Advertisement

ಆರ್ಥಿಕತೆ ಪುನಃಶ್ಚೇತನಕ್ಕೆ ರಾಜ್ಯಕ್ಕೆ ಬರಲಿದೆ ರೋಸ್‌ ಟೂರಿಸಂ!

11:39 PM Feb 09, 2021 | Team Udayavani |

ಬೆಂಗಳೂರು : ಕೋವಿಡ್‌-19 ಹಿನ್ನೆಲೆಯಲ್ಲಿ ಕುಸಿದ ಆರ್ಥಿಕತೆ ಪುನಃಶ್ಚೇತನಕ್ಕೆ ವೈನ್‌ ಅಥವಾ ಅಗ್ರೋ ಟೂರಿಸಂ ಮಾದರಿಯಲ್ಲೇ ಈಗ “ರೋಸ್‌ ಟೂರಿಸಂ’ ಪರಿಕಲ್ಪನೆ ಮುನ್ನೆಲೆಗೆ ಬಂದಿದ್ದು, ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ (ಐಐಎಚ್‌ಆರ್‌) ಇದಕ್ಕೊಂದು ಉತ್ತಮ ವೇದಿಕೆ ಸಜ್ಜುಗೊಳಿಸಿದೆ.

Advertisement

ಹಲವು ಪ್ರಕಾರಗಳ ಗುಲಾಬಿ ತಳಿಗಳನ್ನು ಐಐಎಚ್‌ಆರ್‌ ಅಭಿವೃದ್ಧಿಪಡಿಸಿದ್ದು, ಸಾವಯವ ಪದ್ಧತಿಯಲ್ಲಿ ಹಾಗೂ ಪಾಲಿಹೌಸ್‌ ಮತ್ತು ಮುಕ್ತವಾಗಿ ಬೆಳೆಯಬಹುದಾದ ವಿಭಿನ್ನ ಗುಣಗಳನ್ನೂ ಇವು ಒಳಗೊಂಡಿವೆ. ಆ ಹೂವುಗಳನ್ನು ಕೇಂದ್ರವಾಗಿಟ್ಟುಕೊಂಡು, ಅದಕ್ಕೆ ಪೂರಕ ಅಂಶಗಳನ್ನು ಒಳಗೊಂಡ ಪ್ರವಾಸೋದ್ಯಮ ರೂಪಿಸುವ ಪರಿಕಲ್ಪನೆಯನ್ನು ತಜ್ಞರು ಮುಂದಿಟ್ಟಿದ್ದಾರೆ.

ರಾಜ್ಯದಲ್ಲಿ ಟೂರಿಸಂಗೆ ಸಾಧ್ಯತೆ ಎಲ್ಲಿ?
ಮೂಲತಃ ಕರ್ನಾಟಕವು ಗುಲಾಬಿ ಬೆಳೆಗೆ ಹೇಳಿಮಾಡಿಸಿದ್ದೂ ಆಗಿದೆ. ರೈತ ಉತ್ಪಾದಕ ಸಂಘ (ಎಫ್ಪಿಒ)ಗಳು ಕೂಡ ಇಲ್ಲಿ ಹೆಚ್ಚು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಮಡಿಕೇರಿ, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಪ್ರದೇಶಗಳು, ಶಿವಮೊಗ್ಗ ಮತ್ತು ಬೆಳಗಾವಿ ಆಯ್ದಭಾಗಗಳು ಗುಲಾಬಿ ಬೆಳೆಯಲು ಹೇಳಿಮಾಡಿಸಿದ್ದಾಗಿದೆ. ಇಲ್ಲಿ ರೋಸ್‌ ಟೂರಿಸಂ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ,

