ಮ್ಯಾನ್ಮಾರ್‌ನ ರೊಹಿಂಗ್ಯಾ ಜನಾಂಗದವರ ಸಮಸ್ಯೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಗಾಗುತ್ತಿದೆ. ರಾಖೈನ್‌ನಲ್ಲಿ ಆ. 25ರಿಂದೀಚೆಗೆ ಮತ್ತೆ ಶುರುವಾಗಿರುವ ಹಿಂಸಾಚಾರದಿಂದಾಗಿ ಲಕ್ಷಗಟ್ಟಲೆ ರೊಹಿಂಗ್ಯಾ ಮುಸಲ್ಮಾನರು ವಲಸೆ ಹೋಗುತ್ತಿದ್ದಾರೆ. ಮೂರು ವಾರದಲ್ಲಿ ಸುಮಾರು 4 ಲಕ್ಷ ಮಂದಿ ಮನೆಮಠ ಕಳೆದುಕೊಂಡು ಓಡಿಹೋಗಿದ್ದಾರೆ. ಈ ಪೈಕಿ ಹೆಚ್ಚಿನವರು ಹೋಗಿರುವುದು ಪಕ್ಕದಲ್ಲೇ ಇರುವ ಬಾಂಗ್ಲಾದೇಶಕ್ಕೆ. ಒಂದಷ್ಟು ಮಂದಿ ಮಿಜೋರಾಂ ಮೂಲಕ ಭಾರತಕ್ಕೆ ಬಂದಿರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ರೊಹಿಂಗ್ಯಾಗಳ ಮೇಲೆ
ಮ್ಯಾನ್ಮಾರ್‌ನ ಬಹುಸಂಖ್ಯಾತ ಬೌದ್ಧರು ಮತ್ತು ಅಲ್ಲಿನ ಸರಕಾರ ನಡೆಸುತ್ತಿರುವ ದೌರ್ಜನ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ. ವಿಶ್ವಸಂಸ್ಥೆಯೇ ಇದು ಒಂದು ಜನಾಂಗವನ್ನು ನಿರ್ಮೂಲನಗೊಳಿಸುವ ಪ್ರಯತ್ನ ಎಂದು ಕಿಡಿಕಾರಿದೆ. ಆದರೆ ಯಾವ ಖಂಡನೆ, ಎಚ್ಚರಿಕೆಗಳಿಗೆ ಬಗ್ಗದೆ ಮ್ಯಾನ್ಮಾರ್ ಸೇನೆ ರೊಹಿಂಗ್ಯಾಗಳನ್ನು ಒಕ್ಕಲೆಬ್ಬಿಸುವ ಕಾರ್ಯದಲ್ಲಿ ನಿರತವಾಗಿದೆ. ಮ್ಯಾನ್ಮಾರ್‌ನ ದಕ್ಷಿಣ ಭಾಗದಲ್ಲಿರುವ ರಾಖೈನ್‌ಗೆ ಸೇರಿದವರು ರೊಹಿಂಗ್ಯಾಗಳು. ಮ್ಯಾನ್ಮಾರ್‌ನ ಒಟ್ಟು ಜನಸಂಖ್ಯೆಯಲ್ಲಿ ಅವರಿರುವುದು ಬರೀ ಶೇ. 10 ಮಾತ್ರ. ಶತಮಾನಗಳಿಂದ ಅವರು ಅಲ್ಲಿ ವಾಸವಾಗಿದ್ದರೂ ಮ್ಯಾನ್ಮಾರ್ ಸ್ವತಂತ್ರವಾದ ಬಳಿಕ ಅವರಿಗೆ ಅಧಿಕೃತ ಪೌರತ್ವ ಸಿಕ್ಕಿಲ್ಲ. ಬೌದ್ಧ ಧರ್ಮೀಯರು ಬಹುಸಂಖ್ಯೆಯಲ್ಲಿರುವ ಮ್ಯಾನ್ಮಾರ್ ಅವರನ್ನು ಎಂದೂ ತನ್ನ ಪ್ರಜೆಗಳೆಂದು ಒಪ್ಪಿಕೊಳ್ಳಲು ತಯಾರಿಲ್ಲ.
