Advertisement
ರಾಬರ್ಟ್ ಎಂಬ ಬೆಂಕಿ ಚೆಂಡು ತನ್ನ ಒಂದು ಅವತಾರವನ್ನು ತೋರಿಸಿ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಯಾಗಿರುತ್ತದೆ. ಆದರೆ, ಅಷ್ಟಕ್ಕೆ “ರಾಬರ್ಟ್’ ಆರ್ಭಟ ಮುಗಿಯೋದಿಲ್ಲ. ಮತ್ತೂಂದು ಅವತಾರದಲ್ಲಿ ಪ್ರೇಕ್ಷಕರ ಮನಸ್ಸಿಗೆ ಲಗ್ಗೆ ಇಡುತ್ತಾನೆ ಈ ರಾಬರ್ಟ್.
Related Articles
Advertisement
ಮುಖ್ಯವಾಗಿ “ರಾಬರ್ಟ್’ ಒಂದು ಮೇಕಿಂಗ್ ಸಿನಿಮಾ. ತಾಂತ್ರಿಕವಾಗಿ ಶ್ರೀಮಂತವಾಗಿರುವ ಜೊತೆಗೆ ಪ್ರತಿ ಫ್ರೇಮ್‌ನಲ್ಲೂ ಅದ್ಧೂರಿತನ ಎದ್ದು ಕಾಣುತ್ತದೆ. ಬಹುತೇಕ ಚಿತ್ರೀಕರಣ ಸೆಟ್‌ನಲ್ಲೇ ನಡೆದಿದೆ. ಆದರೆ, ಸೆಟ್‌ವರ್ಕ್‌ನ ಶ್ರಮ, ಪೂರ್ವತಯಾರಿ ತೆರೆಮೇಲೆ ಕಂಗೊಳಿಸಿದೆ. ಸೆಟ್ ಶೈಲಿ, ಕಲರ್, ಕಲಾವಿದರ ಕಾಸ್ಟ್ಯೂಮ್… ಹೀಗೆ ಪ್ರತಿಯೊಂದು ವಿಷಯದಲ್ಲೂ ಗಮನಹರಿಸಿದ್ದಾರೆ. ಸಿನಿಮಾದಲ್ಲಿ ಬರುವ ಕಮಿಷನರ್ ಆಫೀಸ್, ಗ್ಯಾರೇಜ್, ರಾಮ- ರಾವಣ ಸೆಟ್‌ಗಳು … ತುಂಬಾ ಸ್ಟೈಲಿಶ್ ಆಗಿ ಮೂಡಿಬಂದಿವೆ. ಇದೇ ಕೆಲಸ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲೂ ಎದ್ದು ಕಾಣುತ್ತಿದೆ. ಸೂಕ್ಷ ¾ ಅಂಶಗಳ ಬಗ್ಗೆಯೂ ಗಮನಹರಿಸಿ ಕಥೆಯ ಲಿಂಕ್ ಮಿಸ್ ಆಗದಂತೆ ನೋಡಿಕೊಂಡಿದ್ದಾರೆ ತರುಣ್.
ಚಿತ್ರದಲ್ಲಿನ ಸಂಭಾಷಣೆಗಳು ತುಂಬಾ ಹರಿತವಾಗಿವೆ. ಹಾಗಂತ ಇಲ್ಲಿ ಉದ್ದುದ ಡೈಲಾಗ್‌ಗಳಿಲ್ಲ. ಇರುವ ಡೈಲಾಗ್‌ಗಳು ಪಂಚಿಂಗ್ ಆಗಿವೆ. ಚಿತ್ರದಲ್ಲಿ ಅಲ್ಲಲ್ಲಿ ಕೆಲವು ಬರುವ ಸನ್ನಿವೇಶಗಳಲ್ಲಿ ಸಂದೇಶವೂ ಇದೆ. ಅದರಲ್ಲೊಂದು ತೃತೀಯ ಲಿಂಗಿಗಳ ಕುರಿತಾಗಿ. ತೃತೀಯ ಲಿಂಗಿಗಳನ್ನು ನಡೆಸಿಕೊಳ್ಳುವ ಕುರಿತಾಗಿ ಚಿತ್ರದಲ್ಲೊಂದು ದೃಶ್ಯವಿದೆ, ಜೊತೆಗೊಂದು ಡೈಲಾಗ್ ಕೂಡಾ ಇದ್ದು, ಇದು ಹೆಚ್ಚು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ. ರಾಮ, ರಾವಣ, ಹನುಮಂತ… ಬ್ಯಾಕ್ ಡ್ರಾಪ್‌ನಡಿ ಚಿತ್ರ ಸಾಗುವುದು ಮತ್ತೂಂದು ವಿಶೇಷ.
