Advertisement

ಶೀಘ್ರ 500 ಜನರ ವಿರುದ್ಧ ರೌಡಿಶೀಟ್‌

06:47 PM Oct 30, 2020 | Suhan S |

ಕಲಬುರಗಿ: ನಗರ ಪೊಲೀಸ್‌ ಆಯುಕ್ತಾಲಯದ ವ್ಯಾಪ್ತಿಯಲ್ಲಿ ರೌಡಿ ಶೀಟರ್‌ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದ್ದು, ಶೀಘ್ರವೇ 500 ಜನ ಪುಡಿ ರೌಡಿಗಳು ಮತ್ತು ದುಷ್ಕರ್ಮಿಗಳು ರೌಡಿ ಶೀಟ್‌ ಗೆ ಸೇರಲಿದ್ದಾರೆ.

Advertisement

ಈಗಾಗಲೇ 1,429 ಮಂದಿ ಮೇಲೆ ರೌಡಿ ಶೀಟ್‌ ಇದ್ದು, ಅವರಲ್ಲಿ ಕೆಲ ರೌಡಿಗಳು ಅನಾರೋಗ್ಯದಿಂದ ಸಂಪೂರ್ಣ ಹಾಸಿಗೆ ಹಿಡಿದಿದ್ದಾರೆ. ಕೆಲವರು 60 ವರ್ಷಕ್ಕೂ ಮೇಲ್ಪಟ್ಟವರೂ ಇದ್ದಾರೆ. ಮತ್ತೆ ಕೆಲವರು ಅಪರಾಧ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಹೀಗಾಗಿ ಹಾಲಿ ರೌಡಿ ಶೀಟರ್‌ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಹಿರಿಯ ಪೊಲೀಸ್‌ ಅಧಿಕಾರಿಗಳು ಮುಂದಾಗಿದ್ದಾರೆ.

ರೌಡಿ ಶೀಟರ್‌ಗೆ ಸೇರ್ಪಡೆಯಿಂದ ಯಾವುದೇ ಕೃತ್ಯಗಳು ನಡೆದಾಗ ರೌಡಿಗಳ ಮೇಲೆ ನೇರ ನಿಗಾ ವಹಿಸಲು ಸಹಕಾರಿಯಾಗಲಿದೆ. ಆದ್ದರಿಂದ ಸದ್ಯ ಕುಕೃತ್ಯಗಳಿಂದ ದೂರು ಇರುವ ರೌಡಿ ಶೀಟರ್‌ ಗಳನ್ನು ಪಟ್ಟಿಯಿಂದ ಕೈಬಿಟ್ಟು, ನಿರಂತರವಾಗಿ ಅಪರಾಧ ಕೃತ್ಯದಲ್ಲಿ ತೊಡಗಿರುವ ಮತ್ತು ಆಗಾಗ್ಗೆ ಬಾಲ ಬಿಚ್ಚಿ ಸಾರ್ವಜನಿಕರ ನೆಮ್ಮದಿ ಹಾಳು ಮಾಡುತ್ತಿರುವ ಪುಡಿ ರೌಡಿಗಳನ್ನು ಹೊಸ ಪಟ್ಟಿಗೆ ಸೇರಲಾಗುತ್ತದೆ. ಈಗಾಗಲೇ ಆಯುಕ್ತಾಲಯದ ವ್ಯಾಪ್ತಿಯ ಎಲ್ಲ ಪೊಲೀಸ್‌ ಠಾಣೆಗಳಿಂದ 500 ಮಂದಿಯನ್ನು ಗುರುತಿಸಲಾಗಿದೆ. ಅವರೆನ್ನಲ್ಲ ಹೊಸ ರೌಡಿ ಶೀಟರ್‌ ಪಟ್ಟಿಗೆ ಸೇರಿಸಲು ತಯಾರಿ ನಡೆದಿದೆ ಎಂದು ಪೊಲೀಸ್‌ ಮೂಲಗಳು ಖಚಿತ ಪಡಿಸಿವೆ.

ಹೊಸದಾಗಿ ರೌಡಿ ಶೀಟ್‌ಗೆ ಗುರುತಿಸಲಾದ 500 ಮಂದಿ ಗಲ್ಲಿಗಳಲ್ಲಿನ ಪುಂಡ ಪೋಕರಿಗಳು, ರಸ್ತೆ ಬದಿ ನಿಂತು ಹೆದರಿಸಿ, ಬೆದರಿಸಿ ದುಷ್ಕೃತ್ಯಗಳನ್ನು ನಡೆಸುವವರು ಸೇರಿದ್ದಾರೆ. ಇವರನ್ನು ರೌಡಿ ಶೀಟರ್‌ಗೆ ಸೇರಿಸುವುದರಿಂದ ರೌಡಿಗಳನ್ನು ನಿಗ್ರಹಿಸಲು ಅನುಕೂಲವಾಗಲಿದೆ. ಸಮಾಘಾತುಕ ಕೃತ್ಯ ಮತ್ತು ಅನಗತ್ಯ ಉಪಟಳಕ್ಕೆ ತಡೆಯಲು ಸಾಧ್ಯವಾಗಲಿದೆ.

