Advertisement

ರೈಲಿನಲ್ಲಿ ಅಮಲು ಪದಾರ್ಥ ನೀಡಿ ದರೋಡೆ !

10:01 AM Oct 14, 2018 | |

ಉಡುಪಿ: ದಿಲ್ಲಿ-ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲಿನಲ್ಲಿ ನಾಸಿಕ್‌ನಿಂದ ಉಡುಪಿಗೆ ಬರುತ್ತಿದ್ದ ಕುಟುಂಬಕ್ಕೆ ಅಮಲು ಪದಾರ್ಥ ನೀಡಿ ಚಿನ್ನಾಭರಣ, ನಗದು ದೋಚಿದ ಘಟನೆ ಅ. 11ರಂದು ಸಂಭವಿಸಿದೆ. ರೈಲ್ವೆ ಯಾತ್ರೀ ಸಂಘದ ಕೋಶಾಧಿಕಾರಿ  ಉಡುಪಿ ಕಿನ್ನಿಮೂಲ್ಕಿಯ ರಾಮಚಂದ್ರ ಆಚಾರ್ಯ ಮತ್ತು ಅವರ ಸಹೋದರಿ ರಾಧಮ್ಮ ದರೋಡೆಗೊಳಗಾದವರು.

Advertisement

ನಡೆದುದೇನು?
ರಾಮಚಂದ್ರ ಆಚಾರ್ಯ (60) ಅವರು ನಾಸಿಕ್‌ನಲ್ಲಿ ಸಂಬಂಧಿಕರ ಮನೆಯ ಕಾರ್ಯಕ್ರಮವೊಂದನ್ನು ಮುಗಿಸಿ ಸಹೋದರಿಯರಾದ ರಾಧಮ್ಮ, ಸೀಮಾ ರಾವ್‌ ಮತ್ತು ತುಳಸಿ ಉಪಾಧ್ಯಾಯ ಅವರೊಂದಿಗೆ ಅ. 11ರಂದು ಬೆಳಗ್ಗೆ 6 ಗಂಟೆಗೆ ಉಡುಪಿಗೆ ಮರಳಲು ನಾಸಿಕ್‌ ರೋಡ್‌ ರೈಲು ನಿಲ್ದಾಣದಲ್ಲಿ ದಿಲ್ಲಿ-ಎರ್ನಾಕುಲಂ ಮಂಗಳಾ ಎಕ್ಸ್‌ಪ್ರೆಸ್‌ ಹತ್ತಿದ್ದರು. ರಾಮಚಂದ್ರ ಆಚಾರ್ಯ ಮತ್ತು ರಾಧಮ್ಮ ಒಂದು ಕಂಪಾರ್ಟ್‌ಮೆಂಟ್‌ನಲ್ಲಿ ಉಳಿದವರು ಇನ್ನೊಂದು ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ಮೇಲ್ಗಡೆ ಸೀಟಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಮಜ್ಜಿಗೆಕೊಟ್ಟಿದ್ದು ಅದನ್ನು ಸೇವಿಸಿದ ರಾಮಚಂದ್ರ ಆಚಾರ್ಯ ಮತ್ತು ರಾಧಮ್ಮ ಪ್ರಜ್ಞೆ ಕಳೆದುಕೊಂಡರು. ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಕುಂದಾಪುರ ಸಮೀಪ ಬರುವಾಗ ಎಚ್ಚರಗೊಂಡ ಆಚಾರ್ಯರು ಪರ್ಸ್‌, ಬ್ಯಾಗ್‌ ಇಲ್ಲದಿರುವುದನ್ನು ಕಂಡು ಇನ್ನೊಂದು ಕಂಪಾರ್ಟ್‌ಮೆಂಟ್‌ಗೆ ಬಂದು ಇತರ ಸಹೋದರಿಯರ ಬಳಿ ವಿಷಯ ತಿಳಿಸಿದರು. ಅವರು ಬಂದು ಪರಿಶೀಲಿಸಿದಾಗ ರಾಧಮ್ಮ ಅವರ ಮೈಮೇಲಿದ್ದ ಚಿನ್ನಾಭರಣ, ನಗದು ಮೊದಲಾದ ಸೊತ್ತುಗಳನ್ನೂ ದರೋಡೆ ಮಾಡಿರುವುದು ತಿಳಿಯಿತು. ಬಳಿಕ ಉಡುಪಿ ನಿಲ್ದಾಣದಲ್ಲಿ ಇಳಿದು ಆಸ್ಪತ್ರೆಗೆ ದಾಖಲಾಗಿ ಇದೀಗ ಚೇತರಿಸಿಕೊಂಡಿದ್ದಾರೆ.

