Advertisement

ಪಿಯು ಪಠ್ಯ ಪರಿಷ್ಕರಣೆ ಸಮಿತಿಯಿಂದ ರೋಹಿತ್ ಚಕ್ರತೀರ್ಥಗೆ ಕೊಕ್ ?

03:59 PM Jun 07, 2022 | Team Udayavani |

ಬೆಂಗಳೂರು: ಪಿಯುಸಿ ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆ ಸಮಿತಿಯಿಂದ ರೋಹಿತ್ ಚಕ್ರತೀರ್ಥ ಅವರನ್ನು ಕೈ ಬಿಡುವುದಕ್ಕೆ ಸರಕಾರ ನಿರ್ಧರಿಸಿದೆ. ಈ ಮಧ್ಯೆ ಬರಗೂರು ರಾಮಚಂದ್ರಪ್ಪ ಸಮಿತಿಯು ಮುಂಬಯಿ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣಣ್ ಪಾಠವನ್ನೇ ಕೈ ಬಿಟ್ಟಿರುವುದು ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

Advertisement

ಎಂಟನೇ ತರಗತಿಯ ಕನ್ನಡ ದ್ವಿತೀಯ ಭಾಷೆ ಪಠ್ಯದಲ್ಲಿ ಮುಂಬಯಿ ದಾಳಿ ಹಾಗೂ ಮೇಜರ್ ಸಂದೀಪ್ ಉನ್ನಿಕೃಷ್ಣ, ಹೇಮಂತ್ ಕರ್ಕರೆ, ವಿಜಯ ಸಲಸ್ಕರ್, ತುಕಾರಾಂ ಓಂಬಳೆ ಸೇರಿದಂತೆ ಉಗ್ರರಿಂದ ಮುಂಬಯಿ ರಕ್ಷಣೆಗೆ ಹೋರಾಡಿ ಹುತಾತ್ಮರಾದವರ ಪಾಠವನ್ನು ಹಿಂದಿನ ಮುಡಂಬಡಿತ್ತಾಯ ಸಮಿತಿ ಪಠ್ಯದಲ್ಲಿ ಸೇರಿಸಿತ್ತು.

ಇದನ್ನೂ ಓದಿ:ಮೂರು ಪಕ್ಷಗಳಲ್ಲಿ ಪ್ರಾಮಾಣಿಕರೇ ಅಸ್ಪೃಶ್ಯರು: ಎಎಪಿ ಸೇರಿದ ಮುಖ್ಯಮಂತ್ರಿ ಚಂದ್ರು ಹೇಳಿಕೆ

ವಿದ್ಯಾರ್ಥಿ ಹಾಗೂ ಶಿಕ್ಷಕರ ಮಧ್ಯೆ ಸಂವಾದ ರೂಪದಲ್ಲಿ ನಡೆಯುವ ಈ ಪಾಠದಲ್ಲಿ ಮುಂಬಯಿ ದಾಳಿಕೋರರನ್ನು ಜಿಹಾದಿಗಳು, ಫಿದಾಯಿನ್ ಗಳು. ಅವರು ಪಾಕಿಸ್ತಾನದವರಾಗಿದ್ದು ಅನ್ಯಮತ ದ್ವೇಷಿಗಳು ಎಂದು ಹೇಳಲಾಗಿತ್ತು. ಜತೆಗೆ ರಾಷ್ಟ್ರೀಯ ರಕ್ಷಣಾ ಪಡೆ (ಎನ್ ಎಸ್ ಜಿ) ಶೌರ್ಯ ಸಾಹಸ ಹಾಗೂ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಬಲಿದಾನದ ಬಗ್ಗೆ ವರ್ಣಿಸಲಾಗಿತ್ತು. ಆದರೆ ಬರಗೂರು ಸಮಿತಿ ಮಾತ್ರ ಇದಕ್ಕೆ ಕತ್ತರಿ ಹಾಕಿದೆ. ಬೇರೆಯವರ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಕಾರಣ ನೀಡಿ ಪಾಠ ಕೈ ಬಿಡಲಾಗಿತ್ತು ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ಇದು ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ಕೊಕ್: ಈ ಮಧ್ಯೆ ರೋಹಿತ್ ಚಕ್ರತೀರ್ಥ ಅವರನ್ನು ಪಿಯು ಪಠ್ಯ ಪರಿಷ್ಕರಣೆ ಸಮಿತಿಯಿಂದ ಕೈ‌ಬಿಡಲು ಸರಕಾರ ನಿರ್ಧರಿಸಿದೆ. ಸಮಾಜ ವಿಜ್ಞಾನ ಪಾಠ ಪರಿಷ್ಕರಣೆಯ ಜವಾಬ್ದಾರಿಯನ್ನು ಸರಕಾರ ಈ‌ ಹಿಂದೆ ನೀಡಿತ್ತು. ಅದನ್ನು ವಾಪಾಸ್ ಪಡೆಯಲು ನಿರ್ಧರಿಸಿದೆ. ಚಕ್ರತೀರ್ಥ ಬದಲು ಬೇರೆಯವರನ್ನು ಸಮಿತಿಗೆ ನೇಮಕ ಮಾಡಲಾಗುತ್ತದೆ.

Advertisement

ಸಾರ್ವಜನಿಕರ ಮುಂದೆ: ಇದೆಲ್ಲದರ ಮಧ್ಯೆ ಮೂರು ಸಮಿತಿಯ (ಮುಡಂಬಡಿತ್ತಾಯ, ಬರಗೂರು, ರೋಹಿತ್) ಪರಿಷ್ಕೃತ ಪಠ್ಯವನ್ನು ಸಾರ್ವಜನಿಕರ ಮುಂದೆ ಇಡಲು ಸರಕಾರ ನಿರ್ಧರಿಸಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಅನಗತ್ಯ ವಿವಾದ ಸೃಷ್ಟಿಸುತ್ತಿರುವುದರಿಂದ ಸರಕಾರ ಈ ನಿರ್ಧಾರಕ್ಕೆ ಬಂದಿದ್ದು, ಎಲ್ಲವನ್ನೂ ಶಿಕ್ಷಣ ಇಲಾಖೆ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next