ನಿರ್ದೇಶಕ ತರುಣ್ ಎಲ್ಲವನ್ನು ಹದವಾದ ಮಿಶ್ರಣದೊಂದಿಗೆ ಬಡಿಸಿದ್ದಾರೆ. ಅನಗತ್ಯವಾದ ಕಾಮಿಡಿ, ಫೈಟ್, ಪಾತ್ರಗಳಿಂದ ಸಿನಿಮಾವನ್ನು ಮುಕ್ತವಾಗಿಸಿ “ರಾಬರ್ಟ್’ನ ತೂಕ ಹೆಚ್ಚಿಸಿದ್ದಾರೆ. ನಿರ್ಮಾಪಕರ ಅಷ್ಟೂ ಹಣವನ್ನು ತೆರೆಮೇಲೆ ಅಚ್ಚುಕಟ್ಟಾಗಿ ಜೋಡಿಸಿರುವುದು ಕಣ್ಣಿಗೆ ಹಬ್ಬವಾಗಿದೆ. ಈ ಚಿತ್ರದ ಹೈಲೈಟ್‌ಗಳಲ್ಲಿ ಹಾಡು ಹಾಗೂ ಫೈಟ್ ಅನ್ನು ಪರಿಗಣಿಸಲೇಬೇಕು. ಇಲ್ಲಿನ ಪ್ರತಿ ಫೈಟ್ ಕೂಡಾ ಸಖತ್ ಸ್ಟೈಲಿಶ್ ಆಗಿದೆ ಮತ್ತು ದರ್ಶನ್ ಅದರಲ್ಲಿ ಮಿಂಚಿದ್ದಾರೆ.
ದರ್ಶನ್ ಅವರ ಕೆರಿಯರ್‌ನಲ್ಲಿ ಇದೊಂದು ಹೊಸ ಬಗೆಯ ಸಿನಿಮಾ ಎಂದರೆ ತಪ್ಪಲ್ಲ. ಈ ಹಿಂದೆ ಅವರು ಸಾಕಷ್ಟು ಆ್ಯಕ್ಷನ್ ಸಿನಿಮಾಗಳನ್ನು ಮಾಡಿರಬಹುದು. ಆದರೆ, “ರಾಬರ್ಟ್ ಮಾತ್ರ ಅವೆಲ್ಲದಕ್ಕಿಂತ ಭಿನ್ನವಾಗಿ ನಿಲ್ಲುತ್ತದೆ. ಈ ಸಿನಿಮಾಕ್ಕಾಗಿ ದರ್ಶನ್ ತಮ್ಮನ್ನು ತೊಡಗಿಸಿಕೊಂಡಿರುವ ರೀತಿ ಇಷ್ಟವಾಗುತ್ತದೆ.
ಚಿತ್ರದಲ್ಲಿ ಎರಡು ಶೇಡ್‌ನ ಪಾತ್ರವಿದೆ. ಎರಡರಲ್ಲೂ ದರ್ಶನ್ ಇಷ್ಟವಾಗುತ್ತಾರೆ. ಡ್ಯಾನ್ಸ್‌ನಲ್ಲೂ ದರ್ಶನ್ ಮಿಂಚಿದ್ದಾರೆ. ನಾಯಕಿ ಆಶಾ ಭಟ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಆದರೆ, ನಟನೆಗಿಂತ ಹಾಡಿನಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ಉಳಿದಂತೆ ನಟ ವಿನೋದ್ ಪ್ರಭಾಕರ್, ರವಿಶಂಕರ್, ಜಗಪತಿ ಬಾಬು, ಶಿವರಾಜ್ ಕೆ ಆರ್ ಪೇಟೆ, ಚಿಕ್ಕಣ್ಣ … ಹೀಗೆ ಎಲ್ಲರೂ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಈ ಚಿತ್ರ ತಾಂತ್ರಿಕವಾಗಿ ಹೆಚ್ಚು ಶ್ರೀಮಂತವಾಗಿದೆ ಎಂದರೆ ಅದಕ್ಕೆ ಕಾರಣ ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಛಾಯಾಗ್ರಾಹಕ ಸುಧಾಕರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹಾಗೂ ಹಿನ್ನೆಲೆ ಸಂಗೀತ ನೀಡಿದ ಹರಿಕೃಷ್ಣ. ಪ್ರತಿಯೊಬ್ಬರ ಶ್ರಮ ಈ ಸಿನಿಮಾವನ್ನು ಸುಂದರವನ್ನಾಗಿಸಿದೆ.
ಚಿತ್ರ: ರಾಬರ್ಟ್
ರೇಟಿಂಗ್: ****
ನಿರ್ಮಾಣ: ಉಮಾಪತಿ ಶ್ರೀನಿವಾಸ್ ಗೌಡ
ನಿರ್ದೇಶನ: ತರುಣ್ ಕಿಶೋರ್ ಸುಧೀರ್
ತಾರಾಗಣ: ದರ್ಶನ್, ಆಶಾ ಭಟ್, ವಿನೋದ್ ಪ್ರಭಾಕರ್, ರವಿಶಂಕರ್, ಜಗಪತಿ ಬಾಬು, ಶಿವರಾಜ್ ಕೆ ಆರ್ ಪೇಟೆ, ಚಿಕ್ಕಣ್ಣ ಮತ್ತಿತರರು