Advertisement

ರೋಣ: ಬಹುತೇಕ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ

06:38 PM May 30, 2023 | Team Udayavani |

ರೋಣ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ, ಸರ್ಕಾರಿ ಪ್ರೌಢಶಾಲೆಗಳಲ್ಲಿ ಅನೇಕ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಈ ಬಾರಿವೂ ಕಲಿಕೆ ಅತಿಥಿ ಶಿಕ್ಷಕರಿಂದ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.

Advertisement

ತಾಲೂಕಿನಲ್ಲಿ 158 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಸದ್ಯ ಕಾರ್ಯ ನಿರ್ವಹಿಸುತ್ತಿದ್ದು, ಈ ಪೈಕಿ ಹಳ್ಳಿಯಲ್ಲಿನ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಸುಮಾರು ವರ್ಷಗಳಿಂದ ಹುದ್ದೆಗಳು ಖಾಲಿಯಿದ್ದು, ಭರ್ತಿಗೊಳಿಸಿಲ್ಲ. ಗ್ರಾಮೀಣ ಭಾಗದಲ್ಲಿ ಕೆಲವೆಡೆ ವಿದ್ಯಾರ್ಥಿಗಳಿಂದ ಪಾಠ ಬೋಧನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಶಾಲೆಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಿ ವರ್ಷವಿಡಿ ಕಳೆಯಲಾಗಿದೆ. ಕಾಯಂ ಶಿಕ್ಷಕರಿಲ್ಲದ ಪರಿಣಾಮ ಮಕ್ಕಳ ಕಲಿಕೆಗೆ ಅಡಚಣೆ ಉಂಟಾಗಿದೆ.

ಹುದ್ದೆಗಳು ಖಾಲಿ: ತಾಲೂಕಿನಲ್ಲಿ 31ಸರಕಾರಿ ಪ್ರೌಢಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಸರಕಾರಿ ಪ್ರೌಢಶಾಲೆಯಲ್ಲಿನ ಮುಖ್ಯ ಶಿಕ್ಷಕರು-27 ಮಂಜೂರಾಗಿದ್ದು, ಅದರಲ್ಲಿ 16 ಶಿಕ್ಷಕರನ್ನು ಮಾತ್ರ ನೇಮಕ ಮಾಡಿದೆ. ಇನ್ನು 289 ಸಹ ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 207 ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಒಟ್ಟು ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಸೇರಿ 82 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 40 ಅತಿಥಿ ಶಿಕ್ಷಕರ ನೇಮಕ ಮಾಡಿದ್ದಾರೆ. ಇನ್ನು 42 ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಇನ್ನು ಪ್ರಾಥಮಿಕ ಶಾಲೆಯಲ್ಲಿ ಒಟ್ಟು 1064 ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಸೇರಿ 753 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. 311 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 158 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದಾರೆ. ಇನ್ನು 153 ಶಿಕ್ಷಕರ ಕೊರತೆ ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಇದೆ.

ರೋಣ, ಗಜೆಂದ್ರಗಡ, ಹೊಳೆಆಲೂರ, ನರೇಗಲ್‌ ಸೇರಿದಂತೆ ಬಹುತೇಕ ಸರಕಾರಿ ಕಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲದೇ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಶಾಲೆಗಳು ಶುರುವಾಗುವ ಮುನ್ನವೇ
ಕಾಯಂ ಶಿಕ್ಷಕರನ್ನು ನಿಯೋಜಿಸಬೇಕಿದೆ.

Advertisement

ಖಾಲಿಯಿರುವ ಹುದ್ದೆಗಳ ಭರ್ತಿಗೆ ಮನವಿ
ತಾಲೂಕಿನ ಸರಕಾರಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿಗೊಳಿಸಲು ಮೇಲ ಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದೇನೆ. ಸರಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕರನ್ನು ನಿಯೋಜಿಸಿ ಮಕ್ಕಳಿಗೆ ಶಿಕ್ಷಣ ಕೊಡಿಸಲಾಗಿದೆ. ಕಳೆದ ವರ್ಷ ಶಿಕ್ಷಕರ ನೇಮಕಾತಿ ನಡೆದಿದೆ. ಸರ್ಕಾರ ನೇಮಕ ಮಾಡಿಕೊಂಡರೂ ಶಿಕ್ಷಕ ರಿಗೆ ಆದೇಶ ನೀಡಿ ಸ್ಥಳ ನಿಯುಕ್ತಿ ಮಾಡಿದರೆ ಉತ್ತಮವಾಗುತ್ತದೆ. ಈಗಾಗಲೇ 31ರಿಂದ ಮಕ್ಕಳ ಕಲಿಕೆ ಪ್ರಾರಂಭವಾಗುತ್ತದೆ. ಪಠ್ಯ ಪುಸ್ತಕ ವಿತರಣೆ ಹಾಗೂ ಬಿಸಿಯೂಟ ಅಂದಿ ನಿಂದಲೇ ಪ್ರಾರಂಭವಾಗಲಿದೆ ಎನ್ನುತ್ತಾರೆ
ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿ ಸಜ್ಜನ್‌.

ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ

ತಾಲೂಕಿನ ಬಹುತೇಕ ಸರಕಾರ ಶಾಲೆಗಳಲ್ಲಿ ಶಿಕ್ಷಕರಿಲ್ಲದೇ ಮಕ್ಕಳಿಗೆ ಸರಿಯಾಗಿ ಹಾಗೂ ಗುಣಮಟ್ಟದ ಶಿಕ್ಷಣ ದೊರೆಯದಂತಾಗಿದೆ. ಕಳೆದ ವರ್ಷದಲ್ಲಿ ನೇಮಕಾತಿಗೊಳಿಸಿದ ಶಿಕ್ಷರನ್ನು ಶೀಘ್ರ ಸೇವೆಗೆ ನಿಯೋಜಿಸಬೇಕು. 4-5 ಹುದ್ದೆಗಳ ಕಾಲಿ ಇರುವ ಕಡೆ ಕನಿಷ್ಠ 3 ಹುದ್ದೆಗಳನ್ನು ಭರ್ತಿಗೊಳಿಸಲು ವಿಳಂಬವಾದರೆ ಅಂತಹ ಶಾಲೆಗೆ ಅತಿಥಿ ಶಿಕ್ಷಕರನ್ನು ಕಡ್ಡಾಯವಾಗಿ ನಿಯೋಜಿಸಲು ಸರಕಾರ ಆದೇಶ ಹೊರಡಿಸಬೇಕು ಎನ್ನುತ್ತಾರೆ ಶಿಕ್ಷಣಪ್ರೇಮಿ ಅವಿನಾಶ ಸಾಲಿಮನಿ.

ಯಚ್ಚರಗೌಡ ಗೋವಿಂದಗೌಡ್ರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next