Advertisement
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ 18.5 ಓವರ್‌ಗಳಲ್ಲಿ 128ಕ್ಕೆ ಆಲೌಟಾಯಿತು. ಇದನ್ನು ಬೆನ್ನತ್ತಿದ ಬೆಂಗಳೂರು 19.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು ಮಾತ್ರವಲ್ಲ 3 ವಿಕೆಟ್‌ಗಳ ಜಯ ಸಾಧಿಸಿತು.
ಪಂಜಾಬ್ ವಿರುದ್ಧದ ಬೌಲಿಂಗ್ ವೈಫಲ್ಯವನ್ನೆಲ್ಲ ಬೆಂಗಳೂರು ಈ ಪಂದ್ಯದಲ್ಲಿ ಹೋಗಲಾಡಿಸಿಕೊಂಡಿತು. ಬಹುಕೋಟಿಯ ಒಡೆಯ ವನಿಂದು ಹಸರಂಗ 20 ರನ್ನಿಗೆ 4 ವಿಕೆಟ್ ಉಡಾಯಿಸಿ ಆರ್‌ಸಿಬಿಗೆ ಮೇಲುಗೈ ಒದಗಿಸಿದರು. ಬಲಗೈ ಮಧ್ಯಮ ವೇಗಿ ಆಕಾಶ್ ದೀಪ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಕೆಕೆಆರ್ ಮೇಲೆ ಘಾತಕವಾಗಿ ಎರಗಿದರು. ಅಲ್ಲಿ 21 ವೈಡ್ ಎಸೆದಿದ್ದ ಆರ್‌ಸಿಬಿ ಬೌಲರ್, ಇಲ್ಲಿ ಎಸೆದದ್ದು ಒಂದೇ ಒಂದು ವೈಡ್!
Related Articles
Advertisement
ಕುಸಿತಕ್ಕೆ ಚಾಲನೆ: 4ನೇ ಓವರ್ ಎಸೆಯಲು ಬಂದ ಆಕಾಶ್ ದೀಪ್ ತಮ್ಮ ಮೊದಲ ಎಸೆತದಲ್ಲೇ ವೆಂಕಟೇಶ್ ಐಯ್ಯರ್ ಆವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಐಯ್ಯರ್ 14 ಎಸೆತಗಳಿಂದ ಕೇವಲ 10 ರನ್ ಮಾಡಿದರು (ಒಂದು ಬೌಂಡರಿ). ಮತ್ತೋರ್ವ ಓಪನರ್ ಅಜಿಂಕ್ಯ ರಹಾನೆ ಅವರನ್ನು ಸಿರಾಜ್ ಮುಂದಿನ ಓವರ್‌ನಲ್ಲಿ ಕೆಡವಿದರು. ರಹಾನೆ ಗಳಿಕೆ 10 ಎಸೆತಗಳಿಂದ 9 ರನ್.
6ನೇ ಓವರ್‌ನಲ್ಲಿ ಅಬ್ಬರಿಸಿದ ನಿತೀಶ್ ರಾಣಾ ವಿರುದ್ಧ ಆಕಾಶ್ ದೀಪ್ ಕೂಡಲೇ ಸೇಡು ತೀರಿಸಿಕೊಂಡರು. ಅವರ ಆಟ ಒಂದು ಬೌಂಡರಿ, ಒಂದು ಸಿಕ್ಸರ್‌ಗೆ ಸೀಮಿತಗೊಂಡಿತು. ವಿಲ್ಲಿ ಅಮೋಘ ಕ್ಯಾಚ್ ಮೂಲಕ ಗಮನ ಸೆಳೆದರು. ಪವರ್ ಪ್ಲೇ ಅವಧಿಯಲ್ಲಿ ಕೆಕೆಆರ್ 3 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿತ್ತು.
