Advertisement

ಕಿಮ್ಸ್‌ ಗೆ ಅರವಳಿಕೆ ಕಾರ್ಯಸ್ಥಾನ ಯಂತ್ರಗಳ ಹಸ್ತಾಂತರ

12:07 PM Jun 28, 2022 | Team Udayavani |

ಹುಬ್ಬಳ್ಳಿ: ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ವಿದ್ಯಾನಗರವು ದಿ ರೋಟರಿ ಫೌಂಡೇಶನ್ಸ್‌ ಗ್ಲೋಬಲ್‌ ಗ್ರ್ಯಾಂಟ್‌ ಪ್ರೊಜೆಕ್ಟ್ ಅಡಿ ರೋಟರಿ ಡಿಸ್ಟ್ರಿಕ್ಟ್ ಕ್ಯಾಲಿಪೋರ್ನಿಯಾ ಹಾಗೂ ಸ್ಥಳೀಯ ರೋಟರಿ ಸದಸ್ಯರ ಧನಸಹಾಯದಿಂದ ಪಡೆದ ಅಂದಾಜು 28ಲಕ್ಷ ರೂ. ವೆಚ್ಚದ ಎರಡು ಅನಸ್ತೇಸಿಯಾ ವರ್ಕ್‌ಸ್ಟೇಶನ್ಸ್‌(ಅರವಳಿಕೆ ಕಾರ್ಯಸ್ಥಾನ)ಯಂತ್ರಗಳನ್ನು ಸೋಮವಾರ ಕಿಮ್ಸ್‌ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

Advertisement

ಕಿಮ್ಸ್‌ನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೋಟರಿ ಡಿಸ್ಟ್ರಿಕ್ಟ್ ಗವರ್ನರ್‌ ಗೌರೀಶ ಎಂ. ಧೋಂಡ ಹಾಗೂ ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ವಿದ್ಯಾನಗರ ಅಧ್ಯಕ್ಷೆ ಡಾ|ಮಹಿಮಾ ಎಂ.ದಂಡ ಅವರು ಕಿಮ್ಸ್‌ ನಿರ್ದೇಶಕ ಡಾ|ರಾಮಲಿಂಗಪ್ಪ ಅಂಟರತಾನಿ ಅವರಿಗೆ ಅರಿವಳಿಕೆ ಕಾರ್ಯಸ್ಥಾನ ಯಂತ್ರಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಡಾ| ಅಂಟರತಾನಿ, ರೋಟರಿ ಕ್ಲಬ್‌ ಸದಸ್ಯರು ಕಿಮ್ಸ್‌ಗೆ ನಿರಂತರ ನೆರವು ನೀಡುತ್ತ ಬಂದಿದ್ದರಿಂದ ಆಸ್ಪತ್ರೆಯ ಮೂಲ ಸೌಲಭ್ಯವು ಸಾಕಷ್ಟು ಸುಧಾರಣೆಗೊಂಡಿದೆ. ಕ್ಲಬ್‌ನವರು ಕೋವಿಡ್‌-19ರ ಸಂದರ್ಭದಲ್ಲಿ ಬಹಳಷ್ಟು ವೈದ್ಯಕೀಯ ಉಪಕರಣಗಳನ್ನು ಕೊಟ್ಟಿದ್ದಾರೆ. ಈಗ ಕೊಟ್ಟಿರುವ ಅನಸ್ತೇಸಿಯಾ ವರ್ಕ್‌ಸ್ಟೇಶನ್‌ ಅತ್ಯಾಧುನಿಕವಾಗಿದ್ದು, ರೋಗಿಗಳ ಆರೋಗ್ಯ ರಕ್ಷಣೆಯಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸಲಿದೆ. ಶಸ್ತ್ರಚಿಕಿತ್ಸೆ ಕೊಠಡಿ ಹಾಗೂ ಸೂಪರ್‌ ಸ್ಪೆಶಾಲಿಟಿ ವಿಭಾಗದಲ್ಲಿ ಇದು ಬಳಕೆಯಾಗಲಿದೆ. ಇವನ್ನು ಕಾಲಕಾಲಕ್ಕೆ ಸೂಕ್ತ ನಿರ್ವಹಣೆ ಮಾಡಿ 10-15 ವರ್ಷಗಳ ಕಾಲ ಬಳಸುವ ಹಾಗೂ ದಾನಿಗಳು ಕೊಟ್ಟಿರುವ ಉಪಕರಣಗಳನ್ನೆಲ್ಲ ಸಮರ್ಪಕವಾಗಿ ಸುಮಾರು 10 ವರ್ಷಗಳ ಕಾಲ ಬಳಸುವ ಉದ್ದೇಶ ಹೊಂದಿದ್ದೇವೆ. ಕಳೆದ 3 ವರ್ಷಗಳಲ್ಲಿ ಕಿಮ್ಸ್‌ 20ಕ್ಕೂ ಹೆಚ್ಚು ಮಾಡೂಲರ್‌ ಒಟಿಸಿ ಹೊಂದಿದೆ. ನಿಮ್ಮೆಲ್ಲರ ಸಹಕಾರ ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎಂದರು.