ಬಾಂಗ್ಲಾದೇಶದಿಂದ ವಲಸೆ ಬಂದಿರುವ ಅವರಿಗೆ ಮ್ಯಾನ್ಮಾರ್‌ನಲ್ಲಿ ಬದುಕುವ ಅವಕಾಶ ಇಲ್ಲ ಎನ್ನುವುದು ಮ್ಯಾನ್ಮಾರ್ ವಾದ. ಈ ಕಾರಣಕ್ಕಾಗಿ ಕಳೆದ 70 ವರ್ಷಗಳಲ್ಲಿ ರೊಹಿಂಗ್ಯಾಗಳನ್ನು ಮ್ಯಾನ್ಮಾರ್‌ನಿಂದ ಓಡಿಸುವ ಸತತ ಪ್ರಯತ್ನಗಳಾಗಿವೆ. ಶಾಂತಿದೂತೆ ಬಿರುದಾಂಕಿತೆ ಮತ್ತು ಶಾಂತಿಗಾಗಿ ನೋಬೆಲ್ ಪ್ರಶಸ್ತಿ ಪಡೆದಿರುವ ಆ್ಯಂಗ್‌ಸಾನ್ ಸೂಕಿ ನೇತೃತ್ವದ ಪಕ್ಷ ಅಧಿಕಾರಕ್ಕೆ ಬಂದ ಬಳಿಕವಾದರೂ ರೊಹಿಂಗ್ಯಾ ಹಿಂಸಾಚಾರ ನಿಲ್ಲಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಇದೀಗ ವಿಶ್ವದ ಸಿಟ್ಟು ಸೂಕಿ ಅವರತ್ತ ತಿರುಗಿದ್ದು, ಅವರಿಗೆ ನೀಡಿರುವ ನೋಬೆಲ್ ಪ್ರಶಸ್ತಿಯನ್ನು ಹಿಂದೆಗೆದುಕೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿದೆ. ಆದರೆ ಮ್ಯಾನ್ಮಾರ್‌ನ ಸಂಕೀರ್ಣ ರಾಜಕೀಯ ವ್ಯವಸ್ಥೆಯಲ್ಲಿ ಸೂಕಿಯ ಅಧಿಕಾರ ಸೀಮಿತವಾಗಿದ್ದು, ಅವರು ಇಚ್ಛಿಸಿದರೂ ಹಿಂಸಾಚಾರವನ್ನು ಹತ್ತಿಕ್ಕುವುದು ಅಸಾಧ್ಯ. ಏಕೆಂದರೆ ಪಾಕಿಸ್ಥಾನದಂತೆ ಮ್ಯಾನ್ಮಾರ್‌ನಲ್ಲೂ ಪರಮಾಧಿಕಾರ ಇರುವುದು ಸೇನೆಯ ಬಳಿ. ಉನ್ನತ ಹುದ್ದೆಗಳಲ್ಲಿರುವ ಬೌದ್ಧ ರಾಷ್ಟ್ರೀಯವಾದಿಗಳ ಕೈಯಲ್ಲಿ ಸೇನೆಯ ಅಧಿಕಾರವಿದ್ದು, ಅದು ಸರಕಾರದ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ. ಸುಮಾರು 40,000 ರೊಹಿಂಗ್ಯಾ ಮುಸ್ಲಿಮರು ಭಾರತದಲ್ಲಿರುವುದರಿಂದ ನಾವು ಕೂಡ ಈ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದೇವೆ. ಅನಧಿಕೃತವಾಗಿ ಜಮ್ಮು-ಕಾಶ್ಮೀರ, ದಿಲ್ಲಿ, ತೆಲಂಗಾಣ, ಹೈದರಾಬಾದ್ ಮತ್ತಿತರೆಡೆಗಳಲ್ಲಿ ವಾಸವಾಗಿರುವ ಅವರನ್ನು ಗಡೀಪಾರು ಮಾಡಲು ಭಾರತ ಮುಂದಾಗಿರುವುದು ಈಗ ವಿವಾದಕ್ಕೆಡೆಯಾಗಿದೆ. ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗವೂ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಭಾರತದ ನಿಲುವನ್ನು ವಿರೋಧಿಸುತ್ತಿವೆ. ಆದರೆ ಈ ನಿರಾಶ್ರಿತರಿಂದ ದೇಶದ ಭದ್ರತೆಗೆ ಅಪಾಯವಿರುವುದರಿಂದ ಅವರನ್ನು ಗಡೀಪಾರು ಮಾಡಲೇಬೇಕೆಂದು ಸರಕಾರ ದೃಢ ನಿರ್ಧಾರ ಮಾಡಿದೆ. ಇದಕ್ಕೆ ಇಂಬು ನೀಡುವಂತೆ ದಿಲ್ಲಿಯಲ್ಲಿ ಸೋಮವಾರ ಸೆರೆಯಾಗಿರುವ ಅಲ್-ಖೈದಾ ಉಗ್ರನೊಬ್ಬ ರೊಹಿಂಗ್ಯಾ ಮುಸಲ್ಮಾನರಿಗೆ ಭಯೋತ್ಪಾದನೆ ತರಬೇತಿ ನೀಡಲು ಬಂದಿದ್ದ ಎಂಬ ಅಂಶವನ್ನು ಗುಪ್ತಚರ ಪಡೆ ಪತ್ತೆ ಹಚ್ಚಿದೆ.
