Advertisement
ಹೆಣ್ಣನ್ನು ಹೂವಿಗೆ ಹೋಲಿಸಿ, ಹಾಡಿಬಿಟ್ಟಿದೆ ಈ ಜಗತ್ತು. ಆಕೆಯ ರೂಪ ಲಾವಣ್ಯ, ನಾಚಿಕೆ, ಥಳಕು- ಬಳುಕು, ನಸುನಗುವೆಲ್ಲವೂ ಹೂವಿನಲ್ಲೂ ಪಡಿಯಚ್ಚಾಗಿರುವುದರಿಂದ ಇಂಥ ಉಪಮೆ ಹುಟ್ಟಿಕೊಂಡಿತೇನೋ. ಅದೇ ಹೂವಿನಂಥ ಹೆಣ್ಣಿಗೆ ಹೂವೇ ಜೀವವಾದರೆ? ನಿತ್ಯ ಪಿಸುಗುಡಲು ಆ ಹೂವೇ ಜತೆಯಾದರೆ? ಆಕೆಗೆ ಬೀಳುವ ಕನಸು, ಪ್ರತಿಕ್ಷಣದ ಕನವರಿಕೆ, ಬದುಕಿನ ಪರಮಗುರಿ, ಒಡನಾಡಿ, ಜೀವಸಂಗಾತಿಗಳೆಲ್ಲ ಹೂವೇ ಆಗಿಬಿಟ್ಟರೆ, ಆ ಹೆಣ್ಣನ್ನು ಯಾವ ರೂಪಕದಲ್ಲಿ ತೂಗೋಣ?
ಪುಷ್ಪಾ, ಶಿವಮೊಗ್ಗದ ಸಾಗರದವರು. ಮದುವೆಯಾದ ಹೊಸತರಲ್ಲಿ ಪತಿಯ ಜೊತೆ ಬೆಂಗಳೂರಿಗೆ ಬಂದಾಗ ಇಲ್ಲಿನ ಜನಸಾಗರ ಕಂಡು ಹೇಗೋ ಏನೋ ಎಂದು ಆತಂಕಪಟ್ಟಿದ್ದರಂತೆ. ಚಿಕ್ಕಂದಿನಿಂದಲೂ ಸಸ್ಯ, ಹೂವು ಅಂದರೆ ವಿಶೇಷ ಪ್ರೀತಿ ಮತ್ತು ಸೆಳೆತ. ಅಮ್ಮ ಮತ್ತು ಅಜ್ಜಿ ಇಬ್ಬರೂ ಮನೆಯ ಸುತ್ತಮುತ್ತ ತರಕಾರಿ ಮತ್ತು ಹೂವಿನ ಗಿಡಗಳನ್ನು ಬೆಳೆಸುವುದನ್ನು ನೋಡಿಕೊಂಡೇ ಬೆಳೆದವರು ಪುಷ್ಪಾ. ಹಚ್ಚಹಸುರನ್ನೇ ಹಾಸಿ ಹೊದ್ದಿರುವ ಮಲಾ°ಡಿನಿಂದ ಬೆಂಗಳೂರಿನಂಥ ಕಾಂಕ್ರೀಟ್ ಕಾಡಿಗೆ ಕಾಲಿಟ್ಟವರು, ಈಗ ತಮ್ಮ ಮನೆಯ ಪರಿಸರದಲ್ಲೇ ಪುಟ್ಟ ಮಲಾ°ಡನ್ನು ಸೃಷ್ಟಿಸಿಕೊಂಡಿದ್ದಾರೆ.
