Advertisement
ಆದೇಶ ಹೊರಬಿದ್ದ ತಕ್ಷಣ ಅಕ್ರಂಪಾಷಾ ಅವರು ಬೆಂಗಳೂರಿನಿಂದ ಹಾಸನಕ್ಕೆ ಬಂದು ಕಾರ್ಯಭಾರ ವಹಿಸಿಕೊಂಡರು. ಕೇಂದ್ರ ಸ್ಥಾನದಲ್ಲಿದ್ದರೂ ನೂತನ ಜಿಲ್ಲಾಧಿಕಾರಿಯವರಿಗೆ ಕಾರ್ಯಭಾರ ವಹಿಸಿಕೊಡಲು ರೋಹಿಣಿ ಸಿಂಧೂರಿ ಅವರು ಕಚೇರಿಗೆ ಬರಲಿಲ್ಲ. ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಅವರಿಂದ ಅಕ್ರಂ ಪಾಷಾ ಕಾರ್ಯಭಾರ ವಹಿಸಿಕೊಂಡರು.
Related Articles
Advertisement
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದಿದ್ದ ದಿಶಾ ಸಮಿತಿ ಸಭೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಜಲ್ಲಿ ಮತ್ತು ಮರಳು ಸಕಾಲದಲ್ಲಿ ಸಿಗುತ್ತಿಲ್ಲ. ಗುತ್ತಿಗೆದಾರರು ಕಲ್ಲು ಕ್ವಾರಿಯಲ್ಲಿ ಜಲ್ಲಿ ಒಡೆಯಲು ಲೈಸೆನ್ಸ್ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಆರೋಪಿಸಿದ್ದರು. ಈ ಸಂದರ್ಭದಲ್ಲಿ ನಿಯಮ ನಿಬಂಧನೆ ಬಿಟ್ಟು ಪರವಾನಗಿ ಕೊಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿವರು ಮಾರುತ್ತರ ನೀಡಿದ್ದರು.
ಸಕಲೇಶಪುರ – ಹಾಸನ ನಡುವಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಗುತ್ತಿಗೆದಾರರು ಸಂಗ್ರಹಿಸಿದ್ದ ಮರಳು ಮುಟ್ಟುಗೋಲು ಹಾಕಿಕೊಂಡು 2 ಕೋಟಿ ರೂ. ದಂಡ ವಿಧಿಸಿದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಹಾಸನ ಜಿಪಂ ಉಪಾಧ್ಯಕ್ಷ ಸುಪ್ರದೀಪ್ ಯಜಮಾನ್ ಅವರು ಅಕ್ರಮ ಮರಳು ಸಂಗ್ರಹಕ್ಕೆ ಸಹಕಾರ ನೀಡಿದ್ದಾರೆ ಎಂದು ನೋಟಿಸ್ ಜಾರಿ ಮಾಡಿದ್ದರು. ಆಡಳಿತ ಪಕ್ಷದ ಮುಖಂಡರಿಗೇ ರೋಹಿಣಿ ಸಿಂಧೂರಿ ಅವರು ತೊಂದರೆ ಕೊಡುತ್ತಿದ್ದುದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಹ್ಯವಾಗಿರಲಿಲ್ಲ.