ಹಲವು ನಿರಾಶ್ರಿತರು ಅಕ್ರಮ ಮಾರ್ಗದ ಮೂಲಕ ಆಧಾರ್, ವೋಟರ್ ಐಡಿ, ಪಾನ್ ಮುಂತಾದ ದಾಖಲೆಪತ್ರಗಳನ್ನು ಪಡೆದುಕೊಂಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಐಸಿಸ್ ಮತ್ತಿತರ ಉಗ್ರ ಸಂಘಟನೆಗಳು ಮತ್ತು ಪಾಕಿಸ್ಥಾನದ ಗುಪ್ತಚರ ಪಡೆ ಐಸಿಸ್ ಜತೆಗೆ ಅವರಿಗೆ ನಂಟಿದೆ ಎಂಬ ಮಾಹಿತಿಯಿದೆ. ಉಗ್ರ ಪಡೆಗಳು ವಿಧ್ವಂಸಕ ಕೃತ್ಯಗಳನ್ನು ಎಸಗಲು ಅವರನ್ನು ಉಪಯೋಗಿಸಿಕೊಳ್ಳುವ ಸಾಧ್ಯತೆಯಿದೆ ಎಂಬ ಆತಂಕ ಭಾರತದ್ದು. ಹೀಗಾಗಿ ಮಾನವೀಯತೆಯ ನೆಲೆಯಲ್ಲಿ ಇಟ್ಟುಕೊಂಡರೂ ಅಪಾಯವೇ. ಇದಲ್ಲದೆ ಭಾರತಕ್ಕೆ ತನ್ನ ಪ್ರಜೆಗಳಿಗೇ ಸಾಕಷ್ಟು ಮೂಲಸೌಕರ್ಯ ಒದಗಿಸಲು ಕಷ್ಟವಾಗಿರುವಾಗ ವಲಸೆ ಬಂದವರನ್ನು ಸಾಕುವುದು ಹೇಗೆ? ಹಾಗೆಂದು ಈ ನಿರಾಶ್ರಿತರನ್ನು ಗಡೀಪಾರು ಮಾಡುವುದಾದರೂ ಎಲ್ಲಿಗೆ? ಮ್ಯಾನ್ಮಾರ್‌ನಲ್ಲಿ ಅವರಿಗೆ ಮಾನ್ಯತೆ ಇಲ್ಲ. ಒಂದೆಡೆ ಅಂತಾರಾಷ್ಟ್ರೀಯವಾಗಿ ಭಾರತ ತೀವ್ರ ಟೀಕೆಗೆ ಗುರಿಯಾಗಿದೆ, ಇತ್ತ ದೇಶದೊಳಗಡೆಯೂ ರೊಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ಕೊಡಬೇಕೆಂಬ ಒತ್ತಾಯ ಇದೆ. ಒಟ್ಟಾರೆಯಾಗಿ ರೊಹಿಂಗ್ಯಾ ನಿರಾಶ್ರಿತರ ವಿಚಾರ ಭಾರತಕ್ಕೆ ತೀವ್ರ ಸಂದಿಗ್ಧ ಪರಿಸ್ಥಿತಿ ತಂದೊಡ್ಡಿದೆ.