Advertisement

ಮೇಲ್ಛಾವಣಿ ಕುಸಿದು ವಿದ್ಯಾರ್ಥಿನಿಗೆ ಗಾಯ

04:38 PM Jun 11, 2022 | Shwetha M |

ಮುದ್ದೇಬಿಹಾಳ: ತಾಲೂಕಿನ ಹಡಲಗೇರಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಕಾರಿಡಾರ್‌ನ ಮೇಲ್ಛಾವಣಿಯ ಸಿಮೆಂಟ್‌ ಕಾಂಕ್ರೀಟ್‌ ಪದರು ಉದುರಿ ಬಿದ್ದು ಓರ್ವ ವಿದ್ಯಾರ್ಥಿನಿಗೆ ಗಂಭೀರ ಗಾಯವಾಗಿದ್ದು, ಇನ್ನುಳಿದ ವಿದ್ಯಾರ್ಥಿಗಳು ಆಶ್ವರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಶುಕ್ರವಾರ ನಡೆದಿದೆ.

Advertisement

ಶಾಲೆಯ ವಿಶ್ರಾಂತಿ ಸಮಯದಲ್ಲಿ ನಡೆದ ಈ ಘಟನೆಯಿಂದ 5ನೇ ತರಗತಿಯ ವಿದ್ಯಾರ್ಥಿನಿ ಗಂಗಾ ಚಲವಾದಿ ಎಂಬಾಕೆಯ ಕಾಲಿನ ಬೆರಳುಗಳ ಮೇಲೆ ಸಿಮೆಂಟ್‌ ಕಾಂಕ್ರೀಟ್‌ ಪದರು ಬಿದ್ದಿದ್ದರಿಂದ ಆಕೆಯ ಎರಡು ಕಾಲ್ಬೆರಳ ಎಲುಬಿನಲ್ಲಿ ಸ್ವಲ್ಪ ಪ್ರಮಾಣದ ಕ್ರ್ಯಾಕ್‌ ಕಂಡು ಬಂದಿದೆ. ತಕ್ಷಣವೇ ಶಿಕ್ಷಕರು ಆಕೆಯನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ದೊರಕಲು ನೆರವಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.

ವಿಶ್ರಾಂತಿಗೆ ಬಿಟ್ಟ ಸಮಯ ಎಲ್ಲ ವಿದ್ಯಾರ್ಥಿಗಳು ತರಗತಿಗಳಿಂದ ಹೊರಗೆ ಬಂದಿದ್ದಾರೆ. ಛಾವಣಿಯ ಸಿಸಿ ಪದರು ಕುಸಿದು ಬಿದ್ದ ಜಾಗದಿಂದ ಎಲ್ಲರೂ ಸ್ವಲ್ಪ ದೂರ ಬಂದಾಗ ಏಕಾಏಕಿ ಧಡ್‌ ಧಡ್‌ ಸದ್ದು ಕೇಳಿಬಂದಿದೆ. ಹಿಂತಿರುಗಿ ನೋಡಿದಾಗ ಛಾವಣಿ ಸಿಸಿ ಪದರು ಗಟ್ಟಿ ತುಂಡುಗಳು ನೆಲಕ್ಕೆ ಬಿದ್ದಿರುವುದು ಕಂಡು ಬಂದಿದೆ. ವಿದ್ಯಾರ್ಥಿನಿ ಗಂಗಾ ಎಲ್ಲರಿಗಿಂತ ಹಿಂದೆ ಇದ್ದುದರಿಂದ ಆಕೆ ಸ್ಥಳದಿಂದ ಬರುವಷ್ಟರಲ್ಲಿ ಈ ಘಟನೆ ನಡೆದಿದ್ದರಿಂದ ಕಾಲಿನ ಪಾದ ಮತ್ತು ಬೆರಳುಗಳ ಮೇಲೆ ಗಟ್ಟಿ ಪದರು ಬಿದ್ದಿದೆ.

ವಿಷಯ ತಿಳಿದು ಎಸ್ಡಿಎಂಸಿ ಅಧ್ಯಕ್ಷ ಮಾಳಪ್ಪ ಹರಿಂದ್ರಾಳ, ಪಾಲಕರು, ಗ್ರಾಮಸ್ಥರು ಶಾಲೆಗೆ ಧಾವಿಸಿ ಶಿಕ್ಷಕನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಶಿಕ್ಷಕರಾದ ಎಂ.ಎಸ್‌.ಪಾಟೀಲ ಮತ್ತಿತರರು ತಕ್ಷಣ ಗಾಯಗೊಂಡಿದ್ದ ವಿದ್ಯಾರ್ಥಿನಿ ಗಂಗಾಳನ್ನು ಆಸ್ಪತ್ರೆಗೆ ಕರೆ ತಂದು ಸಕಾಲಿಕ ಚಿಕಿತ್ಸೆ ದೊರಕಲು ನೆರವಾಗಿದ್ದಾರೆ. ಒಂದು ವೇಳೆ ಸಿಸಿಯ ಗಟ್ಟಿ ಪದರುಗಳು ವಿದ್ಯಾರ್ಥಿಗಳ ತಲೆ ಮೇಲೆ ಬಿದ್ದಿದ್ದರೆ ಪ್ರಾಣಾಪಾಯ ಘಟಿಸುವ ಸಂಭವ ಹೆಚ್ಚಾಗಿತ್ತು ಎಂದು ಪ್ರತ್ಯಕ್ಷದರ್ಶಿ ಶಿಕ್ಷಕರು, ವಿದ್ಯಾರ್ಥಿಗಳು ತಿಳಿಸಿದರು.

