Advertisement

Tunnel ಕಾರ್ಮಿಕರಿರುವ ಸ್ಥಳ ತಲುಪಿದ ಪೈಪ್‌! ರಕ್ಷಣಾ ಕಾರ್ಯಾಚರಣೆಯ ಮೊದಲ ಹಂತ ಯಶಸ್ವಿ

10:22 PM Nov 20, 2023 | Team Udayavani |

ಸಿಲ್ಕ್ಯಾರಾ:ಉತ್ತರಾಖಂಡದ ಉತ್ತರಕಾಶಿಯಲ್ಲಿ ಸುರಂಗ ಕುಸಿದು 9 ದಿನಗಳು ಕಳೆದಿದ್ದು, ರಕ್ಷಣಾ ಕಾರ್ಯಾಚರಣೆ ಬಿರುಸು ಪಡೆದಿದೆ. 41 ಕಾರ್ಮಿಕರನ್ನು ರಕ್ಷಿಸುವ ನಿಟ್ಟಿನಲ್ಲಿ 5 ಅಂಶಗಳ ಕ್ರಿಯಾಯೋಜನೆಯನ್ನು ರೂಪಿಸಲಾಗಿದ್ದು, ಅದರಂತೆ, ಪ್ರತಿ ಯೋಜನೆಯ ಹೊಣೆಯನ್ನು 5 ಪ್ರತ್ಯೇಕ ಏಜೆನ್ಸಿಗಳಿಗೆ ವಹಿಸಲಾಗಿದೆ. ಮೂರು ಬದಿಗಳಿಂದ ಡ್ರಿಲ್ಲಿಂಗ್‌ ಮಾಡಿ ಒಳಗೆ ಸಿಲುಕಿರುವ ಕಾರ್ಮಿಕರನ್ನು ತಲುಪುವುದೇ ಇದರ ಉದ್ದೇಶವಾಗಿದೆ.

Advertisement

ಮೊದಲ ಹಂತದ ಯಶಸ್ಸು ಎಂಬಂತೆ, ಸೋಮವಾರ 6 ಇಂಚು ಅಗಲದ ಪರ್ಯಾಯ ಪೈಪ್‌ವೊಂದು ಕಾರ್ಮಿಕರಿದ್ದ ಸ್ಥಳವನ್ನು ತಲುಪಿದೆ. ಇದರ ಮೂಲಕ ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ಪೌಷ್ಟಿಕಾಂಶಯುಕ್ತ ಆಹಾರವನ್ನು ಕಾರ್ಮಿಕರಿಗೆ ತಲುಪಿಸಲು ಸಾಧ್ಯವಾಗಲಿದೆ. ಅಲ್ಲದೇ, ಕಾರ್ಮಿಕರೊಂದಿಗೆ ಸಂವಹನ ಸಾಧ್ಯವಾಗುವಂತೆ ಫೋನ್‌ ಮತ್ತು ಚಾರ್ಜರ್‌ವೊಂದನ್ನು ರವಾನಿಸಲಾಗಿದೆ.

ಜೊತೆಗೆ, ಎಂಡೋಸ್ಕೊಪಿ ಮಾದರಿಯ ಕ್ಯಾಮೆರಾ ಸಾಧನವನ್ನು ದೆಹಲಿಯಿಂದ ತರಿಸಲಾಗುತ್ತದೆ. ಅದನ್ನು ಈ ಪೈಪ್‌ ಮೂಲಕ ಕಳುಹಿಸಿದರೆ, ಒಳಗೆ ಸಿಲುಕಿರುವ ಕಾರ್ಮಿಕರೊಂದಿಗೆ ಹೊರಗಿರುವ ರಕ್ಷಣಾ ತಂಡವು ಮುಖ ಮುಖ ನೋಡಿಕೊಂಡು ಪರಸ್ಪರ ಸಂವಹನ ನಡೆಸಲು ಸಾಧ್ಯವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ತಜ್ಞರ ತಂಡ, ರೊಬೋಟ್‌ಗಳ ಆಗಮನ:
ಸೋಮವಾರ ಅಂತಾರಾಷ್ಟ್ರೀಯ ಸುರಂಗ ತಜ್ಞರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಇಂಟರ್‌ನ್ಯಾಷನಲ್‌ ಟನೆಲಿಂಗ್‌ ಆ್ಯಂಡ್‌ ಅಂಡರ್‌ಗ್ರೌಂಡ್‌ ಸ್ಪೇಸ್‌ ಅಸೋಸಿಯೇಷನ್‌ ಅಧ್ಯಕ್ಷ ಅರ್ನಾಲ್ಡ್‌ ಡಿಕ್ಸ್‌ ಅವರು ಕಾರ್ಮಿಕರ ರಕ್ಷಣೆ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದಾರೆ. ಇದರ ಜೊತೆಗೆ, ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯ ರೊಬೋಟಿಕ್ಸ್‌ ತಂಡವೂ ಸ್ಥಳಕ್ಕೆ ಬಂದಿದ್ದು, ಎರಡು ರೊಬೋಟ್‌ಗಳನ್ನೂ ತರಿಸಲಾಗಿದೆ. ಈ ರೊಬೋಟ್‌ಗಳು ನೆಲದಲ್ಲಿ ನಡೆದಾಡುವ ಸಾಮರ್ಥ್ಯ ಹೊಂದಿವೆ. ಆದರೆ, ಸುರಂಗ ಕುಸಿದ ಸ್ಥಳದಲ್ಲಿ ನೆಲವು ಜಾರುತ್ತಿರುವ ಕಾರಣ, ಅಲ್ಲಿ ರೊಬೋಟ್‌ಗೆ ನಡೆಯಲು ಸಾಧ್ಯವಾಗುತ್ತದೋ, ಇಲ್ಲವೋ ಎನ್ನುವ ಅನುಮಾನ ಇದೆ.

ಪ್ರಧಾನಿ-ಸಿಎಂ ಮಾತುಕತೆ:
ಈ ನಡುವೆ, ಸೋಮವಾರ ಪ್ರಧಾನಿ ಮೋದಿಯವರು ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಮಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಕೇಂದ್ರದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಕಾರ್ಮಿಕರ ನೈತಿಕ ಸ್ಥೈರ್ಯ ಕುಂದದಂತೆ ನೋಡಿಕೊಳ್ಳಿ ಎಂದೂ ಸಲಹೆ ನೀಡಿದ್ದಾರೆ. ಈ ಮಧ್ಯೆ, ಕಾರ್ಮಿಕರ ಕುಟುಂಬ ಸದಸ್ಯರ ಪ್ರಯಾಣ, ಆಹಾರ ಮತ್ತು ವಸತಿ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ಧಮಿ ಘೋಷಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next