ಅತಿಥಿಯಾಗಿ ಮಾತನಾಡಿದ ರೋಟರಿ ಡಿಸ್ಟ್ರಿಕ್ಟ್ ಗವರ್ನರ್‌ ಗೌರೀಶ ಧೋಂಡ, ರೋಟರಿಯು ಕಿಮ್ಸ್‌ನ ಒಂದು ಭಾಗವಾಗಿದ್ದು, ದಾನಿಗಳ ನೆರವಿನಿಂದ ಸಾಮಾಜಿಕ ಸೇವಾ ಕಾರ್ಯ ಮಾಡುತ್ತ ಬಂದಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಸ್ವತ್ಛ ಶೌಚಾಲಯ ನಿರ್ಮಾಣ, ಕುಡಿಯುವ ನೀರು ಸೌಲಭ್ಯ ಕಲ್ಪಿಸಲಾಗುತ್ತಿದೆ. ಕೋವಿಡ್‌ ಸಂದರ್ಭದಲ್ಲಿ ಮೃತಪಟ್ಟವರ ಪತ್ನಿಯರಿಗೆ ಗೋವಾದಲ್ಲಿ 20 ಇ-ಆಟೋರಿಕ್ಷಾಗಳನ್ನು ಶೇ.3ರ ದರದಲ್ಲಿ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಕರ್ನಾಟಕ-ಮಹಾರಾಷ್ಟ್ರದಲ್ಲೂ ಅನುಷ್ಠಾನ ಗೊಳಿಸಲಾಗುವುದು. ಕಿಮ್ಸ್‌ಗೆ ಮುಂದೆಯೂ ಅವಶ್ಯಕ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ರೋಟರಿಯ ಮಾಜಿ ಡಿಸ್ಟ್ರಿಕ್ಟ್ ಗವರ್ನರ್‌ ಮಹೇಶ ರಾಯ್ಕರ, ಲೆಕ್ಕ ಪರಿಶೋಧಕ ಡಾ|ಎನ್‌ .ಎ. ಚರಂತಿಮಠ, ಕಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ|ಅರುಣಕುಮಾರ ಸಿ., ವೈದ್ಯಕೀಯ ಉಪ ಅಧೀಕ್ಷಕ ಡಾ| ರಾಜಶೇಖರ ದ್ಯಾಬೇರಿ, ಪ್ರಾಚಾರ್ಯ ಡಾ|ಈಶ್ವರ ಹೊಸಮನಿ, ಡಾ|ಮಾಧುರಿ ಕುರಡಿ, ಪ್ರತಿಮಾ ಧೋಂಡ, ಕ್ಲಬ್‌ನ ಕಾರ್ಯದರ್ಶಿ ಜಯಶ್ರೀ ಜಾಧವ ಹಾಗೂ ಸದಸ್ಯರು ಮೊದಲಾದವರಿದ್ದರು.

Advertisement

ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ವಿದ್ಯಾನಗರ ವತಿಯಿಂದ ಇಬ್ಬರು ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಮೂವರು ವಿದ್ಯಾರ್ಥಿನಿಯರಿಗೆ ಬೈಸಿಕಲ್‌, ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ಮಿಡ್‌ಟೌನ್‌ ವತಿಯಿಂದ ಇಬ್ಬರಿಗೆ ಎಐ ವಿಷನ್‌ ಸ್ಮಾರ್ಟ್‌ಗ್ಲಾಸೆಸ್‌ ಕೊಡುಗೆಯಾಗಿ ನೀಡಲಾಯಿತು. ಕ್ಲಬ್‌ನ ಅಧ್ಯಕ್ಷೆ ಡಾ|ಮಹಿಮಾ ಎಂ.ದಂಡ ಸ್ವಾಗತಿಸಿದರು. ಸಂಜಯ ಶೆಟ್ಟಿ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next