ವಿಷಯ ತಿಳಿದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಗೌಡ ಮಿರ್ಜಿ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಧಾವಿಸಿ ಬಂದರು. ಆದರೆ ಅಷ್ಟರಲ್ಲಾಗಲೇ ಗಾಯಗೊಂಡ ವಿದ್ಯಾರ್ಥಿನಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಆಸ್ಪತ್ರೆಯಲ್ಲಿದ್ದ ಶಿಕ್ಷಕರು, ವೈದ್ಯರಿಂದ ವಿವರ ಪಡೆದುಕೊಂಡು ಶಾಲೆಗೆ ತೆರಳಿ ಘಟನಾ ಸ್ಥಳವನ್ನು ಪರಿಶೀಲಿಸಿದರು. ಇದರೊಟ್ಟಿಗೆ ಇಡಿ ಶಾಲೆಯ ಎಲ್ಲ ಕೊಠಡಿಗಳನ್ನು ಪರಿಶೀಲಿಸಿ ಭಾರಿ ಮಳೆಯ ಪರಿಣಾಮ ಕೆಲವೆಡೆ ಸಿಸಿ ಪದರು ಮೇಲಕ್ಕೆ ಎದ್ದಿದ್ದು ಯಾವುದೇ ಕ್ಷಣದಲ್ಲಾದರೂ ಬೀಳುವ ಸಂಭವ ಹೆಚ್ಚಾಗಿರುವುದನ್ನು ಅರಿತು ಅಂಥ ಸ್ಥಳಗಳ ಕೆಳಗೆ ವಿದ್ಯಾರ್ಥಿಗಳನ್ನು ಕೂಡ್ರಿಸಿ ಪಾಠ ಮಾಡದಂತೆ ಸಲಹೆ ನೀಡಿದರು. ಘಟನೆಯ ಸಮಗ್ರ ವಿವರವನ್ನು ಮೇಲಧಿಕಾರಿಗಳ ಗಮನಕ್ಕೆ ತಂದರು.

Advertisement

ಗಾಯಗೊಂಡಿರುವ ವಿದ್ಯಾರ್ಥಿನಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಇಲಾಖೆ ವತಿಯಿಂದ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವದಾಗಿ ಪಾಲಕರು, ಶಿಕ್ಷಕರಿಗೆ ಭರವಸೆ ನೀಡಿದರು.

ಶಾಲಾ ಕೊಠಡಿಗಳ ಮೇಲ್ಛಾವಣಿ ದುರಸ್ತಿ ಮಾಡುವ ಕುರಿತು ಶಾಲೆ ಮುಖ್ಯಾಧ್ಯಾಪಕರು ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಒಗೆ ಜೂ. 7ರಂದೇ ಮನವಿ ಸಲ್ಲಿಸಿದ್ದರು. ಶಾಲೆಯಲ್ಲಿ 1-8 ತರಗತಿಯವರೆಗೆ ಸುಮಾರು 350 ಮಕ್ಕಳು ಓದುತ್ತಿದ್ದಾರೆ. ಒಟ್ಟು 9 ಕೊಠಡಿಗಳು ಇವೆ. ಇವುಗಳಲ್ಲಿ 2 ಕೊಠಡಿಗಳ ಮೇಲ್ಛಾವಣಿ ಅಪಾಯದ ಅಂಚಿನಲ್ಲಿದ್ದು ಮಕ್ಕಳ ಪ್ರಾಣಕ್ಕೆ ಅಪಾಯ ಸಂಭವ ಇರುವುದರಿಂದ ಕೂಡಲೇ ಆ ಎರಡು ಕೊಠಡಿಗಳ ಮೇಲ್ಛಾವಣಿಯನ್ನು ತುರ್ತಾಗಿ ದುರಸ್ತಿ ಮಾಡಬೇಕು. ದುರಸ್ತಿ ಆಗುವತನಕ ಮಕ್ಕಳ ಕಲಿಕೆ ಕುಂಠಿತವಾಗದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಅಪೂರ್ಣ ಶೌಚಾಲಯವನ್ನೂ ನಿಯಮಾನುಸಾರ ವ್ಯವಸ್ಥಿತ ರೀತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಹೀಗಿದ್ದರೂ ಗ್ರಾಪಂನವರು ಈ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಈ ಘಟನೆಯಿಂದ ಎದ್ದು ಕಾಣುತ್ತದೆ. ಇದಕ್ಕೆ ಪಿಡಿಒ ಅವರನ್ನೇ ಹೊಣೆ ಮಾಡಿ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಗ್ರಾಮಸ್ಥರು, ಪಾಲಕರು ಆಗ್ರಹಿಸಿದ್ದಾರೆ. ಈ ಘಟನೆಯಿಂದ ಶಿಕ್ಷಕರು ಆತಂಕ್ಕೊಳಗಾಗಿದ್ದಾರೆ.

