ಕಾರವಾರ : ನನಗೆ ಜೀವ ಬೆದರಿಕೆ ಇದ್ದು, ಈ ಸಂಗತಿಯನ್ನು ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹಸಚಿವರ ಗಮನಕ್ಕೆ ತಂದಿದ್ದೇನೆ ಎಂದು ಕಾರವಾರ ಶಾಸಕಿ ರೂಪಾಲಿ ನಾಯ್ಕ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.
ಕಾರವಾರದ ಪತ್ರಿಕಾ ಭವನದಲ್ಲಿ ಬುಧುವಾರ ಪತ್ರಿಕಾಗೋಷ್ಠಿ ಮಾಡಿದ ಅವರು ನನ್ನ ವಾಹನಕ್ಕೆ ಲಾರಿಯಿಂದ ಡಿಕ್ಕಿ ಹೊಡೆಸುವ ಯತ್ನಗಳಾಗಿವೆ. ರಾತ್ರಿ ಮನೆಯ ಎದುರು ಕರ್ಕಶ ಶಬ್ದ ಮಾಡುತ್ತಾ ಬೈಕ್ ಓಡಿಸಿ ಭಯ ಹುಟ್ಟಿಸುವ ಪ್ರಯತ್ನವಾಗಿದೆ. ರಾತ್ರಿ ಒಂದು ಗಂಟೆಯಿಂದ ಮೂರು ಗಂಟೆ ಅವಧಿಯಲ್ಲಿ ಕರೆಂಟ್ ತೆಗೆದು, ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಮೊನ್ನೆ ಮಧ್ಯಾಹ್ನ ಕಾರವಾರದಲ್ಲಿ ಪತ್ರಿಕಾ ಭವನಕ್ಕೆ ಬರುವಾಗ ನನ್ನ ವಾಹನವನ್ನು ಕೇರಳ ಮತ್ತು ವೆಸ್ಟ್ ಬಂಗಾಲ್ ನಂಬರ್ ಪ್ಲೇಟ್ ಹೊಂದಿದ ಕಾರ್ ಗಳು ಹಿಂಬಾಲಿಸಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವೆ ಎಂದರು.
ಈ ಸಂಗತಿಗಳನ್ನು ಬಹಿರಂಗ ಮಾಡಿರಲಿಲ್ಲ. ಕಾರಣ ಜನರಿಗೆ ರಕ್ಷಣೆ ಕೊಡಬೇಕಾದ ನಾವೇ ಹೆದರಿದರೆ ಹೇಗೆ? ಇದನ್ನೆಲ್ಲಾ ಧೈರ್ಯವಾಗಿ ಎದುರಿಸಿದೆ. ಸಮ್ಮಿಶ್ರ ಸರ್ಕಾರ ಇದ್ದಾಗ ಗನ್ ಲೈಸೆನ್ಸ್ ಗೆ ಅಪ್ಲೈ ಮಾಡಿದೆ. ಅದನ್ನು ಕೊಡಲು ವಿಳಂಬ ಮಾಡಿದರು. ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದಾಗ ಗನ್ ಲೈಸೆನ್ಸ್ ನೀಡಿದ್ದಾರೆ . ನಮ್ಮ ರಕ್ಷಣೆಗೆ ವಯಕ್ತಿಕವಾಗಿ ಕೆಲ ಕ್ರಮತೆಗೆದುಕೊಂಡಿದ್ದೇನೆ ಎಂದರು.
ಮಗ ಹಾಗೂ ನನ್ನ ಅಕ್ಕನ ಮಗನ ಕಿಡ್ನಾಪ್ ಯತ್ನಗಳು ಹಿಂದೆ ನಡೆದಿದ್ದವು ಎಂದು ಶಾಸಕಿ ರೂಪಾಲಿ ನಾಯ್ಕ ಮಾಧ್ಯಮಗಳಿಗೆ ವಿವರಿಸಿದರು.