ಕೋರ್ಟ್ ಮೆಟ್ಟಿಲೇರಲು ರೋಹಿಣಿ ಚಿಂತನೆ?ಹಾಸನ: ಅವಧಿ ಪೂರ್ವ ವರ್ಗಾವಣೆಯನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಮತ್ತೆ ನ್ಯಾಯಾಲಯದ ಮೆಟ್ಟಿಲೇರಲಿದ್ದಾರೆ ಎಂದು ಅಧಿಕಾರಿಗಳ ವಲಯದಲ್ಲಿ ಚರ್ಚೆ ಅರಂಭವಾಗಿದೆ. ಒಂದು ಹುದ್ದೆಯಲ್ಲಿ ಐಎಎಸ್ ಅಧಿಕಾರಿಗಳನ್ನು ಕನಿಷ್ಠ 2 ವರ್ಷದ ಅವಧಿಗಿಂತ ಮೊದಲು ವರ್ಗ ಮಾಡಬಾರದೆಂಬ ನಿಯಮ ಆಧರಿಸಿ ನ್ಯಾಯಾಲಯದಲ್ಲಿ ಹೋರಾಟ ಮಾಡಿ ಹಾಸನ ಜಿಲ್ಲಾಧಿಕಾರಿ ಹುದ್ದೆಗೆ ಬಂದಿದ್ದ ರೋಹಿಣಿ ಸಿಂಧೂರಿ ಅವರು, ಈಗ ಮತ್ತೆ ಕೋರ್ಟ್ ಮೊರೆ ಹೋಗುವರು. ಹಾಗಾಗಿಯೇ ನೂತನ ಡೀಸಿಗೆ ಕಾರ್ಯಭಾರವಹಿಸಲು ಅವರು ನಿರಾಕರಿಸಿದ್ದಾರೆ ಎಂಬ ವದಂತಿ ಹರಡಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರ ಒತ್ತಡದಿಂದ ರೋಹಿಣಿ ಸಿಂಧೂರಿ ಅವರನ್ನು 2018ರ ಜನವರಿಯಲ್ಲಿ ವರ್ಗಾವಣೆ ಮಾಡಿತ್ತು. ಆದರೆ, 2017 ಜೂನ್‌ನಲ್ಲಿ ಹಾಸನ ಜಿಲ್ಲಾಧಿಕಾರಿ ಕಾರ್ಯಭಾರ ವಹಿಸಿಕೊಂಡಿದ್ದ ರೋಹಿಣಿ ಸಿಂಧೂರಿ, ತಮ್ಮನ್ನು ಅವಧಿ ಪೂರ್ವ ವರ್ಗಾವಣೆ ಮಾಡಲಾಗಿದೆ ಎಂದು ಸಿಎಟಿಯ ಮೊರೆ ಹೋಗಿದ್ದರು. ಆನಂತರ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗದ ನಿರ್ದೇಶನದನ್ವಯ ಚುನಾವಣೆ ಮುಗಿಯುವವರೆಗೆ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ ಸಿ.ಕೆ.ಜಾಫರ್ ಅವರನ್ನು ಹಾಸನ ಜಿಲ್ಲಾಧಿಕಾರಿ ಹುದ್ದೆಗೆ ವರ್ಗ ಮಾಡಲಾಗಿತ್ತು. ಆದರೆ, ರೋಹಿಣಿ ಸಿಂಧೂರಿ ಅವರ ವರ್ಗಾವಣೆ ವಿವಾದ ಹೈಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿದಿತ್ತು. ಆದರೆ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2018ರ ಜೂನ್‌ನಲ್ಲಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಆದೇಶವನ್ನು ಹಿಂತೆಗೆದುಕೊಂಡಿತು. ಹಾಗಾಗಿ ಕಳೆದ ಜೂನ್‌ನಲ್ಲಿ ಮತ್ತೆ ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿ ಕಾರ್ಯಭಾರ ವಹಿಸಿಕೊಂಡು ಮುಂದುವರಿದಿದ್ದರು. ಮುಂದಿನ ಜೂನ್‌ಗೆ ರೋಹಿಣಿ ಸಿಂಧೂರಿ ಅವರು 2 ವರ್ಷ ಅಧಿಕಾರ ಪೂರ್ಣಗೊಳಿಸುತ್ತಿದ್ದರು. ಅಲ್ಲಿಯವರೆಗೂ ಅವರು ಜಿಲ್ಲಾಧಿಕಾರಿಯವರು ಮುಂದುವರಿಯುವರು ಎಂದು ಹೇಳಲಾಗುತ್ತಿತ್ತು. ಆದರೆ, ಈಗ ವರ್ಗಾವಣೆಯಾಗಿದ್ದಾರೆ. ತಮ್ಮನ್ನು ಅವಧಿ ಪೂರ್ಣ ವರ್ಗಾವಣೆ ಮಾಡಲಾಗಿದೆ ಎಂದು ಮತ್ತೆ ರೋಹಿಣಿ ಸಿಂಧೂರಿ ಅವರು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆಯಲು ರೋಹಿಣಿ ಸಿಂಧೂರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ.