ಕಲಬುರಗಿ: ಲಾರಿ ಚಾಲಕನನ್ನು ತಡೆದು ದರೋಡೆ ಮಾಡಿ, ನಿಂದನೆ ಮಾಡಿದ ಆರೋಪಿತರನ್ನು ಬಂಧಿಸಬೇಕೆಂದು ಒತ್ತಾಯಿಸಿ ನಗರದ ಪೊಲೀಸ್ ಆಯುಕ್ತಾಲಯದ ಎದುರು ಗುರುವಾರ ಬಂಜಾರಾ ಸಮುದಾಯದಿಂದ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಹೈಕೋರ್ಟ್ ಸಮೀಪದ ರಿಂಗ್ ರಸ್ತೆಯಲ್ಲಿ ಧನ್ನೂರ ತಾಂಡಾದ ನಿವಾಸಿ ಕಿಶೋರ ಪೋಮು ಜಾಧವ ಎನ್ನುವರ ಲಾರಿ ತಡೆದು ದುಷ್ಕರ್ಮಿಗಳು 25 ಸಾವಿರ ರೂ. ದರೋಡೆ ಮಾಡಿದ್ದರು. ಈ ಘಟನೆಯ ಆರೋಪಿತರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಸಮುದಾಯದ ಮಹಿಳೆಯರು ಮತ್ತು ಯುವಕರು ಒತ್ತಾಯಿಸಿದರು.
ಫೆ.2ರಂದು ಲಾರಿಯಲ್ಲಿ ಯಾದಗಿರಿಯಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದಾಗ ತಡರಾತ್ರಿ 2 ಗಂಟೆ ಸುಮಾರಿಗೆ ಲಾರಿಯನ್ನು ಐವರು ದುಷ್ಕರ್ಮಿಗಳು ತಡೆಗಟ್ಟಿದ್ದರು. ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಕಿಶೋರ ಪೋಮು ಜಾಧವ ಕುತ್ತಿಗೆಗೆ ಚಾಕು ಹಿಡಿದು ಅವಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೇ, 25 ಸಾವಿರ ರೂ. ನಗದು ಮತ್ತು ಮೊಬೈಲ್ ಕಸಿದುಕೊಂಡಿದ್ದರು ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿ, ಕಾರು ಹತ್ತಿ ಪರಾರಿಯಾಗುತ್ತಿದ್ದಾಗ ದರೋಡೆಕೋರರ ಕೈಯಲ್ಲಿದ್ದ ಮೊಬೈಲ್ ಕೆಳಗೆ ಬಿದ್ದಿತ್ತು. ಉಳಿದಂತೆ ಹಣದೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹೀಗಾಗಿ ಆರೋಪಿತರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಮಿತುನ್ ರಾಠೊಡ, ಅಕ್ಷಯ ರಾಜು ಪವಾರ, ಧನರಾಜ ಪವಾರ, ಸಂದೀಪ ಪವಾರ, ಸದಾನಂದ ಪವಾರ, ರಾಜು ಚವ್ಹಾಣ, ಸಾಗರ ರಾಠೊಡ, ಪುತಳಿಬಾಯಿ, ಹೀರಾಬಾಯಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.