Advertisement

ಇಂಗ್ಲೆಂಡ್‌-ಭಾರತ ಏಕದಿನ ಸರಣಿ: ಹೋರಾಟಕ್ಕೆ ಭಾರತ ಸಿದ್ಧ

11:33 PM Jul 11, 2022 | Team Udayavani |

ಲಂಡನ್‌: ಟಿ20 ಸರಣಿ ಯಲ್ಲಿ ಜಯಭೇರಿ ಬಾರಿಸಿರುವ ಭಾರತೀಯ ತಂಡವು ಮಂಗಳವಾರದಿಂದ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದ್ದು ಗೆಲ್ಲುವ ವಿಶ್ವಾಸದಲ್ಲಿದೆ. ಚುಟುಕು ಕ್ರಿಕೆಟ್‌ ನಲ್ಲಿ ನೀಡಿದ ಉತ್ತಮ ನಿರ್ವಹಣೆಯನ್ನು ಏಕದಿನ ಕ್ರಿಕೆಟ್‌ನಲ್ಲೂ ಪ್ರದರ್ಶಿ ಸುವ ಆತ್ಮವಿಶ್ವಾಸ ಭಾರತೀಯ ಆಟಗಾರರಲ್ಲಿದೆ.

Advertisement

ಭರ್ಜರಿ ಆಟದ ಪ್ರದರ್ಶನ ನೀಡುವ ಮೂಲಕ ಭಾರತವು ಟಿ20 ಸರಣಿಯನ್ನು ಗೆದ್ದುಕೊಂಡಿದೆ. ರವಿವಾರ ನಡೆದ ಮೂರನೇ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಶತಕ ಸಿಡಿಸಿದರೂ ಕೊನೆ ಹಂತದಲ್ಲಿ ತಂಡ ಎಡವಿತ್ತು. ಆದರೂ ತಂಡವು 2-1 ಅಂತರದಿಂದ ಸರಣಿ ಜಯಿಸಿತ್ತು. ಇದೀಗ ಏಕದಿನ ಸರಣಿ ಯಲ್ಲೂ ರೋಹಿತ್‌ ಶರ್ಮ ಪಡೆ ಗೆಲ್ಲುವ ಉತ್ಸಾಹದಿಂದಲೇ ಹೋರಾಡಲಿದೆ.

ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ಗಮನಾರ್ಹ ನಿರ್ವಹಣೆ ನೀಡುತ್ತಿದೆ. 2019ರ ವಿಶ್ವಕಪ್‌ ಗೆದ್ದ ಇಂಗ್ಲೆಂಡ್‌ ತಂಡ ಸುಲಭವಾಗಿ ಶರಣಾಗುವ ಸಾಧ್ಯತೆಯಿಲ್ಲ. ಹಲವು ಪ್ರಮುಖ ಆಟಗಾರರನ್ನು ಒಳಗೊಂಡ ಇಂಗ್ಲೆಂಡ್‌ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಬಲವಾಗಿದೆ.

ಇಂಗ್ಲೆಂಡ್‌ ವಿರುದ್ಧದ ಈ ಸರಣಿ ಟಿ20 ವಿಶ್ವಕಪ್‌ ಮೊದಲು ಭಾರತೀಯ ತಂಡ ಆಡಲಿರುವ 50 ಓವರ್‌ಗಳ ಸ್ಪರ್ಧೆಯಾಗಿದೆ. ಹೀಗಾಗಿ ರೋಹಿತ್‌ ಪಡೆ ಈ ಸ್ಪರ್ಧೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಗೆಲ್ಲುವುದೇ ಗುರಿ: ರೋಹಿತ್‌
ಎಲ್ಲ ಪಂದ್ಯಗಳು ನಮ್ಮ ಪಾಲಿಗೆ ಅತೀ ಮುಖ್ಯವಾಗಿದೆ. ಏಕದಿನ ಪಂದ್ಯ ಆದ್ಯತೆಯಲ್ಲಿಲ್ಲ ಎಂಬುದನ್ನು ಅಲೋಚಿಸುವುದಿಲ್ಲ. ಆದರೆ ಪ್ರತಿಯೊಬ್ಬ ಆಟಗಾರನ ಆಟದ ಒತ್ತಡವನ್ನು ನಾವು ಗಮನದಲ್ಲಿ ಇಟ್ಟುಕೊಳ್ಳುತ್ತೇವೆ. ಈ ಕಾರಣಕ್ಕಾಗಿ ನಾವು ತಂಡದಲ್ಲಿ ಕೆಲವು ಬದಲಾವಣೆ ಮಾಡಬಹುದು. ಆದರೆ ನಮ್ಮ ಕಟ್ಟಕೊನೆಯ ಗುರಿ ಪಂದ್ಯವನ್ನು ಗೆಲ್ಲುವುದು. ಇದನ್ನು ನಾವು ಯಾವತ್ತೂ ಬಿಟ್ಟುಕೊಡುವುದಿಲ್ಲ ಎಂದು ರೋಹಿತ್‌ ಟಿ20 ಸರಣಿ ಬಳಿಕ ಹೇಳಿದ್ದಾರೆ.

