Advertisement

ಬಂಟ್ವಾಳ: ದೇವರಾಜ ಅರಸು ಬಾಲಕರ ಹಳೆ ಹಾಸ್ಟೆಲ್‌ ಕಟ್ಟಡದ ಛಾವಣಿ ಕುಸಿತ

09:23 PM Jul 17, 2019 | Team Udayavani |

ಬಂಟ್ವಾಳ: ಅಭದ್ರವಾಗಿದ್ದ ಪಾಣೆಮಂಗಳೂರು ಬಂಗ್ಲೆಗುಡ್ಡೆ ದೇವರಾಜ ಅರಸು ಬಾಲಕರ ಹಾಸ್ಟೆಲ್‌ ಛಾವಣಿ ಮುಂಬದಿ ಜು. 17ರಂದು ಕುಸಿದು ಬಿದ್ದಿದೆ. ಅಸುರಕ್ಷಿತ ಎಂಬ ಕಾರಣಕ್ಕೆ ಒಂದು ತಿಂಗಳ ಹಿಂದೆಯೇ ಇಲ್ಲಿದ್ದ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿತ್ತು. ಹಾಗಾಗಿ, ಸಂಭವನೀಯ ಅನಾಹುತ ತಪ್ಪಿದೆ.

Advertisement

ಶಿಥಿಲಾವಸ್ಥೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನ ಬಂಗ್ಲೆಗುಡ್ಡೆ ಹಾಸ್ಟೆಲ್‌ ಬಂಟ್ವಾಳ ಪುರಸಭಾ ಕಟ್ಟಡದಲ್ಲಿ ಬಾಡಿಗೆ ನೆಲೆಯಲ್ಲಿ ಕಾರ್ಯಾಚರಿಸು ತ್ತಿತ್ತು. ಈ ಕಟ್ಟಡ ಕಳೆದ ಕೆಲವು ವರ್ಷ ಗಳಿಂದ ಶಿಥಿಲಾವಸ್ಥೆಗೆ ತಲುಪಿತ್ತು. ಇತ್ತೀಚೆಗೆ ತೀವ್ರ ನಾದುರಸ್ತಿ ಸ್ಥಿತಿಗೆ ತಲುಪಿದ ಕಟ್ಟಡದಲ್ಲಿ ವಿದ್ಯಾರ್ಥಿಗಳ ವಾಸ ಅಪಾಯಕಾರಿ ಎಂದರಿತು ಜೂ. ತಿಂಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳನ್ನು ಮೊಗರ್ನಾಡಿನ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.

ಸ್ಥಳೀಯರ ಮಾಹಿತಿ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹಾಸ್ಟೆಲ್‌ ಕಟ್ಟಡವನ್ನು ವೀಕ್ಷಣೆ ಮಾಡಿದ್ದಲ್ಲದೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಗೂ ಹಾಸ್ಟೆಲ್‌ ವಾರ್ಡನ್‌ಗಳನ್ನು ಕರೆಸಿ ಸುರಕ್ಷತಾ ಕ್ರಮಗಳ ಕುರಿತು ಸಮಾಲೋಚಿಸಿದ್ದರು.

ಆಕ್ಷೇಪ
ಕುಸಿಯುವ ಭೀತಿಯಲ್ಲಿದ್ದ ಕಟ್ಟಡದ ಹಂಚು, ಮರದ ತೊಲೆಗಳು ಉಪಯುಕ್ತವಾಗಿದ್ದು ಅದನ್ನು ಸದುಪಯೋಗ ಆಗುವಂತೆ ಕ್ರಮ ಕೈಗೊಳ್ಳದ ಆಡಳಿತ ವ್ಯವಸ್ಥೆಯ ಬಗ್ಗೆ ಸಾರ್ವಜನಿಕ ನೆಲೆಯಲ್ಲಿ ಆಕ್ಷೇಪ ಕೇಳಿಬಂದಿದೆ. ಮುಂದಕ್ಕಾದರೂ ತುರ್ತು ಕ್ರಮದ ಮೂಲಕ ಉಳಿಕೆ ಉಪಯುಕ್ತ ಸಾಮಗ್ರಿಗಳನ್ನು ರಕ್ಷಿಸಿಕೊಳ್ಳಬೇಕು ಎಂಬ ಪುರಸಭೆಗೆ ಸ್ಥಳೀಯ ಪ್ರಮುಖರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next