Related Articles
ನಾನು ಶಾಸಕಿ ಆಗುವ ಮೊದಲು ನನ್ನ ಬೆದರಿಸುವ ಯತ್ನ ನಡೆದಿದ್ದವು. ಶಾಸಕಿ ಆದ ಮೇಲೆ ಇದು ಮುಂದುವರಿದಿದೆ. ಮೂರು ಸಲ ಪೊಲೀಸರಿಗೆ ದೂರು ನೀಡಿದ್ದೇನೆ. ನನಗೆ ವೈರಿಗಳು ಹೆಚ್ಚು ಇದ್ದಾರೆ. ಕೆಲವು ಹತಾಶ ರಾಜಕಾರಣಿಗಳು, ಓರ್ವ ಗುತ್ತಿಗೆದಾರ ಹಾಗೂ ಮತ್ತೋರ್ವ ಸಹ ಸತತವಾಗಿ ನನ್ನ ತೇಜೋವಧೆಗೆ ಸಂಚು ರೂಪಿಸಿದ್ದಾರೆ. ಒಬ್ಬ ಹೆಣ್ಮಗಳು ಮುಂದೆ ಬರುವುದು ಹಾಗೂ ಅಭಿವೃದ್ಧಿ ಮಾಡುವುದನ್ನು ಸಹಿಸದ ಸ್ಥಾಪಿತ ಹಿತಾಸಕ್ತಿಗಳು ತಂತ್ರ ರೂಪಿಸಿವೆ. ಈ ಕುತಂತ್ರಗಳಿಗೆ ನಾನು ಮಣಿಯುವುದಿಲ್ಲ. ಸಾಯುವುದು ಒಂದೇ ಸಲ. ಹತ್ಯೆಯಾಗಲಿ ಅಥವಾ ಹೃದಯಾಘಾತವಾಗಲಿ ,ಸಾವು ಬರುವುದು ಒಂದೇ ಸಲ. ಹಾಗಾಗಿ ನಾನು ಜನರ ಕೆಲಸ ಮಾಡುವೆ. ನನ್ನ ವಿರುದ್ಧದ ಪಿತೂರಿಯನ್ನು ಬಯಲು ಮಾಡುವೆ ಎಂದರು . ಕೆಇಬಿ ಹಾಗೂ ಪೊಲೀಸರು ಈಗ ನನ್ನ ರಕ್ಷಣೆಗೆ ಮುಂದಾಗಿದ್ದಾರೆ. ಕಾರವಾರದಲ್ಲಿ ನಾನು ಶಾಸಕಿಯಾಗುವ ಮುನ್ನ ಹೋಟೆಲ್ ಗಳಲ್ಲಿ ಹೊಡೆದಾಟದ ಪ್ರಕರಣಗಳು ಇದ್ದವು . ನಾನು ಶಾಸಕಿ ಆದ ಮೇಲೆ ಗೂಂಡಾಗಿರಿಗೆ ಕಡಿವಾಣ ಬಿದ್ದಿತ್ತು. ಈಗ ಶಾಂತ ವಾತಾವರಣ ಕೆಡಿಸಲು ಕೆಲವರು ಯತ್ನಿಸುತ್ತಿದ್ದಾರೆ. ಇಂತಹ ಘಟನೆಗಳ ಬಗ್ಗೆ ನಾವು ಜಾಗೃತರಾಗಿರಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ನುಡಿದರು. ರಾಜಕೀಯ ದ್ವೇಷವೇ ಈ ಎಲ್ಲಾ ಕಲುಷಿತ ವಾತಾವರಣದ ಹಿಂದೆ ಇದ್ದಂತೆ ಕಾಣುತ್ತಿದೆ. ಜೀವ ಬೆದರಿಕೆ ಹುಟ್ಟಿಸುವವರ ಹಿಂದೆ ಯಾರಿದ್ದಾರೆಂಬುದು ಮುಂದಿನ ದಿನಗಳಲ್ಲಿ ಬಯಲಿಗೆ ಬರಲಿದೆ ಎಂದರು.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳಾ ಮತದಾರರ ಪ್ರಾಬಲ್ಯ ಪುರುಷರದ್ದೇ ಪಾರುಪತ್ಯ