Advertisement
ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡಿದ್ದ ರೋಷನ್ ಬೇಗ್ ಅವರನ್ನು ಹೈ ಕಮಾಂಡ್ ಸೂಚನೆ ಮೇರೆಗೆ ಅಮಾನತು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ, ತಮ್ಮ ಅಮಾನತ್ತಿನ ಹಿಂದೆ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂದು ರೋಷನ್ ಬೇಗ್ ಆರೋಪ ಮಾಡಿದ್ದಾರೆ.
Related Articles
Advertisement
ಸಿದ್ದರಾಮಯ್ಯನವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಅವರನ್ನು ಮುಂದಿಟ್ಟುಕೊಂಡು ಪಕ್ಷವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಭಾವನೆ ಕಾಂಗ್ರೆಸ್ಸಿಗರಲ್ಲಿ ಮೂಡಿದೆ. ಅದೇ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರಿಗೆ ನೀಡಲಾಗಿರುವ ಸರ್ಕಾರದ ಸಮನ್ವಯ ಸಮಿತಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಎರಡು ಹುದ್ದೆಗಳಲ್ಲಿ ಒಂದನ್ನು ಬೇರೆಯವರಿಗೆ ನೀಡಬೇಕೆಂಬ ಒತ್ತಡವನ್ನು ಪಕ್ಷದ ಹಿರಿಯ ನಾಯಕರು ಹೈಕಮಾಂಡ್ ಮುಂದೆ ಇಟ್ಟಿದ್ದರು.
ಆದರೆ, ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಿ, ತಮ್ಮ ವಿರುದ್ಧದ ಎಲ್ಲ ಆರೋಪಗಳಿಗೆ ಸ್ಪಷ್ಟನೆ ನೀಡಿ, ದಿನೇಶ್ ಗುಂಡೂರಾವ್ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಉಳಿಸಿಕೊಂಡು ಉಳಿದ ಪದಾಧಿಕಾರಿಗಳನ್ನು ವಿಸರ್ಜಿಸುವ ಮೂಲಕ ಪಕ್ಷವನ್ನು ಮತ್ತಷ್ಟು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಇದು ಮೂಲ ಕಾಂಗ್ರೆಸ್ಸಿಗರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ರೋಷನ್ ಬೇಗ್ ಅವರು ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿ ಆರೋಪ ಮಾಡಿದ್ದರು. ರಮೇಶ್ ಜಾರಕಿಹೊಳಿ ಪ್ರಕರಣಕ್ಕೂ, ಬೇಗ್ ಪ್ರಕರಣಕ್ಕೂ ವ್ಯತ್ಯಾಸ ಇದೆ. ನಾಯಕರ ನಡುವೆ ಸಾಕಷ್ಟು ವ್ಯತ್ಯಾಸ ಇರಬಹುದು. ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು. ವೈಯಕ್ತಿಕವಾಗಿ ವಾಗ್ಧಾಳಿ ನಡೆಸುವುದು ಸರಿಯಲ್ಲ.-ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