ಮಣಿಪಾಲ: ಜನಪ್ರಿಯ ದ್ವಿಚಕ್ರ ವಾಹನ ತಯಾರಿಕೆ ಕಂಪನಿಯಾದ ರಾಯಲ್ ಎನ್ ಫೀಲ್ಡ್ ಇದೀಗ ನೂತನ ಮೋಟಾರ್ ಸೈಕಲ್ “ರಾಯಲ್ ಎನ್ ಪೀಲ್ಡ್ ಮೆಟಿಯೋರ್ 350” ಅನ್ನು ಭಾರತದಲ್ಲಿ ನವೆಂಬರ್ 6 (2020)ರಂದು ಬಿಡುಗಡೆಗೊಳಿಸಲು ಸಜ್ಜಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ರಾಯಲ್ ಎನ್ ಫೀಲ್ಡ್ ಮೆಟಿಯೋರ್ 350 ಬಿಡುಗಡೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿರುವ ಟೀಸರ್ ಭರ್ಜರಿ ಟ್ರೆಂಡಿಂಗ್ ಆಗಿದೆ. ಹೊಸ ಲುಕ್ ನ ಮೆಟಿಯೋರ್ 350 ಹೇಗಿದೆ ಎಂಬ ಕಿರುನೋಟ ವಿಡಿಯೋದಲ್ಲಿದೆ.
ರಾಯಲ್ ಎನ್ ಫೀಲ್ಡ್ ಮೆಟಿಯೋರ್ 350 ಪ್ರಸ್ತುತ ಮಾರುಕಟ್ಟೆಯಲ್ಲಿರುವ ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ 350ಯ ಬದಲಿ ಆವೃತ್ತಿಯಾಗಿದೆ. ಮೆಟಿಯೋರ್ 350 ಎಲ್ಲಾ ವಿಧದಿಂದಲೂ ಹೊಸತನದಿಂದ ಕೂಡಿದೆ. ಹೊಸ 350 ಸಿಸಿ ಇಂಜಿನ್, ಹೊಸ ಫ್ರೇಮ್ ನೊಂದಿಗೆ ನೂತನ ಡಿಸೈನ್ ಮತ್ತು ಮಾದರಿಯದ್ದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮೆಟಿಯೋರ್ 350 ಎನ್ ಪೀಲ್ಡ್ ನ ತಾಂತ್ರಿಕ ಮಾಹಿತಿ ಕೂಡ ಹೊರಬಿದ್ದಿದ್ದು, ಬೈಕ್ ನಲ್ಲಿ ನೂತನ 350 ಸಿಸಿ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಅಲ್ಲದೇ ಈ ಎಂಜಿನ್ 20.2 ಬಿಎಚ್ ಪಿ ಪವರ್ ಮತ್ತು 27 ಎನ್ ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಲಾಂಗ್ ಸ್ಟ್ರೋಕ್ ಎಂಜಿನ್ ಇದ್ದು ಸಾಫ್ಟ್ ಗಿಯರ್ ಸಿಸ್ಟಂ ವ್ಯವಸ್ಥೆ ಇದ್ದು, ಕ್ಲಚ್ ಮತ್ತು ಗಿಯರ್ ಬಾಕ್ಸ್ ಸಿಸ್ಟಮ್ ಅನ್ನು ನೂತನವಾಗಿ ಅಭಿವೃದ್ದಿಪಡಿಸಲಾಗಿದೆ ಎಂದು ರಾಯಲ್ ಎನ್ ಫೀಲ್ಡ್ ಮೆಟಿಯೋರ್ ತಿಳಿಸಿದೆ.
ಬೆಲೆ ಎಷ್ಟು?
ರಾಯಲ್ ಎನ್ ಫೀಲ್ಡ್ ಮೆಟಿಯೋರ್ 350 ಬೈಕ್ ಗೆ 1.75 ಮತ್ತು 1.80 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬೆಲೆ ಇನ್ನೂ ಸ್ವಲ್ಪ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಕೂಡಲೇ ಭಾರತದ ಮಾರುಕಟ್ಟೆಗೆ ರಾಯಲ್ ಎನ್ ಫೀಲ್ಡ್ ಮೆಟಿಯೋರ್ ಲಗ್ಗೆ ಇಡಲಿದೆ.