Advertisement

ರೋಹಿತ್‌ ಶರ್ಮ ಟೆಸ್ಟ್‌ನಲ್ಲೂ ಇನ್ನಿಂಗ್ಸ್‌ ಆರಂಭಿಸಲಿ: ಅನಿಲ್‌ ಕುಂಬ್ಳೆ

01:37 AM Sep 09, 2019 | Sriram |

ಹೊಸದಿಲ್ಲಿ: ಟೆಸ್ಟ್‌ ಪಂದ್ಯಗಳಲ್ಲೂ ರೋಹಿತ್‌ ಶರ್ಮ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಬೇಕು ಎಂದು ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

Advertisement

ಕೆಲವು ದಿನಗಳ ಹಿಂದಷ್ಟೇ ಸೌರವ್‌ ಗಂಗೂಲಿ ಕೂಡ ರೋಹಿತ್‌ ಶರ್ಮ ಅವರನ್ನು ಟೆಸ್ಟ್‌ನಲ್ಲಿ ಓಪನರ್‌ ಆಗಿ ಆಡಿಸಬೇಕಿದೆ ಎಂದು ಹೇಳಿದ್ದರು. ಇದಕ್ಕೀಗ ಕುಂಬ್ಳೆ ಬೆಂಬಲ ಸೂಚಿಸಿದಂತಾಗಿದೆ.

ಭಾರತ ಕಳೆದ ವೆಸ್ಟ್‌ ಇಂಡೀಸ್‌ ಪ್ರವಾಸದ ವೇಳೆ 2 ಟೆಸ್ಟ್‌ಗಳನ್ನು ಗೆದ್ದರೂ ಆರಂಭಿಕರ ಸಮಸ್ಯೆ ಬಗೆಹರಿದಿಲ್ಲ. ಮಾಯಾಂಕ್‌ ಅಗರ್ವಾಲ್‌ ಅವರೇನೋ ಯಶಸ್ಸು ಕಂಡಿದ್ದಾರೆ ಆದರೆ ಕೆ.ಎಲ್‌. ರಾಹುಲ್‌ ಉತ್ತಮ ಆರಂಭವನ್ನು ಮುಂದುವರಿಸಿಕೊಂಡು ಹೋಗಲು ವಿಫ‌ಲರಾಗುತ್ತಿದ್ದಾರೆ. ಈ ಸ್ಥಾನಕ್ಕೆ ರೋಹಿತ್‌ ಅವರನ್ನು ಆಡಿಸಿದರೆ ಸಮಸ್ಯೆ ಬಗೆಹರಿಯಬಹುದು ಎನ್ನುವುದು ತನ್ನ ಅಭಿಪ್ರಾಯ ಎಂದು ಕುಂಬ್ಳೆ ಹೇಳಿದ್ದಾರೆ.

ವೆಸ್ಟ್‌ ಇಂಡೀಸ್‌ ಎದುರಿನ ಎರಡೂ ಟೆಸ್ಟ್‌ಗಳಲ್ಲಿ ರೋಹಿತ್‌ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಲಭಿಸಿರಲಿಲ್ಲ. ಈ ಸ್ಥಾನಕ್ಕೆ ಈಗಾಗಲೇ ಅಜಿಂಕ್ಯ ರಹಾನೆ, ಹನುಮ ವಿಹಾರಿ ಗಟ್ಟಿಯಾದಂತಿರುವ ಕಾರಣ ರೋಹಿತ್‌ ಪ್ರೇಕ್ಷಕನಾಗಿಯೇ ಉಳಿಯುವ ಸಾಧ್ಯತೆ ಹೆಚ್ಚು. ಹೀಗಾಗಿ ಅವರಿಗೆ ಭಡ್ತಿ ಕೊಟ್ಟರೆ ತಂಡದ ಓಪನಿಂಗ್‌ ಸಮಸ್ಯೆ ಕೂಡ ಬಗೆಹರಿದೀತು ಎಂಬುದು ಕುಂಬ್ಳೆ ಸೇರಿದಂತೆ ಅನೇಕ ಮಾಜಿಗಳ ಅಭಿಪ್ರಾಯ.

ಸೆಹವಾಗ್‌ ನಿದರ್ಶನ…
ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ ವಿರೇಂದ್ರ ಸೆಹವಾಗ್‌ ಅವರನ್ನು ನಾಯಕ ಗಂಗೂಲಿ ಆರಂಭಿಕನಾಗಿ ಕಣಕ್ಕಿಳಿಸಿದ ಅನಂತರ ಅವರು ಸ್ಫೋಟಕ ಬ್ಯಾಟ್ಸ್‌ ಮನ್‌ ಆಗಿ ಗುರುತಿಸಿಕೊಂಡರು. ಅದರಂತೆ ಟೆಸ್ಟ್‌ ನಲ್ಲಿ ರೋಹಿತ್‌ ಶರ್ಮ ಅವರಿಗೆ ಆರಂಭಿಕನಾಗಿ ಭಡ್ತಿ ನೀಡಿದರೆ ಯಶಸ್ಸು ಸಿಗಬಹುದು ಎಂಬುದು ಮಾಜಿ ಲೆಗ್‌ಸ್ಪಿನ್ನರ್‌ ಅಭಿಪ್ರಾಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next