ರಬಕವಿ-ಬನಹಟ್ಟಿ : ಮುಂಬರುವ ಮಳೆಯನ್ನು ನಂಬಿ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ರೈತರು ಮುಂಗಾರು ಬಿತ್ತನೆಗೆ ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಭೂಮಿ ಹದಗೊಳಿಸುವ ಜೊತೆಗೆ ಕೃಷಿ ಪರಿಕರಗಳ ತಯಾರಿಕೆಯಲ್ಲಿ ನಿರತರಾಗಿದ್ದಾರೆ.
ರೈತರ ನಂಬಿಗಸ್ತ ಮಳೆ ರೋಹಿಣಿ ಇದೇ 25 ರಿಂದ ಪ್ರಾರಂಭವಾಗುತ್ತಿದ್ದು, ಈ ರೋಹಿಣಿ ಮಳೆ ಕೈ ಹಿಡಿದರೆ ಬದುಕು ಬಂಗಾರವಾಗುತ್ತದೆ ಎಂಬ ಆಸೆಯಿಂದ ರೈತ ಕುಳಿತ್ತಿದ್ದು, ಪ್ರತಿ ಬಾರಿಯೂ ಮಳೆಗಾಗಿ ಕಾಯುವ ರೈತರು ಬಿತ್ತನೆ ಬೀಜವನ್ನಿಟ್ಟುಕೊಂಡು ಆಕಾಶದತ್ತ ಮುಖ ಮಾಡಿರುವುದು ಸರ್ವೇ ಸಾಮಾನ್ಯ. ಈ ಬಾರಿ ಪೂರ್ವ ಬಾವಿಯಾಗಿ ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆಗೆ ಬೇಕಾದ ಕುಂಟೆ, ಪಲಗಾ, ಕೂರಿಗೆ, ನೊಗ, ಬುಕ್ಕಾ ಸಿದ್ಧತೆಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಡಿಗೇರ ಹಾಗೂ ಕಮ್ಮಾರರ ಬಳಿ ತಮ್ಮ ಪರಿಕರಗಳ ದುರಸ್ಥಿ ಮಾಡಿಸಿಕೊಂಡು ಬಿತ್ತನೆಗೆ ಸಿದ್ಧವಾಗಿದ್ದಾರೆ. ಕೆಲವು ಭಾಗ ಕೃಷ್ಣಾ ನದಿಯ ನೀರನ್ನು ಅವಲಂಭಿಸಿದರೆ ಕೆಲವು ಬಾಗ ಮಳೆ ಹಾಗೂ ಘಟಪ್ರಭಾ ಎಡದಂಡೆ ಕಾಲುವೆಯನ್ನು ಅವಲಂಭಿಸಿದ್ದಾರೆ.
ಮುಂಬರುವ ಮಳೆಯನ್ನು ನಂಬಿ ಈ ಭಾಗದ ರೈತರ ಮುಂಗಾರು ಪೂರ್ವ ಬಿತ್ತನೆ ಚಟುವಟಿಕೆಗಳನ್ನು ಭರದಿಂದ ನಡೆಸಿದ್ದಾರೆ. ಈ ಭಾಗದಲ್ಲಿ ಮುಂಗಾರು ಮುನ್ನಿರೀಕ್ಷೆಯನ್ನಿಟ್ಟುಕೊಂಡು ಮುಂಗಾರು ಬೆಳೆಗಳಾದ ದ್ವಿದಳ ದಾನ್ಯಗಳಾದ ಸೋಯಾಬೀನ್, ಬೆಳೆ, ಉದ್ದು, ಹೆಸರು, ಮಡಿಕೆಕಾಳು ಸೇರಿದಂತೆ ವಿವಿಧ ಬೆಳೆಗಳ ಜೊತೆ ವಾಣಿಜ್ಯ ಬೆಳೆಗಳಾದ ಕಬ್ಬು ಹಾಗೂ ಅರಿಷಿಣ ಬಿತ್ತನೆ ಮಾಡಲು ರೈತರು ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ.
Related Articles
ಕೂಲಿ ಕಾರ್ಮಿಕರ ಕೊರತೆ: ಪ್ರತಿ ವರ್ಷದಂತೆ ಈ ಬಾರಿಯೂ ಕೃಷಿ ಕೂಲಿ ಕಾರ್ಮಿಕರ ಕೊರತೆ ಕಂಡುಬಂದಿದೆ. ಕೃಷಿ ವೃತ್ತಿಯನ್ನು ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದರಿಂದ ರೈತರು ಬಹುತೇಕ ಕೃಷಿ ಯಂತ್ರಗಳತ್ತ ಮುಖ ಮಾಡಿದ್ದಾರೆ. ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಂಡು ಕೂಲಿ ಕಾರ್ಮಿಕರ ಕೊರತೆಯ ನಡುವೆಯೂ ಉತ್ತಮ ಬೆಳೆ ತೆಗೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ ಇತ್ತೀಚಿಗೆ ಯಾಂತ್ರಿಕ ಕೃಷಿ ಪದ್ದತಿಯನ್ನು ಪ್ರತಿ ಗ್ರಾಮದಲ್ಲಿ ಅಳವಡಿಸಿಕೊಂಡಿರುವುದನ್ನು ಕಾಣಬಹುದಾಗಿದೆ.
ಸಲಕರಣೆ ಬಾಡಿಗೆ: ಭೂಮಿ ಉಳುಮೆಗೆ ಟ್ರ‍್ಯಾಕ್ಟರ್ ಹಾಗೂ ಎತ್ತುಗಳಿಗೆ ಭಾರಿ ಬೇಡಿಕೆ ಬಂದಿದೆ. ಟ್ರ‍್ಯಾಕ್ಟರ್ ಉಳುಮೆ ಮಾಡಲು ಎಕರೆಗೆ 2100ರೂ. ಹಾಗೂ ಎತ್ತುಗಳ ಉಳುಮೆಗೆ ಒಂದು ಎಕರೆ 1600 ರೂ.ಗಳಷ್ಟು ಬೇಡಿಕೆ ಇದೆ. ಒಂದು ಎಕರೆ ನೆಲ ರೆಡಿ ಮಾಡಲು ಸುಮಾರು 7000 ರಿಂದ 8000 ರೂ ವರೆಗೆ ಬಾಡಿಗೆ ಆಗುತ್ತದೆ.
ರೈತರು ಸದ್ಯ ರೈತರು ರೋಹಿಣಿ ಮಳೆ ನಿರೀಕ್ಷೆಯಲ್ಲಿದ್ದು ಮಳೆ ಸಮೃದ್ದಿಯಾಗಿ ಬಂದರೆ ರೈತನ ಬದುಕು ಬಂಗಾರವಾಗುವುದರಲ್ಲಿ ಎರಡು ಮಾತಿಲ್ಲ. ಈ ಸಂದರ್ಬದಲ್ಲಿ ಯಾವುದೇ ಬಿತ್ತನೆ ಮಾಡಿದರೂ ಬರುವ ರೋಗಗಳು ಕಡಿಮೆ, ಬೆಳೆ ಸಮೃದ್ಧಿಯಾಗಿ ಬರುತ್ತದೆ.
-ಸದಾಶಿವ ಬಂಗಿ, ಸಾವಯವ ಕೃಷಿಕರು ಜಗದಾಳ
– ಕಿರಣ ಶ್ರೀಶೈಲ ಆಳಗಿ