ತಿ.ನರಸೀಪುರ: ರೋಮಾಂಚನಕಾರಿ ಓಟ. ಗೆಲ್ಲಲೇ ಬೇಕೆಂಬ ಛಲ. ರೈತರಲ್ಲಿ ಹುಮ್ಮಸ್ಸು… ಇದು ತಿ.ನರಸೀಪುರದ ಹೊರ ವಲಯ ದಲ್ಲಿ ಇರುವ ತಿರುಮಲಕೂಡಲಿನ ರಾಷ್ಟ್ರೀಯ ಹೆದ್ದಾರಿ 212ರ ಬಳಿ ಭಾನುವಾರ ಕಂಡ ದೃಶ್ಯ. ಶ್ರೀಚೌಡೇಶ್ವರಿ ಅಮ್ಮನವರ ಕೋಂಡೋತ್ಸವದ ಪ್ರಯುಕ್ತ ನಡೆದ ಎತ್ತಿನಗಾಡಿ ಓಟದ ಸ್ಪರ್ಧೆ ನೋಡಲು ಸಾವಿರಾರು ಜನರು ಜಮಾಯಿಸಿದ್ದರು.
ಎತ್ತಿನಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡುತ್ತಿದ್ದಂತೆ ನಡೆದ ಜೋಡಿ ಎತ್ತಿನಗಾಡಿಗಳ ಓಟದ ಸ್ಪರ್ಧೆ ರೋಮಾಂಚನಕಾರಿಯಾಗಿತ್ತು. ಸ್ಪರ್ಧೆಯ ಆರಂಭಕ್ಕೂ ಮೊದಲು ಎತ್ತುಗಳೊಂದಿಗೆ ತಾಲೀಮು ನಡೆಸಿದ ರೈತರು ಗೆಲ್ಲುವುದಕ್ಕೆ ತಂತ್ರಗಾರಿಕೆ ರೂಪಿಸುತ್ತಿದ್ದರು. ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಗಾಡಿಯ ನೊಗಕ್ಕೆ ಹೆಗಲು ನೀಡಲು ಕೆಲವು ಎತ್ತುಗಳು ಹಿಂದೇಟು ಹಾಕಿದ್ದರಿಂದ ಅರ್ಧತಾಸು ತಡವಾಯಿತು.
ಮೈಸೂರು ಸೇರಿದಂತೆ ಮಂಡ್ಯ, ಕನಕಪುರ ಹಾಗೂ ಇನ್ನಿತರ ಕಡೆಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಲು ನೂರಾರು ಜೋಡಿ ಎತ್ತುಗಳು ಬಂದಿದ್ದವು. ಸ್ಪರ್ಧೆಗೆ ಚಾಲನೆ ನೀಡಿದ ದಿ ಸಿಟಿ ಲೋಕಲ್ ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಬಿ.ರೇವಣ್ಣ ಮಾತನಾಡಿ, ಗ್ರಾಮೀಣ ಕ್ರೀಡೆಗಳನ್ನು ಉಳಿಸಲು ಕಾಲ ಕಾಲಕ್ಕೆ ಪಟ್ಟಣ ಪ್ರದೇಶಗಳಲ್ಲಿ ಗ್ರಾಮೀಣ ಸೊಗಡಿನ ಕ್ರೀಡಾಕೂಟಗಳನ್ನು ಆಯೋಜಿಸಬೇಕು ಎಂದು ಹೇಳಿದರು.
ಸಾಂಪ್ರಾದಾಯಿಕ ಕ್ರೀಡೆಯಾಗಿರುವ ಎತ್ತಿನಗಾಡಿ ಓಟದ ಸ್ಪರ್ಧೆ ರೈತರಿಗೆ ಜಾನು ವಾರುಗಳನ್ನು ತಯಾರುಗೊಳಿಸಲು ಸಹಕಾರಿಯಾಗಲಿದೆ. ದುಡಿಯುವ ರಾಸುಗಳು ಕ್ರೀಡಾಕೂಟಗಳಲ್ಲಿ ಭಾಗ ವಹಿಸಲು ದೈಹಿಕವಾಗಿ ಅಣಿಯಾಗುವುದ ರಿಂದ ಅವುಗಳ ಸಾಮರ್ಥ್ಯದ ಬೆಳವಣಿಗೆ ಯಾಗಲಿದೆ. ಅಲ್ಲದೆ ಜನರಿಗೂ ಕೂಡ ಸ್ಥಳೀಯವಾಗಿ ಮನರಂಜನೆ ಸಿಗಲಿದೆ. ಯುವ ಸಮೂಹದ ಸಂಘಟನೆಗಳು ಕ್ರೀಡಾಕೂಟಗಳನ್ನು ಅಚ್ಚುಕಟ್ಟಾಗಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ರೇವಣ್ಣ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮಾದೇಗೌಡ, ಪುರಸಭಾ ಅಧ್ಯಕ್ಷೆ ಸುಧಾ ಗುರುಮಲ್ಲಪ್ಪ, ಕರವೇ ರಾಜ್ಯ ಉಪಾಧ್ಯಕ್ಷ ಹಾಗೂ ತಾ.ಪಂ ಸದಸ್ಯ ಆರ್.ಚಲುವರಾಜು, ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಮಾಜಿ ಪ್ರಧಾನ ಎಂ.ಡಿ.ಬಸವರಾಜು, ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ ಪಿ.ಪುಟ್ಟರಾಜು, ಕೆಂಪೇಗೌಡ ಬ್ರಿಗೇಡ್ ಅಧ್ಯಕ್ಷ ಸಂದೇಶ್ ಸ್ವಾಮಿನಾಥ್‌ಗೌಡ, ಎಪಿಎಂಸಿ ಸದಸ್ಯ ಕೆ.ಬಿ.ಪ್ರಭಾಕರ, ಭೈರಾಪುರ ಗ್ರಾ.ಪಂ ಮಾಜಿ ಉಪಾಧ್ಯಕ್ಷ ತಿರುಮಕೂಡಲು ಪುಟ್ಟು,
ಮಾಜಿ ಅಧ್ಯಕ್ಷ ಎ.ಜೆ.ವೆಂಕಟೇಶ, ಮಾಜಿ ಸದಸ್ಯೆ ನಾಗರತ್ನಮ್ಮ, ಕಾಂಗ್ರೆಸ್ ಮುಖಂಡ ಸುಬ್ಬನಾಯಕ, ಗುತ್ತಿಗೆದಾರ ಜೆ.ಅನೂಪ್‌ಗೌಡ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಿರಗಸೂರು ಶಂಕರ್, ಲೈಲ್ಯಾಂಡ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಲ್.ರವಿ, ಕರವೇ ಅಧ್ಯಕ್ಷ ರಂಗಸಮುದ್ರ ಸಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಎತ್ತಿನಗಾಡಿ ಮಾಲೀಕರ ಸಂಘದ ಅಧ್ಯಕ್ಷ ಮಹೇಶ, ಖಜಾಂಚಿ ದೀಪು, ಯಜಮಾನರಾದ ಕೃಷ್ಣನಾಯಕ, ತಿರುಮಕೂಡಲು ನಾಗಣ್ಣ, ದಿಲೀಪ್‌ಕುಮಾರ್ ಇನ್ನಿತರರು ಹಾಜರಿದ್ದರು.