Advertisement

ವೈಟ್‌ಬಾಲ್‌ ಕ್ರಿಕೆಟ್‌ ಆಟವನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಗುರಿ ಯಾಗಿದೆ. ಹೊಸ ಆಟಗಾರರು ಆಡುತ್ತಿರುವುದರಿಂದ ಹೇಗೆ ಆಡುವುದು ಎಂಬುದು ಮುಖ್ಯ. 50 ಓವರ್‌ಗಳ ಪಂದ್ಯ ಟಿ20ಯ ವಿಸ್ತರಣೆಯಾಗಿದೆ. ಟಿ20ಗೆ ಹೋಲಿಸಿದರೆ ಏಕದಿನದಲ್ಲಿ ಅಪಾಯ ಸ್ವಲ್ಪಮಟ್ಟಿಗೆ ಕಡಿಮೆ ಇರಬಹುದು ಎಂದು ರೋಹಿತ್‌ ತಿಳಿಸಿದರು.

ಏಕದಿನ ಸರಣಿ ಇಯಾನ್‌ ಮಾರ್ಗನ್‌ ಅವರಿಂದ ನಾಯಕತ್ವ ಪಡೆದ ಬಳಿಕ ಬಟ್ಲರ್‌ ಪಾಲಿಗೆ ಮೊದಲನೆಯದು ಆಗಿದೆ. ಟಿ20ಯಲ್ಲಿ ನಿರಾಶಾದಾಯಕ ನಿರ್ವಹಣೆ ನೀಡಿದ್ದರಿಂದ ಆತಿಥೇಯ ತಂಡ ಏಕದಿನ ಸರಣಿಯಲ್ಲಿ ತಿರುಗಿ ಬೀಳುವ ಸಾಧ್ಯತೆಯಿದೆ. ಬೆನ್‌ ಸ್ಟೋಕ್ಸ್‌, ಜೋ ರೂಊಊಟ್‌ ಮತ್ತು ಜಾನಿ ಬೇರ್‌ಸ್ಟೋ ತಂಡಕ್ಕೆ ಮರಳಿದ್ದರಿಂದ ಇಂಗ್ಲೆಂಡ್‌ ಬಲಿಷ್ಠವಾಗಿದೆ.

ತಂಡಗಳು
ಭಾರತ: ರೋಹಿತ್‌ ಶರ್ಮ, ಧವನ್‌, ಇಶಾನ್‌ ಕಿಶನ್‌, ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ರಿಷಬ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ಜಡೇಜ, ಶಾರ್ದೂಲ್ ಠಾಕೂರ್, ಚಹಲ್‌, ಅಕ್ಷರ್‌ ಪಟೇಲ್‌, ಜಸ್‌ಪ್ರೀತ್‌ ಬುಮ್ರಾ, ಪ್ರಸಿದ್ಧ್ ಕೃಷ್ಣ, ಶಮಿ, ಸಿರಾಜ್‌, ಅರ್ಷದೀಪ್‌ ಸಿಂಗ್‌.

ಇಂಗ್ಲೆಂಡ್‌: ಬಟ್ಲರ್‌ (ನಾಯಕ), ಮೊಯಿನ್‌ ಅಲಿ, ಬೇರ್‌ಸ್ಟೋ, ಹ್ಯಾರಿ ಬ್ರೂಕ್‌, ಬ್ರೈಡನ್‌ ಕಾರ್ಸ್‌, ಸ್ಯಾಮ್‌ ಕರನ್‌, ಲಿವಿಂಗ್‌ಸ್ಟೋನ್‌, ಕ್ರೆಗ್‌ ಒವರ್ಟನ್‌, ಪಾರ್ಕಿನ್ಸನ್‌, ರೂಟ್‌, ಜೇಸನ್‌ ರಾಯ್‌, ಫಿಲ್‌ ಸಾಲ್ಟ್, ಬೆನ್‌ ಸ್ಟೋಕ್ಸ್‌, ರೀಸ್‌ ಟಾಪ್ಲೆ, ಡೇವಿಡ್‌ ವಿಲ್ಲೆ.

ಕೊಹ್ಲಿಗೆ ಗಾಯ; ಆಡುವುದು ಸಂಶಯ
ಹೊಸದಿಲ್ಲಿ: ಫಾರ್ಮ್ ಗೆ ಮರಳಲು ಒದ್ದಾಡುತ್ತಿರುವ ವಿರಾಟ್‌ ಕೊಹ್ಲಿ ಮೂರನೇ ಟಿ20 ಪಂದ್ಯದ ವೇಳೆ ತೊಡೆಸಂದು ಸೆಳೆತಕ್ಕೆ ಒಳಗಾಗಿದ್ದು ಮಂಗಳವಾರ ಓವಲ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ಕೊಹ್ಲಿಯ ಗಾಯದ ಪ್ರಮಾಣ ಹೇಗಿದೆ ಎಂಬುದು ತಿಳಿದಿಲ್ಲ, ಆದರೆ 33 ವರ್ಷದ ಅನುಭವಿ ಆಟಗಾರನಿಗೆ ಮೊದಲ ಪಂದ್ಯಕ್ಕೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಇದರಿಂದ ಅವರು ಮುಂದಿನೆರಡು ಪಂದ್ಯಗಳಿಗೆ ಲಭ್ಯರಿರುವ ಸಾಧ್ಯತೆಯಿದೆ.ಕೊಹ್ಲಿ ಅವರು ನಾಟಿಂಗಂನಿಂದ ಲಂಡನ್‌ಗೆ ತೆರಳಿದ ತಂಡದ ಬಸ್‌ನಲ್ಲಿ ಪ್ರಯಾಣಿಸಿಲ್ಲ. ವೈದ್ಯರ ಬಳಿಕ ಅವರ ಪರಿಸ್ಥಿತಿಯನ್ನು ಪರಿಶೀಲಿಸುವ ಸಾಧ್ಯತೆಯಿದೆ. ಹೀಗಾಗಿ ಅವರು ತಂಡದ ಬಸ್‌ನಲ್ಲಿ ಹೋಗಿಲ್ಲ ಎನ್ನಲಾಗಿದೆ.

ಚಾರ್ಟರ್‌ ವಿಮಾನದಲ್ಲಿ ಕೆರಿಬಿಯನ್‌ಗೆ
ಕೋವಿಡ್‌ ಭಯದ ಹಿನ್ನೆಲೆಯಲ್ಲಿ ಭಾರತೀಯ ಆಟಗಾರರನ್ನು ವಿಶೇಷ ಚಾರ್ಟರ್‌ ವಿಮಾನದಲ್ಲಿ ಮ್ಯಾಂಚೆಸ್ಟರ್‌ನಿಂದ ಪೋರ್ಟ್‌ ಆಫ್ ಸ್ಪೇನ್‌ಗೆ ಕಳುಹಿಸಲು ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.

ಏಕದಿನ ವೇಳಾಪಟ್ಟಿ
ದಿನ ತಂಡಗಳು ಸ್ಥಳ ಸಮಯ
ಜು. 12 ಭಾರತ-ಇಂಗ್ಲೆಂಡ್‌ ಓವಲ್‌ ಸಂ. 5.30
ಜು. 14 ಭಾರತ-ಇಂಗ್ಲೆಂಡ್‌ ಲಾರ್ಡ್ಸ್ ಸಂ. 5.30
ಜು. 17 ಭಾರತ-ಇಂಗ್ಲೆಂಡ್‌ ಮ್ಯಾಂಚೆಸ್ಟರ್‌ ಸಂ. 3.30

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next