Advertisement

ರೈಲ್ವೇ ಕೆಳಸೇತುವೆ ಕಾಮಗಾರಿ: ಅಡ್ಡಿಯಾದ ಬಂಡೆ

11:42 AM Feb 15, 2023 | Team Udayavani |

ಮಂಗಳೂರು: ಮಹಾಕಾಳಿ ಪಡ್ಪುನಲ್ಲಿ ನಡೆಯುತ್ತಿರುವ ಬಹು ನಿರೀಕ್ಷಿತ ರೈಲ್ವೇ ಕೆಳ ಸೇತುವೆ (ಆರ್‌ಯುಬಿ) ಕಾಮಗಾರಿಗೆ ಆ ಭಾಗದಲ್ಲಿನ ಬಂಡೆಕಲ್ಲು ಅಡ್ಡಿಯಾಗಿದೆ ! ಮಹಾಕಾಳಿ ಪಡ್ಪುವಿನಲ್ಲಿ ಒಟ್ಟು ಎರಡು ರೈಲ್ವೇ ಕೆಳ ಸೇತುವೆ ನಿರ್ಮಾಣವಾಗುತ್ತಿದ್ದು, ಒಂದು ಕಡೆಯಲ್ಲಿ ಆಧುನಿಕ ಬಾಕ್ಸ್‌ ಪುಶ್ಶಿಂಗ್‌ ತಂತ್ರಜ್ಞಾನ ವಿಧಾನವನ್ನು ಅಳವಡಿಸಲಾಗುತ್ತಿದೆ. ಈ ಯೋಜನೆಯಂತೆ ಕಾಂಕ್ರೀಟ್‌ನ ಬಾಕ್ಸ್‌ಗಳನ್ನು ಹೈಡ್ರಾಲಿಕ್‌ ವ್ಯವಸ್ಥೆಯ ಮೂಲಕ ಭೂಮಿಯೊಳಗೆ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೊರಗೆ ಬರುವಂತೆ ಮಾಡಬೇಕಾಗಿದೆ. ಇದಕ್ಕೆ ಭೂಮಿಯಲ್ಲಿ ಮಣ್ಣು ಕೂಡ ಹದ ಆಗಿರಬೇಕು.

Advertisement

ಆದರೆ ಕಾಮಗಾರಿ ಉದ್ದೇಶಿತ ಪ್ರದೇಶದಲ್ಲಿ ಬಂಡೆಕಲ್ಲು ಇದ್ದು, ಕಾಂಕ್ರೀಟ್‌ ಬಾಕ್ಸ್‌ ಹೊರಬರಲು ಕಷ್ಟ. ಇದೇ ಕಾರಣಕ್ಕೆ ಬಂಡೆ ಕಲ್ಲನ್ನು ಪುಡಿ ಮಾಡಬೇಕಾದ ಅನಿವಾರ್ಯತೆ ಇದೆ. ಬಳಿಕವಷ್ಟೇ ಕಾಮಗಾರಿ ನಡೆಸಬೇಕಾಗಿದ್ದು, ಈ ಕೆಲಸಕ್ಕೆ ಅನುಮತಿಗೆಂದು ದ.ಕ. ಜಿಲ್ಲಾಧಿಕಾರಿಗಳಿಗೆ ರೈಲ್ವೇ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಅನುಮತಿ ದೊರೆತು ಬಂಡೆ ಪುಡಿ ಮಾಡಿದ ಬಳಿಕಷ್ಟೇ ಈ ಕಾಮಗಾರಿ ಮುಂದುವರೆಯಲಿದೆ.

ಅದೇ ರೀತಿ, ಮತ್ತೂಂದು ಬದಿಯಲ್ಲಿ ಗರ್ಡರ್‌ ಮೂಲಕ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಶೋರ್ನೂರು- ಮಂಗಳೂರು ಜಂಕ್ಷನ್‌ ಮತ್ತು ಶೋರ್ನೂರು-ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಸಂಪರ್ಕಿಸುವ ಹಳಿಗಳಿದ್ದು, ಮೇಲ್ಭಾಗದಲ್ಲಿ ರೈಲುಗಳು ಚಲಿಸುತ್ತಿರುವಂತೆಯೇ ಕೆಳಗೆ ಕಾಮಗಾರಿ ನಡೆಸಬೇಕಾಗಿದೆ.

ಹಲವು ವರ್ಷಗಳ ಬೇಡಿಕೆ

ಜಪ್ಪು ಮಹಾಕಾಳಿ ಪಡ್ಪುವಿನಲ್ಲಿ ಈ ಮೊದಲು ಚತುಷ್ಪಥ ರಸ್ತೆ ಹಾಗೂ ರೈಲ್ವೇ ಓವರ್‌ ಬ್ರಿಡ್ಜ್ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು.ಇದಕ್ಕಾಗಿ ಪಾಲಿಕೆಯಿಂದ 24 ಕೋ.ರೂ. ಗಳ ಪ್ರಸ್ತಾವನೆ ಸಿದ್ಧಪಡಿಸಿ, ರೈಲ್ವೇ ಇಲಾಖೆಗೆ ಕಳುಹಿಸಲಾಗಿತ್ತು. ಶೇ.50:50ರಂತೆ ಪಾಲಿಕೆ ಹಾಗೂ ರೈಲ್ವೇಯು ಹಣ ಜೋಡಿಸಲು ಉದ್ದೇಶಿಸಲಾಗಿತ್ತು. ಆದರೆ, ಪೂರ್ಣ ಹಣವನ್ನು ಪಾಲಿಕೆಯೇ ಭರಿಸಬೇಕು ಎಂದು ಪ್ರಸ್ತಾವನೆಯನ್ನು ರೈಲ್ವೇ ಇಲಾಖೆ ವಾಪಾಸ್‌ ಕಳುಹಿಸಿತ್ತು. ಪಾಲಿಕೆಯು ಪ್ರಸ್ತಾವನೆ ಬದಲಿಸಿ, 10 ಕೋ.ರೂ. ವೆಚ್ಚದಲ್ಲಿ ಅಂಡರ್‌ ಪಾಸ್‌ ಹಾಗೂ ರಸ್ತೆ ಅಭಿವೃದ್ಧಿಗೆ ಉದ್ದೇಶಿಸಲಾಗಿತ್ತು.

Advertisement

ಮಹಾಕಾಳಿ ಪಡ್ಪುವಿನಲ್ಲಿ ಉದ್ದೇಶಿತ ರೈಲ್ವೇ ಕೆಳ ಸೇತುವೆ (ಆರ್‌ಯುಬಿ)ಯ ಕಾಮಗಾರಿಗೆ ವೇಗ ನೀಡಲಾಗಿದೆ. ಈ ಭಾಗದ ಒಂದು ಬದಿ ಗರ್ಡರ್‌ ಅಳವಡಿಸುವ ಕಾಮಗಾರಿ ಆರಂಭಗೊಂಡಿದೆ. ಮತ್ತೂಂದು ಬದಿ ಬಾಕ್ಸ್‌ ಪುಶಿಂಗ್‌ ತಂತ್ರಜ್ಞಾನ ಮೂಲಕ ಕಾಮಾಗರಿ ನಡೆಯಲಿದೆ. ಇದಕ್ಕೆ ಸ್ಥಳದಲ್ಲಿರುವ ಬಂಡೆ ಕಲ್ಲು ಅಡ್ಡಿಯಾಗಿದೆ. ತೆರವು ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ರೈಲ್ವೇಯಿಂದ ಪತ್ರ ಬರೆಯಲಾಗಿದೆ. ಈ ವರ್ಷಾಂತ್ಯಕ್ಕೆ ಪೂರ್ಣ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

-ಅರುಣ್‌ಪ್ರಭ, ಸ್ಮಾರ್ಟ್‌ಸಿಟಿ ಜನರಲ್‌ ಮ್ಯಾನೇಜರ್‌

ರೈಲ್ವೇ ಕೆಳ ಸೇತುವೆ ಹಾಗೂ ಸಂಪರ್ಕ ರಸ್ತೆ ಅತ್ಯಗತ್ಯ ಎಂಬ ವ್ಯಾಪಕ ಬೇಡಿಕೆ-ಒತ್ತಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊನೆಗೂ ಕೆಲಸ ಆರಂಭಗೊಂಡಿದೆ. ಠೇವಣಿ ವಂತಿಗೆ ಆಧಾರಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ 30.7 ಕೋಟಿ ರೂ. ಮೊತ್ತವನ್ನು ರೈಲ್ವೇ ಇಲಾಖೆಗೆ ಪಾವತಿ ಮಾಡಿದೆ. ರೈಲ್ವೇ ಇಲಾಖೆಯಿಂದಲೇಟೆಂಡರ್‌ ಕರೆದು ಕಾಮಗಾರಿ ನಡೆಸಲಾಗುತ್ತಿದೆ. 17.6 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಿದೆ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ

 

_ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next