Related Articles
ಈ ದಿನ ಪುಷ್ಪಾ ಅವರು ದಾಸವಾಳ ಹೂಗಳ ಕುರಿತು ಎಷ್ಟೆಲ್ಲಾ ತಿಳಿದುಕೊಂಡಿರಬಹುದು. ಇವೆಲ್ಲವನ್ನೂ ಕಲಿತಿದ್ದರ ಹಿಂದೆ ಸ್ವಾರಸ್ಯಕರ ಕತೆಯಿದೆ. ದಶಕಗಳ ಹಿಂದೆ ದಾಸವಾಳವನ್ನು ಹೈಬ್ರಿಡ್ ಮಾಡುವುದರ ಬಗ್ಗೆ ಮಾರ್ಗದರ್ಶನ ಮಾಡಲು ಯಾರೂ ಇರಲಿಲ್ಲ. ಅಲ್ಲದೆ ಇಂಟರ್‌ನೆಟ್‌ನಲ್ಲಿ ಅವರಿಗೆ ಬೇಕಾದ ಮಾಹಿತಿಯೂ ಸಿಗುತ್ತಿರಲಿಲ್ಲ. ಆ ಸಮಯದಲ್ಲಿ ಅವರ ನೆರವಿಗೆ ಬಂದಿದ್ದು ಯಾಹೂ ಚಾಟ್ ಗ್ರೂಪ್‌ಗ್ಳು. ಈಗಿನವರಿಗೆ ಯಾಹೂ ಚಾಟ್ ಗ್ರೂಪ್‌ಗ್ಳ ಬಗ್ಗೆ ಗೊತ್ತಿರುವುದೇ ಅನುಮಾನ. ಈಗ ಸೋಷಿಯಲ್ ಮೀಡಿಯಾ ತುಂಬಾ ಬೆಳೆದಿದೆ. ಬೇಕೆಂದವರನ್ನು, ಬೇಕಾದ ಸಮಯದಲ್ಲಿ ಸಂಪರ್ಕಿಸಬಹುದು. ಆದರೆ, ಹಿಂದೆ ಹಾಗಿರಲಿಲ್ಲ. ಇಂದು ವಾಟ್ಸಾಪ್ ಗ್ರೂಪ್‌ಗ್ಳಿರುವಂತೆ ಆಗೆಲ್ಲಾ ವಿವಿಧ ಆಸಕ್ತಿ, ಕ್ಷೇತ್ರಕ್ಕೆ ಸಂಬಂಧಿಸಿದ ಯಾಹೂ ಗ್ರೂಪ್‌ಗ್ಳಿರುತ್ತಿದ್ದವು. ಅಲ್ಲಿ ಆಯಾ ವಿಷಯಕ್ಕೆ ಸಂಬಂಧಿಸಿದ ಚರ್ಚೆಗಳು ಏರ್ಪಡುತ್ತಿದ್ದವು. ದೇಶ ವಿದೇಶಗಳಿಂದ ದಾಸವಾಳ ಪರಿಣತರು ತಮ್ಮ ಪ್ರಯೋಗಗಳನ್ನು ಹಂಚಿಕೊಳ್ಳುತ್ತಿದ್ದರು. ಇಲ್ಲಿ ಸಿಕ್ಕವರೇ ಪುಷ್ಪಾ ಅವರಿಗೆ ಗುರುಗಳಾಗಿದ್ದಾರೆ. ಇಲ್ಲೇ ಅವರಿಗೆ ಅಂತಾರಾಷ್ಟ್ರೀಯ ದಾಸವಾಳ ಸಂಘದ ಕುರಿತು ತಿಳಿದಿದ್ದು.
Advertisement
ಹೂವೇ ನಿನ್ನ ಹೆಸರೇನು?ತಾವು ಸೃಷ್ಟಿಸಿದ ತಳಿಗಳಿಗೆ ಹೆಸರು ನೀಡಬೇಕಾದ್ದು ಸಂಘದ ನಿಯಮ. ಹೂವಿನ ಗುಣಲಕ್ಷಣ, ಸ್ವಭಾವ, ಬಣ್ಣ ಮುಂತಾದ ಮಾಹಿತಿಗಳನ್ನಾಧರಿಸಿ ಪುಷ್ಪಾ ಅವರು ತಮ್ಮ 200ಕ್ಕೂ ಹೆಚ್ಚಿನ ಹೈಬ್ರಿಡ್ ದಾಸವಾಳ ಹೂಗಳಿಗೆ ನಾಮಕರಣ ಮಾಡಿದ್ದಾರೆ. ಅವರೇ ಹೇಳುವ ಹಾಗೆ ಕೆಲವೊಂದು ದಾಸವಾಳ ಹೂಗಳನ್ನು ನೋಡಿದಾಗ ಮನಸ್ಸಿನಲ್ಲಿ ಭಾವನೆ ಮೂಡುತ್ತದೆ. ಅದನ್ನಾಧರಿಸಿಯೂ ಹೆಸರಿಟ್ಟಿದ್ದಾರೆ. ಅಮೆರಿಕದ ದಾಸವಾಳ ಪರಿಣತ ಬಾಬ್ ಕ್ಯಾರೆನ್ ಅವರು ತಮ್ಮ ಕಲಿಕೆಗೆ ನೀಡಿದ ನೆರವಿನ ನೆನಪಿಗೆ ಒಂದು ಹೂವಿಗೆ ಅವರ ಹೆಸರನ್ನೇ ಇಟ್ಟಿರೋದು ವಿಶೇಷ. ಪುಷ್ಪಾ ಅವರು ಒಂದು ಹೂವಿಗೆ “ಇಂಡಿಯನ್ ಬ್ರೈಡ್’ ಅಂತ ಹೆಸರಿಟ್ಟಿದ್ದಾರೆ. ಯಾಕೆಂದರೆ ಆ ಹೂವು ಸದಾ ಬಾಡಿರುವಂತಿರುತ್ತದೆ, ನಾಚಿ ತಲೆತಗ್ಗಿಸಿರುವ ಮದುಮಗಳ ಹಾಗೆ!! ತಾವೇ ನೀರುಣಿಸಬೇಕು…
ಬೀಜ ಮೊಳಕೆಯೊಡೆದು ಹೂ ಬಿಡೋಕೆ ಸುಮಾರು ಎಂಟು ತಿಂಗಳಿಂದ ಮೂರು ವರ್ಷಗಳವರೆಗೆ ಸಮಯ ಬೇಡುತ್ತದೆ. ಹೀಗಾಗಿ ತಾಳ್ಮೆ ಅತ್ಯಗತ್ಯ. ಮೊತ್ತ ಮೊದಲ ಬಾರಿ ತನ್ನ ಪ್ರಯೋಗ ಯಶಸ್ವಿಯಾಗಿ ಹೊಬಿಟ್ಟ ಘಳಿಗೆ ಇನ್ನೂ ಪುಷ್ಪಾ ಅವರ ಮನದಲ್ಲಿ ಹಸಿರಾಗಿದೆ. ಈ ಪರಿ ತಾಳ್ಮೆ ಬೇಡುವ ಈ ಹವ್ಯಾಸ ಎಲ್ಲಾ ಬಾರಿಯೂ ಯಶಸ್ವಿಯಾಗುವುದಿಲ್ಲ. ನೂರರಲ್ಲಿ ಫಲ ಕೊಡೋದು ಬರೀ ಮೂರೋ ನಾಲ್ಕೋ ದಾಸವಾಳ ಹೂಗಳಷ್ಟೇ. ಕ್ರಿಮಿಗಳ ಕಾಟ, ವೈರಸ್ ಮುಂತಾದ ಸವಾಲುಗಳು ಇದ್ದಿದ್ದೇ. ಸ್ವಂತ ಮಗನಿಗೇ ಊಟ ಬಡಿಸುವಷ್ಟು ಪ್ರೀತಿಯಿಂದ ತಾವು ಬೆಳೆಸಿದ ಅಷ್ಟೂ ಗಿಡಗಳಿಗೆ ಪುಷ್ಪಾ ಅವರು ಸ್ವತಃ ನೀರುಣಿಸುತ್ತಾರೆ. ಬೇರೆ ಯಾರಿಗೂ ಅವಕಾಶ ಕೊಡುವುದಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಇತರರಿಗೆ ಅವಕಾಶ! ದಾಸವಾಳಕ್ಕೆ ದಾಸಿಯಾಗಿ…
ಬೆಂಗಳೂರಿನ ಕಾಡುಬೀಸನಹಳ್ಳಿಯಲ್ಲಿರುವ ಮನೆಯಲ್ಲಿ ಪುಷ್ಪಾ ಅವರು ಒಂಚೂರು ಜಾಗವನ್ನೂ ಬಿಡದಂತೆ ದಾಸವಾಳ ಬೆಳೆಸಿದ್ದಾರೆ. ಬರಿ ದಾಸವಾಳವಷ್ಟೇ ಅಲ್ಲ, ಮನೆಯ ಸುತ್ತಮುತ್ತ ಹೊಂಗೆ, ಅಶೋಕ ಮುಂತಾದ ಮರಗಳನ್ನೂ ಬೆಳೆಸಿದ್ದಾರೆ. ಆಸಕ್ತರಿಗೆ ಈ ಮರದ ಬೀಜಗಳನ್ನು ನೀಡಿ ಇತರರೂ ಮರ ಬೆಳೆಸಲು ಪ್ರೋತ್ಸಾಹ ನೀಡುತ್ತಿದ್ದಾರೆ. ಪರಿಸರವನ್ನು ಪ್ರೀತಿಸುವ, ಬೆಳೆಸುವ ಪುಷ್ಪಾ ಥರದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುಬಿಟ್ಟರೆ ಎಲ್ಲಾ ಸಿಟಿಗಳೂ ಗಾರ್ಡನ್ ಸಿಟಿಯಾಗುವುದರಲ್ಲಿ ಸಂಶಯವಿಲ್ಲ. ಅಮೆರಿಕದಿಂದ ಹಾರಿಬಂದ ದಾಸವಾಳ!