ಮೂರು ಹಂತದ ರೌಡಿಸಂ: ಕೊಲೆ ಯತ್ನ, ದರೋಡೆ ಯತ್ನ ಸೇರಿ ಹಲವು ರೀತಿಯ ಅಪರಾಧಗಳಲ್ಲಿ  ತೊಡಗಿಕೊಂಡಿರುವ ಆರೋಪಿಗಳು ಹೆಚ್ಚಾಗಿದ್ದು, ಕಾನೂನು-ಸುವ್ಯವಸ್ಥೆ ಬಿಗಿಗೊಳಿಸಲು ಒತ್ತು ನೀಡಲಿದೆ. ಸಕ್ರಿಯ ಪುಢಾರಿಗಳು ರೌಡಿ ಶೀಟರ್‌ ಪಟ್ಟಿಗೆ ಸೇರಿಸಲಾಗುವುದು. ಮೂರು ಹಂತದಲ್ಲಿ ರೌಡಿಗಳ ಲಿಂಕ್‌ ಇದ್ದು, ಅಪರಾಧಗಳನ್ನು ಮಟ್ಟ ಹಾಕಲು ರೌಡಿಗಳ ಲಿಂಕ್‌ಗೆ ಕತ್ತರಿ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ ಉಪ ಪೊಲೀಸ್‌ ಆಯುಕ್ತ ಡಿ.ಕಿಶೋರ್‌ ಬಾಬು.

Advertisement

ಕಲಬುರಗಿ ನಗರದಲ್ಲಿ ನೇರವಾಗಿ ಫೀಲ್ಡ್‌ಗೆ ಇಳಿಯುವ ನಿಜವಾದ ರೌಡಿಗಳುಇದ್ದಾರೆ. ಕೆಲವರು ತಾವು ತೆರೆ-ಮೆರೆಯಲ್ಲೇ ಕುಳಿತು ರೌಡಿಗಳನ್ನು ಬೆಳೆಸುವವರು ಹಾಗೂ ಅಪರಾಧಗಳಿಗೆ ಪ್ರಚೋದನೆ ನೀಡುವವರು. ಮತ್ತೂಂದಿಷ್ಟು ಬೆಳೆಯುವ ಹಂತದ ರೌಡಿಗಳು… ಹೀಗೆ ಮೂರು ಹಂತದಲ್ಲಿ ರೌಡಿಸಂ ನಡೆಯುತ್ತಿದೆ. ಈ ಮೂರು ಹಂತದ ರೌಡಿಸಂಅನ್ನು ನಿಯಂತ್ರಿಸಲು ಕಾರ್ಯ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಮತ್ತಿಬ್ಬರು ಗಡಿಪಾರು: ಮತ್ತೋರ್ವ ಲಿಸ್ಟ್‌ನಲ್ಲಿ :  ಹದ್ದು ಮೀರಿ ಅಪರಾಧ ಕೃತ್ಯಗಳನ್ನು ತೊಡಗಿರುವ ಮತ್ತಿಬ್ಬರು ರೌಡಿಗಳನ್ನು ಇತ್ತೀಚೆಗೆ ಗಡಿ ಪಾರು ಮಾಡಲಾಗಿದೆ. ಪೊಲೀಸ್‌ ಆಯುಕ್ತ ಎನ್‌.ಸತೀಶ್‌ಕುಮಾರ ಮತ್ತು ಉಪ ಪೊಲೀಸ್‌ ಆಯುಕ್ತ ಡಿ.ಕಿಶೋರ್‌ ಬಾಬು ಅವರು ಚರ್ಚಿಸಿ, ಶರಣು ಅಲಿಯಾಸ್‌

ಕೆಂಚ ಶಣ್ಯಾ ಮತ್ತು ವಿನೋದ್‌ ಸಿಂಗೆಯನ್ನು ಗಡಿಪಾರು ಆದೇಶ ಮಾಡಿದ್ದಾರೆ. ಕೆಂಚ ಶಣ್ಯಾನ  ವಿರುದ್ಧ ಏಳು ಅಪರಾಧ ಪ್ರಕರಣಗಳು ಮತ್ತು ಮತ್ತೂಂದು ಪ್ರಚೋದನೆ ಪ್ರಕರಣ ಇದ್ದು, ಇವನನ್ನು ಚಾಮರಾಜನಗರಕ್ಕೆ ಗಡಿಪಾರು ಮಾಡಲಾಗಿದೆ. ಅದೇ ರೀತಿ ವಿನೋದ್‌ ಸಿಂಗೆ ವಿರುದ್ಧ ಎಂಟು ಅಪರಾಧ ಪ್ರಕರಣಗಳು ಹಾಗೂ ನಾಲ್ಕು ಪ್ರತಿಬಂಧಕ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದವು. ಇವನನ್ನು ಉಡುಪಿ ಜಿಲ್ಲೆಗೆ ಗಡಿ ಪಾರುಗೊಳಿಸಲಾಗಿದೆ. ಅಲ್ಲದೇ, ಮತ್ತೋರ್ವನನ್ನೂ ಗಡಿಪಾರು ಮಾಡಲು ಈಗಾಗಲೇ ತೀರ್ಮಾನಿಸಲಾಗಿದೆ. ಆದಷ್ಟು ಬೇಗ ಅವನನ್ನು ಗಡಿ ಪಾರು ಮಾಡಲಾಗುವುದು ಎಂದು ಉಪ ಪೊಲೀಸ್‌ ಆಯುಕ್ತ ಡಿ.ಕಿಶೋರ್‌ ಬಾಬು ತಿಳಿಸಿದ್ದಾರೆ.

 

ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next