“ಜಾತ್ರೆ’ ಸಿನಿಮಾ ನಿರ್ದೇಶಿಸಿದ್ದ ರವಿತೇಜ ಸದ್ದಿಲ್ಲದೆ ಮತ್ತೂಂದು ಚಿತ್ರಕ್ಕೆ ಕೈ ಹಾಕಿದ್ದ ವಿಷಯ ಗೊತ್ತೇ ಇದೆ. ಅದು “ಸಾಗುತ ದೂರ ದೂರ’. ಈಗ ಬಿಡುಗಡೆಗೂ ಸಜ್ಜಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆ ಮಾಡಿರುವ ಯಶ್, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. “ಸಾಗುತ ದೂರ ದೂರ’ ಚಿತ್ರದ ಟ್ರೇಲರ್ ಬಿಡುಗಡೆಗೆ ಆಗಮಿಸಿದ್ದ ಯಶ್, “ರವಿತೇಜ ನನ್ನ ಗೆಳೆಯ. “ರಾಜಧಾನಿ’ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದೆವು. ಒಳ್ಳೆಯ ಪ್ರತಿಭಾವಂತ. ಅವನ ಪ್ರತಿಭೆ ಆಗಲೇ ತಿಳಿದಿತ್ತು. ಒಳ್ಳೆಯ ಕೆಲಸಗಾರ. ಅವನು ಕರೆದಾಗ ಇಲ್ಲ ಅನ್ನದೆ ಬಂದಿದ್ದೇನೆ. ಇನ್ನು, ಉಷಾ ಭಂಡಾರಿ ಅವರು ಸಹ ಒಳ್ಳೆಯ ಕಲಾವಿದರು. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭಕೋರಿದರು ಯಶ್.
ಇದೊಂದು ಎಮೋಷನಲ್ ಜರ್ನಿ ಇರುವ ಕಥೆ. ಇಬ್ಬರು ಹುಡುಗರು ತನ್ನ ತಾಯಿ ಹುಡುಕಿ ಹೊರಡುವ ಕಥೆ ಇಲ್ಲಿದೆ. ಕ್ಲೈಮ್ಯಾಕ್ಸ್‌ನಲ್ಲಿ ಅವರ ತಾಯಿ ಸಿಗುತ್ತಾಳಾ ಇಲ್ಲವಾ ಅನ್ನೋದೇ ಕಥೆ. ಅದೊಂದು ಎಮೋಷನಲ್ ಕಥೆ ಆಗಿದ್ದು, ಪ್ರತಿಯೊಬ್ಬರಿಗೂ ಇದು ನಾಟುವ ಚಿತ್ರವಾಗಲಿದೆ ಎಂಬುದು ಚಿತ್ರತಂಡದ ಹೇಳಿಕೆ. ಇಲ್ಲಿ ಅಪೇಕ್ಷಾ ಅವರಿಗೆ ಎರಡು ಶೇಡ್ ಇರುವ ಪಾತ್ರವಿದೆಯಂತೆ.
ತಾಯಿ ಸೆಂಟಿಮೆಂಟ್ ಇಲ್ಲಿ ಹೆಚ್ಚಾಗಿದ್ದು, ಎಲ್ಲರಿಗೂ ಇಷ್ಟವಾಗುವುದರ ಜೊತೆಗೆ ಒಂದು ಮನಸ್ಸಿಗೆ ಹಿಡಿಸುವ ಸಂದೇಶ ಇಲ್ಲಿದೆ. ನನ್ನ ಹಾಗು ಇನ್ನೊಬ್ಬ ಚಿಕ್ಕ ಹುಡುಗನ ನಡುವಿನ ಕಥೆ ಇಲ್ಲಿ ಮುಖ್ಯವಾಗಿದ್ದು, ಜರ್ನಿಯಲ್ಲಿ ತಾಯಿ ಹುಡುಕಿ ಹೋಗುವ ಪಾತ್ರ ಎಲ್ಲರ ಮನಕಲಕುತ್ತದೆ. ಬಹುತೇಕ ಕುಂದಾಪುರ ಶೈಲಿಯ ಚಿತ್ರವಿದು, ಕುಂದಾಪುರ ಶೈಲಿಯ ಸಂಭಾಷಣೆಯೂ ಇಲ್ಲಿದೆ. ಹೊಸ ಪ್ರಯೋಗ ಇಲ್ಲಿ ಕಾಣಬಹುದು ಎನ್ನುತ್ತಾರೆ ಅಪೇಕ್ಷಾ.
ಚಿತ್ರದಲ್ಲಿ ಮಹೇಶ್, ಜಾಹ್ನವಿ, ಉಷಾ ಭಂಡಾರಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಇಲ್ಲಿ ಲವ್ ಇಲ್ಲ. ಮರಸುತ್ತುವ ಗೋಜಿಲ್ಲ. ಆದರೆ, ಅಮ್ಮನ ಸೆಂಟಿಮೆಂಟ್ ಕಥೆಯೇ ಜೀವಾಳ ಎನ್ನುವ ಚಿತ್ರತಂಡ, ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರಲು ತಯಾರಿ ಮಾಡಿಕೊಳ್ಳುತ್ತಿದೆ.
ಚಿತ್ರಕ್ಕೆ ಮಣಿಕಾಂತ್ ಕದ್ರಿ ಮೂರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರದ ಇನ್ನೊಂದು ವಿಶೇಷವೆಂದರೆ, ನೂರಾರು ಊರುಗಳಲ್ಲಿ ಚಿತ್ರೀಕರಣ ನಡೆಸಿರುವುದು. ಮುಖ್ಯವಾಗಿ ಚಿಕ್ಕಮಗಳೂರು, ಸಕಲೇಶಪುರ, ಮೂಡಿಗೆರೆ, ಮಂಗಳೂರು, ಬೆಂಗಳೂರು ಹಾಗೂ ಕುಂದಾಪುರ ಸುತ್ತಮುತ್ತ ಚಿತ್ರೀಕರಣವಾಗಿದೆ.