟುಕೊಂಡು ಸೈನಿಕನೊಬ್ಬನ ಸಮರ ತಯಾರಿಯಂದದಲಿ ಕೇಳಿದ್ದೆ. ಈ ಬಾಲು ಎರಡನೇ ಸಲಕ್ಕೇ ಸೀದಾ ನನ್ನ ಕಡೆಗೇ ಧಾವಿಸತೊಡಗಿತು! ನನ್ನ ತೆರೆದ ಅಂಗೈಗಳು ಮೆಲ್ಲನೆ ಮೇಲೆದ್ದವು. ಬಾಲ್‌ ನನ್ನತ್ತ ಧಾವಿಸುತ್ತಿದೆ… ನನ್ನ ಕೈಗಳು ಮೇಲೇರುತ್ತಿವೆ… ಇನ್ನೇನು ನನ್ನ ತೆಕ್ಕೆಗೆ ಬಾಲ್‌ ಬೀಳಬೇಕು, ಅಷ್ಟರಲ್ಲಿ ನಾನು ನನ್ನ ತೆರೆದ ಅಂಗೈಗಳನ್ನು ತಲೆಯ ರಕ್ಷಣೆಗೆಂದು ಹೊತ್ತುಕೊಂಡು ಕುಕ್ಕರಿಸಿ ಕುಳಿತುಬಿಟ್ಟಿದ್ದೆ! 

ಎಲ್ಲರೂ ನನ್ನ ಕಡೆ ಯಾವ ರೀತಿ ನೋಡುತ್ತಿದ್ದರೋ ಗೊತ್ತಿಲ್ಲ. ಯಾಕೆಂದರೆ, ನಾನು ಯಾರ ಕಡೆಗೂ ನೋಡಲೇ ಇಲ್ಲ. ಯೂನಿಫಾರ್ಮ್ ಸ್ಕರ್ಟ್‌ ಕೊಡವಿಕೊಂಡು, ಅಂಗೈಗಳನ್ನು ತೆರೆದು ಯೋಧಳಂತೆ ಮತ್ತೆ ನಿಂತುಬಿಟ್ಟೆ. 

ಆಟ ಮುಂದುವರಿಯಿತು. ನಾನು ಸೂಕ್ಷ್ಮವಾಗಿ ಉಳಿದವರನ್ನು ಗಮನಿಸುತ್ತಿದ್ದೆ. ಅವರು ಸಂತೋಷ ವ್ಯಕ್ತಪಡಿಸಿದರೆ ನಾನೂ ಸಂತೋಷ ತೋರುತ್ತಿದ್ದೆ. ಅವರು  “ಓ… ಛೆ!’, ‘ಓ..ನೋ!’ ಎಂಬಿತ್ಯಾದಿ ಉದ್ಗಾರಗಳನ್ನು ಮಾಡಿದರೆ ನಾನೂ ಹಾಗೆಯೇ ಮಾಡುತ್ತಿದ್ದೆ. ಒಟ್ಟು ನಮಗೆ ಪಾಯಿಂಟ್‌ ಬಂತೋ, ಅವರಿಗೋ ಎಂದು ನನಗೆ ಆಟ ಮುಗಿದರೂ ಗೊತ್ತಾಗಲಿಲ್ಲ.

Advertisement

ಅಳುವವರ ತಲೆ ಮೇಲೆ ಗುಂಡು ಕಲ್ಲು ಎತಾಕಿದರಂತೆ ಅನ್ನೋ ಗಾದೆಯಂತೆ, ಮೊದಲೇ ಏನು ನಡೀತಿದೆ ಎಂದೇ ಅರ್ಥವಾಗದೇ ಕಂಗಾಲಾಗಿದ್ದ ನನ್ನ ಕೈಗೆ ಬಾಲು ಕೊಟ್ಟುಬಿಟ್ಟರು. ಸರಿ, ಈಗ ನಾನು ಅದನ್ನೇನು ಮಾಡಬೇಕು? ನೋಡಿದರೆ ಎಲ್ಲಾ ನನ್ನನ್ನೇ ನೋಡುತ್ತಿದ್ದಾರೆ! ಕಾಲು ನಡುಗತೊಡಗಿತು. ಅಷ್ಟರಲ್ಲಿ ನನ್ನ ಟೀಮಿನವಳೊಬ್ಬಳು “ಸರ್ವ್‌ ಮಾಡು ದೀಪಾ… ಯೂ ಕ್ಯಾನ್‌ ಡೂ ಇಟ್‌’ ಎಂದಳು, ಪುಣ್ಯಾತಿತ್ತಿ. ಅವಳ ಹೊಟ್ಟೆ ತಣ್ಣಗಿರಲಿ. ಸರ್ವ್‌ ಮಾಡುವ ತರಬೇತಿ ಆಗಿತ್ತಲ್ಲ, ಸ್ವಲ್ಪ ಧೈರ್ಯದಿಂದಲೇ ಹೋಗಿ ಬಾಲ್‌ ಭುಜದ ಮೇಲೆ ತಂದು ಪೂರ್ತಿ ಬಲ ಹಾಕಿ ಎಸೆದೆ. ಎಲ್ಲಾ ಆಕಾಶದೆಡೆಗೆ ಮುಖ ಮಾಡಿ ತಯಾರಾದರು. ಅರೆ! ಚೆಂಡೇ ಕಾಣುತ್ತಿಲ್ಲ! ಎಲ್ಲಿ ಎಲ್ಲಿ ಎಂದು ನೋಡಿದರೆ ಹಾಳಾದ್ದು ನನ್ನ ಮುಂದಿನದಲ್ಲಾ ಮುಂದಿನ ಹುಡುಗಿಯ ಕಾಲ ಬಳಿ ಬಿದ್ದಿದೆ! ಏನೂ ಆಗೇ ಇಲ್ಲ ಎಂಬಂತೆ ಮುಖ ಮಾಡಿಕೊಂಡು ಯಾರನ್ನೂ ನೋಡದೇ ಮತ್ತೆ ಬಾಲ್‌ ತಂದು ಸರ್ವ್‌ ಮಾಡಿದೆ. ಅಬ್ಟಾ, ನನ್ನ ಪುಣ್ಯ, ನೆಟ್‌ ದಾಟಿತು! 

ಅಂತೂ ಇಂತೂ ಆ ಮ್ಯಾಚ್‌ ಮುಗಿಯಿತು. ಗೆದ್ದೆವೋ ಸೋತೆವೋ ಈಗ ಮರೆತುಹೋಗಿದೆ. ಆದರೆ ಆ ದಿನ ಎರಡು ರೆಸಲ್ಯೂಷನ್‌ ಗಳನ್ನು ಮಾಡಲಾಯಿತು. ಒಂದು: ನನ್ನ ಬದುಕಿನ ಮೊಟ್ಟಮೊದಲ ರೆಸಲ್ಯೂಷನ್‌. ಆಟೋಟ ನನ್ನ ತಟ್ಟೆಯ ತುತ್ತಲ್ಲ ಎನ್ನುವುದು. ಇನ್ನೊಂದು ನಮ್ಮ ಪಿ.ಟಿ ಸರ್‌ ಮಾಡಿದ್ದು: ಅದೇನೆಂದು ನಿಮ್ಮ ಊಹೆಗೆ ಬಿಟ್ಟಿದ್ದೇನೆ! 

ದೀಪಾ ಸ್ವಾಮಿ
 

Advertisement

Udayavani is now on Telegram. Click here to join our channel and stay updated with the latest news.

Next