ಹೈಬ್ರಿಡ್ ದಾಸವಾಳ ಜಗತ್ತಿನಲ್ಲಿ ಅತಿ ದೊಡ್ಡ ಹೆಸರು ಅಮೆರಿಕದ “ಬ್ಯಾರಿ ಶುÉಟರ್’ ಅವರದು. ನನ್ನದೇನೇ ಪ್ರಶ್ನೆಗಳಿದ್ದರೂ, ಅನುಮಾನಗಳಿದ್ದರೂ ಆ ಹಿರಿಯರು ಒಡನೆಯೇ ಪರಿಹರಿಸಿಬಿಡುತ್ತಿದ್ದರು. ಅವರು ಬಿಗ್ ಹೈಬ್ರಿಡೈಝರ್ ಎಂದೇ ಪ್ರಖ್ಯಾತರು. ನನ್ನ ಕೆಲಸದ ಕುರಿತು ಅವರಿಗೆ ಮೆಚ್ಚುಗೆಯಿತ್ತು. 22 ಜೂನ್ 2014ರಲ್ಲಿ ಅವರು ತೀರಿಕೊಂಡರು. ತಾನು ಕಣ್ಣುಚ್ಚುತ್ತೇನೆಂದು ಅವರಿಗೆ ಮುಂಚೆಯೇ ಗೊತ್ತಿತ್ತು ಅಂತ ಅನ್ನಿಸುತ್ತೆ, ಸಾಯುವುದಕ್ಕೆ ಕೆಲ ತಿಂಗಳುಗಳ ಮುಂಚೆ ಅವರು “ಐ ಆ್ಯಮ್ ಗಿವಿಂಗ್ ಎವರಿಥಿಂಗ್ ಟು ಯೂ’ ಅಂತ ಹೇಳಿ ತಾವು ಸಂಗ್ರಹಿಸಿಟ್ಟಿದ್ದ ಅಷ್ಟೂ ದಾಸವಾಳ ಬೀಜಗಳನ್ನು ನನಗೆ ಕಳುಹಿಸಿಕೊಟ್ಟಿದ್ದರು. ಅವುಗಳಿಗೆಲ್ಲಾ ಬೆಲೆ ಕಟ್ಟಲಾಗದು. ಜೀವಮಾನದ ಶ್ರಮ ಅದು. ಅದಕ್ಕಿಂತ ದೊಡ್ಡ ಪ್ರಶಸ್ತಿ, ಬಿರುದು, ಬಾವಲಿ ಏನಿದೆ? ಅವರೆಲ್ಲೋ ಇದ್ದವರು, ನಾನು ಜಗತ್ತಿನ ಇನ್ನೊಂದು ಬದಿಯಲ್ಲಿದ್ದವಳು. ಅವರಿಗೆ ನನ್ನಲ್ಲಿ ಏಕೆ ಅಷ್ಟು ವಿಶ್ವಾಸವೋ ನಾ ಕಾಣೆ! ದಾಸವಾಳದ ಆಸಕ್ತಿ ನನ್ನನ್ನು ಜಗತ್ತಿನ ಮೂಲೆಗೆ ಕೊಂಡೊಯ್ಯುತ್ತದೆ, ನೂರಾರು ಜನರನ್ನು ಪರಿಚಯಿಸುತ್ತದೆ ಎಂದೆಲ್ಲಾ ಎಣಿಸಿರಲಿಲ್ಲ..- ಹೀಗಂತ ತಮ್ಮ ದಾಸವಾಳದ ನಂಟಿನ ಕತೆಯನ್ನು ತೆರೆದಿಡುತ್ತಾರೆ ಪುಷ್ಪಾ. ಹರ್ಷವರ್ಧನ್ ಸುಳ್ಯ