ಇದು ಮೂರನೇ ಪ್ರಕರಣ

ಶಾಲೆಯ ಮೇಲ್ಛಾವಣಿಯ ಸಿಮೆಂಟ್‌ ಕಾಂಕ್ರೀಟ್‌ ಪದರು ಕುಸಿಯುತ್ತಿರುವುದು ಇದು ಮೂರನೇ ಪ್ರಕರಣವಾಗಿದೆ. 2-3 ತಿಂಗಳ ಹಿಂದೆ ಗೆದ್ದಲಮರಿ ಸರ್ಕಾರಿ ಪ್ರಾಥಮಿಕ ಶಾಲೆಯ ಕಾರಿಡಾರ್‌ನ ಮೇಲ್ಛಾವಣಿ ಪದರು ಕುಸಿದಿತ್ತು. ಶಿಕ್ಷಕರಿಗೆ ಸಣ್ಣ ಪುಟ್ಟ ಒಳ ಪೆಟ್ಟಾಗಿ ಇಬ್ಬರು ವಿದ್ಯಾರ್ಥಿಗಳ ತಲೆಗೂ ಪೆಟ್ಟಾಗಿತ್ತು. ಮುದ್ದೇಬಿಹಾಳದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಕೊಠಡಿಯೊಂದರ ಮೇಲ್ಛಾವಣಿ ಪದರು ಕುಸಿದು ಬಿದ್ದು ಅದೃಷ್ಟವಶಾತ್‌ ಮಕ್ಕಳು ಪಾರಾಗಿದ್ದರು. ಹಡಲಗೇರಿಯದ್ದು ಮೂರನೇ ಘಟನೆಯಾಗಿದೆ. ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ದುರಸ್ತಿಗೆ ಬಂದಿರುವ ಕೊಠಡಿಗಳಲ್ಲಿ ತರಗತಿ ನಡೆಸದೆ ಪರ್ಯಾಯ ಸುರಕ್ಷಿತ ಸ್ಥಳಗಳಲ್ಲಿ ತರಗತಿಗಳನ್ನು ನಡೆಸಿ ವಿದ್ಯಾರ್ಥಿಗಳು, ಶಿಕ್ಷಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಇದೀಗ ಮಳೆಗಾಲ ಆಗಿರುವುದರಿಂದ ಅಪಾಯ ಸಂಭವ ಹೆಚ್ಚಾಗಿರುತ್ತದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಶಾಲೆಯ ಜೀರ್ಣಗೊಂಡ ಕೊಠಡಿ ದುರಸ್ತಿಗೆ ಈಗಾಗಲೇ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಇಂಥ ಘಟನೆಗಳು ಮರುಕಳಿಸದಂತೆ ಎಲ್ಲ ಶಿಕ್ಷಕರು, ಮುಖ್ಯಾಧ್ಯಾಪಕರು ಜಾಗ್ರತೆ ವಹಿಸಬೇಕು. ಮಳೆಗಾಲ ಆಗಿರುವುದರಿಂದ ಶಿಕ್ಷಕರು ಸ್ಥಳೀಯ ಪರಿಸ್ಥಿತಿ ಅರಿತು ಮಕ್ಕಳಿಗೆ ತೊಂದರೆ ಆಗದಂತೆ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ. -ಹಣಮಂತಗೌಡ ಮಿರ್ಜಿ, ಬಿಇಓ, ಮುದ್ದೇಬಿಹಾಳ

ನಾನು ಕೆಲ ದಿನಗಳ ಹಿಂದೆ ಮುಖ್ಯಾಧ್ಯಾಪಕನಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಶಾಲೆಯ ಮೇಲ್ಛಾವಣಿ ದುರಸ್ತಿ ಮಾಡುವಂತೆ ಕೋರಿ ಗ್ರಾಪಂಗೆ ಪತ್ರ ಬರೆದಿದ್ದೇನೆ. ಹಿಂದಿನ ಮುಖ್ಯಾಧ್ಯಾಪಕರು ಇದನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಮ್ಮ ಅದೃಷ್ಟ ಚೆನ್ನಾಗಿದೆ. ಇನ್ನುಳಿದ ಮಕ್ಕಳಿಗೆ ತೊಂದರೆ ಆಗಿಲ್ಲ. ಇನ್ನು ಮುಂದೆ ಎಚ್ಚರಿಕೆಯಿಂದ ತರಗತಿ ನಡೆಸಲು ಶಿಕ್ಷಕರಿಗೆ ಸೂಚಿಸಿದ್ದೇನೆ. -ಡಿ.ಎಸ್‌. ಚಳಗೇರಿ, ಮುಖ್ಯಾಧ್ಯಾಪಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುದ್ದೇಬಿಹಾಳ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next