ಶ್ರೇಯಸ್ ಐಯ್ಯರ್ ವಿಫಲ: ನಾಯಕ ಶ್ರೇಯಸ್ ಐಯ್ಯರ್ ತಂಡದ ರಕ್ಷಣೆಗೆ ನಿಲ್ಲಬಹುದೆಂಬ ನಿರೀಕ್ಷೆ ಇತ್ತು. ಆದರೆ ಇದಕ್ಕೆ ಹಸರಂಗ ಅವಕಾಶ ಕೊಡಲಿಲ್ಲ. ಕೋಲ್ಕತ ನಾಯಕ ಬೆಂಗಳೂರು ನಾಯಕ ಡು ಪ್ಲೆಸಿಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಐಯ್ಯರ್ ಗಳಿಕೆ ಕೇವಲ 13 ರನ್. ಮುಂದಿನ ಎಸೆತದಲ್ಲೇ ಸ್ಯಾಮ್ ಬಿಲ್ಲಿಂಗ್ಸ್ ಬಲವಾದ ಲೆಗ್ ಬಿಫೋರ್ ಮನವಿಯಿಂದ ಪಾರಾದರು.
ಬಿಲ್ಲಿಂಗ್ಸ್ ಮತ್ತು ಸುನೀಲ್ ನಾರಾಯಣ್ ಸಿಡಿಯಲಾರಂಭಿಸಿದರೂ ಕ್ರೀಸ್ ಆಕ್ರಮಿಸಿಕೊಳ್ಳುವಲ್ಲಿ ವಿಫಲರಾದರು. ಒಂದು ಫೋರ್, ಒಂದು ಸಿಕ್ಸರ್ ಬಾರಿಸಿದ ನಾರಾಯಣ್ 12 ರನ್ ಮಾಡಿ ಹಸರಂಗ ಅವರಿಗೆ ವಿಕೆಟ್ ಒಪ್ಪಿಸಿದರು. ಮುಂದಿನ ಎಸೆತದಲ್ಲೇ ಶೆಲ್ಡನ್ ಜಾಕ್ಸನ್ ಕ್ಲೀನ್ ಬೌಲ್ಡ್. 9 ಓವರ್ ಮುಕ್ತಾಯಕ್ಕೆ ಕೆಕೆಆರ್‌ನ 6 ವಿಕೆಟ್‌ಗಳನ್ನು 67 ರನ್ನಿಗೆ ಉಡಾಯಿಸಿದ ಆರ್‌ಸಿಬಿ ಅಮೋಘ ಹಿಡಿತ ಸಾಧಿಸಿತ್ತು.
ಈ ನಡುವೆ ಆ್ಯಂಡ್ರೆ ರಸೆಲ್ ಡೇಂಜರಸ್ ಆಗಿ ಕಂಡುಬಂದರು. 3 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಆದರೆ ಹರ್ಷಲ್ ಪಟೇಲ್ ಮುಂದೆ ಇವರ ಆಟ ನಡೆಯಲಿಲ್ಲ. 18 ಎಸೆತಗಳಿಂದ 25 ರನ್ ಮಾಡಿದ ರಸೆಲ್ ಅವರದೇ ಕೋಲ್ಕತ ಸರದಿಯ ಅಗ್ರ ಸ್ಕೋರ್ ಆಗಿತ್ತು. 15ನೇ ಓವರ್‌ನಲ್ಲಿ ಕೆಕೆಆರ್‌ನ 100 ರನ್ ಪೂರ್ತಿಗೊಂಡಿತು. ಆದರೆ ಆಗಲೇ 9 ವಿಕೆಟ್ ಹಾರಿ ಹೋಗಿತ್ತು. ಅಂತಿಮ ವಿಕೆಟಿಗೆ ಒಟ್ಟುಗೂಡಿದ ಉಮೇಶ್ ಯಾದವ್-ವರುಣ್ ಚಕ್ರವರ್ತಿ 27 ರನ್ ಪೇರಿಸಿದರು.
ಸಂಕ್ಷಿಪ್ತ ಸ್ಕೋರು: ಕೋಲ್ಕತ 18.5 ಓವರ್, 128 (ಆಂಡ್ರೆ ರಸೆಲ್ 25, ವನಿಂದು ಹಸರಂಗ 20ಕ್ಕೆ 4, ಆಕಾಶ್ ದೀಪ್ 45ಕ್ಕೆ 3, ಹರ್ಷಲ್ ಪಟೇಲ್ 11ಕ್ಕೆ 2). ಬೆಂಗಳೂರು 19.2 ಓವರ್, 132/7 (ರುದರ್‌ಫೋರ್ಡ್ 28, ಅಹ್ಮದ್ 27, ಕಾರ್ತಿಕ್ 14, ಟಿಮ್ ಸೌದಿಗೆ 20ಕ್ಕೆ 3).