ಇದನ್ನೂ ಓದಿ:ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

ಒಂದು ವೇಳೆ ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ, ದೇಶದಲ್ಲಿ ಇದು ಮೊದಲ ಪ್ರಯೋಗ ಆಗಲಿದೆ. ಇದರೊಂದಿಗೆ ಕೇವಲ ಹೂವು ಮಾರಾಟಕ್ಕೆ ಸೀಮಿತವಾಗಿರುವ ಬೆಳೆಗಾರರ ಅದೃಷ್ಟದ ಬಾಗಿಲು ತೆರೆಯಲಿದೆ. ಆಗ ರೋಸ್‌ ಗಾರ್ಡನ್‌ ವೀಕ್ಷಣೆಗೆ ಊಟಿ, ಚಂಡೀಗಢಕ್ಕೆ ಹೋಗುವ ಜನ ರೋಸ್‌ ಟೂರಿಸಂಗೆ ರಾಜ್ಯಕ್ಕೆ ಬರುತ್ತಾರೆ. ಆ ಮೂಲಕ ಹೊಸ ವಿಷಯಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಆವಿಷ್ಕಾರಗಳಿಗೂ ಇದು ದಾರಿ ಆಗಲಿದೆ. ಇದಕ್ಕೊಂದು ಪೂರಕ ವೇದಿಕೆಯನ್ನು ವಿವಿಧ ಪ್ರಕಾರದ ತಳಿಗಳ ರೂಪದಲ್ಲಿ ಐಐಎಚ್‌ಆರ್‌ ಸಿದ್ಧಪಡಿಸಿದೆ ಎಂದು ಪ್ರಧಾನ ವಿಜ್ಞಾನಿ ಡಾ| ಪಿ. ತೇಜಸ್ವಿನಿ ತಿಳಿಸಿದರು.

Advertisement

ಇದನ್ನೂ ಓದಿ:ಆಸ್ಟ್ರೇಲಿಯನ್‌ ಓಪನ್ :‌ ಮೊದಲ ಸುತ್ತಿನಲ್ಲೇ ಸುಮಿತ್‌ ನಾಗಲ್‌ಗೆ ಸೋಲು

ಬೇಡಿಕೆಯ ಬೆಳೆ
ಗುಲಾಬಿಯು ಅತ್ಯುನ್ನತ ಮಟ್ಟದ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಬೆಳೆಯಾಗಿದೆ. ಗಿಡ ನೆಟ್ಟ ದಿನದಿಂದ ಆರು ತಿಂಗಳಲ್ಲಿ ಇಳುವರಿ ನೀಡಲು ಶುರುವಾಗುತ್ತದೆ. ಐಐಎಚ್‌ಆರ್‌ ಅಭಿವೃದ್ಧಿಪಡಿಸಿದ ತಳಿಗಳಲ್ಲಿ ಈ ಬೆಳೆಗೆ ಕೀಟಗಳ ಹಾವಳಿ ಕೂಡ ಕಡಿಮೆ ಇರುವುದರಿಂದ ರೈತರಿಗೆ ಕಿರಿಕಿರಿ ಇರುವುದಿಲ್ಲ. ಉತ್ತಮ ನಿರ್ವಹಣೆ ಮಾಡಿದರೆ, ಹತ್ತು ವರ್ಷಗಳ ಕಾಲ ನಿರಂತರವಾಗಿ ಇಳುವರಿ ಬರಲಿದೆ ಎಂದೂ ಡಾ|ತೇಜಸ್ವಿನಿ ತಿಳಿಸಿದರು.

ಹೈಎಂಡ್‌ ಮಾರುಕಟ್ಟೆಯನ್ನು ಇದು ಪ್ರವೇಶಿಸುವುದರಿಂದ ಸಹಜವಾಗಿ ರೈತರಿಗೆ ಹೆಚ್ಚು ಲಾಭದಾಯಕ ಆಗಲಿದೆ. ಕೊರೊನಾ ಹಾವಳಿಯಿಂದ ಹಳ್ಳಿಗಳಿಗೆ ಮರುವಲಸೆ ಆಗಿರುವ ಯುವಕರಿಗೂ ಇದು ಆಕರ್ಷಕವಾಗಿ ಕಾಣುತ್ತದೆ. ಅಷ್ಟೇ ಅಲ್ಲ, ಗ್ರಾಮೀಣ ಮತ್ತು ನಗರ ಪ್ರದೇಶವನ್ನು ಬೆಸೆಯಲು ಇದು ಉತ್ತಮ ಸೇತುವೆಯೂ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next