ಬೆಂಗಳೂರು: ಮನೆ ಮುಂದೆ, ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ವರ್ತೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ತಿಬೆಲೆಯ ಅಸ್ಮತ್ ಖಾನ್ ಅಲಿಯಾಸ್ ಬುಲೆಟ್ ಖಾನ್, ಸಂತೋಷ್, ಮಂಜುನಾಥ್ ಬಂಧಿತರು.
ಆರೋಪಿಗಳ ಬಂಧನದಿಂದ ವರ್ತೂರು, ಸುದ್ದುಗುಂಟೆ ಪಾಳ್ಯ, ತಿಲಕ್‌ನಗರ, ಮೈಕೋ ಲೇಔಟ್‌ನಲ್ಲಿ ಎಸಗಿದ್ದ ಬೈಕ್ ಕಳವು ಪ್ರಕರಣಗಳು ಬೆಳಕಿಗೆ ಬಂದಿದ್ದು, 10 ರಾಯಲ್ ಎನ್‌ಫೀಲ್ಡ್, ಎರಡು ಕೆಟಿಎಂ, ಎರಡು ಬಜಾಜ್ ಪಲ್ಸರ್ ಸೇರಿ 30 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಆರೋಪಿಗಳು ಇತ್ತೀಚೆಗೆ ಕೊಡತಿ ಗೇಟ್ ಬಳಿ ಮೂರು ರಾಯಲ್ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಬರುವಾಗ ಗಸ್ತು ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದರು. ಅನುಮಾನದ ಮೇರೆಗೆ ಮೂವರನ್ನೂ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಬೈಕ್ ಕಳ್ಳರು ಎಂಬುದು ಗೊತ್ತಾಯಿತು. ಆರೋಪಿಗಳು ಈ ಹಿಂದೆ ಅತ್ತಿಬೆಲೆ, ಸೂರ್ಯಸಿಟಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪ ಸಂಬಂಧ ಜೈಲಿಗೆ ಹೋಗಿ ಜಾಮೀನು ಆಧಾರದಲ್ಲಿ ಬಿಡುಗಡೆಗೊಂಡಿದ್ದರು. ಬಳಿಕವೂ ಹಳೇ ಚಾಳಿ ಮುಂದುವರಿಸಿದ್ದರು.
ಸದ್ಯ, ಹ್ಯಾಂಡಲ್ ಲಾಕ್ ಮುರಿಯುವುದು ಸುಲಭ ಹಾಗೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಜನ ಬೇಗ ಖರೀದಿಸುತ್ತಾರೆ ಎಂಬ ಉದ್ದೇಶದಿಂದ ಅವುಗಳನ್ನೇ ಹೆಚ್ಚು ಕಳವು ಮಾಡುತ್ತಿದ್ದರು. ಕದ್ದ ಬೈಕ್‌ಗಳನ್ನು ಪರಿಚಿತರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.