ಮಜ್ಜಿಗೆಯಲ್ಲಿ ನಾನು ಅರ್ಧ ಮಾತ್ರ ಕುಡಿದಿದೆ. ಅಕ್ಕ ಪೂರ್ತಿ ಕುಡಿದಿದ್ದರಿಂದ ಎಚ್ಚರವೇ ಆಗಲಿಲ್ಲ. ಉಡುಪಿ ರೈಲು ನಿಲ್ದಾಣದಲ್ಲಿ ಅವರನ್ನು ಎತ್ತಿಕೊಂಡು ರೈಲಿನಿಂದ ಕೆಳಗಿಳಿಸಬೇಕಾಯಿತು ಎಂದು ಆಚಾರ್ಯ ವಿವರಿಸಿದ್ದಾರೆ.
ಟಿಕೆಟ್‌ ಹಾಗೆಯೇ ಇದೆ “ನಾವು ನಾಸಿಕ್‌ಗೆ ಹೋಗುವಾಗ ಅಥವಾ ಬರುವಾಗ ನಮ್ಮ ಟಿಕೆಟ್‌ ಚೆಕಿಂಗ್‌ಗೆ ಕೂಡ ಟಿಸಿ
ಗಳು ಬಂದಿಲ್ಲ. ಬೇರೆ ರಕ್ಷಣೆಯನ್ನು ಹೇಗೆ ನಿರೀಕ್ಷಿಸುವುದು? ಟಿಕೆಟ್‌ ಮೂಲರೂಪದಲ್ಲಿಯೇ ಇದ್ದು, ನಾನು ಪ್ರಯಾಣಿಸಿಲ್ಲ ಎಂದು ರಿಫ‌ಂಡ್‌ ಪಡೆಯಲು ಕೂಡ ಅವಕಾಶವಿದೆ’ ಎಂದು ಇಲಾಖೆಯ ನಿರ್ಲಕ್ಷ್ಯವನ್ನು ಆಚಾರ್ಯ ಟೀಕಿಸಿದ್ದಾರೆ.

ಕಳೆದುಕೊಂಡಿದ್ದೇನು?
ರಾಮಚಂದ್ರ ಆಚಾರ್ಯರ 30,000 ರೂ. ನಗದು, ಮೊಬೈಲ್‌, ರಾಧಮ್ಮ ಅವರ ಎರಡೆಳೆಯ ಬಂಗಾರ, ಮುತ್ತಿನ ಗುಂಡುಸರ, 1 ಕಿವಿಯೋಲೆ, 2 ಉಂಗುರ, 15,000 ರೂ. ನಗದು. ರಾಧಮ್ಮ ಅವರು ಒಂದು ಮಗ್ಗುಲಿಗೆ ಮಲಗಿದ್ದರಿಂದ ಇನ್ನೊಂದು ಕಿವಿಯೋಲೆಯನ್ನು ತೆಗೆಯಲಾಗಲಿಲ್ಲ.

ರೈಲ್ವೇ ಪೊಲೀಸರು ಉಡುಪಿ ರೈಲು ನಿಲ್ದಾಣದಿಂದ ಮನೆಗೆ ತಲುಪಿಸಿದ್ದು, ಬಳಿಕ ರಾಮಚಂದ್ರ ಆಚಾರ್ಯ, ರಾಧಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚೇತರಿಸಿಕೊಂಡು ಶನಿವಾರ ಮನೆಗೆ ಮರಳಿದ್ದಾರೆ. ರಾಧಮ್ಮ ಪೂರ್ಣವಾಗಿ ಚೇತರಿಸಿಕೊಳ್ಳಬೇಕಿದೆ.  ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next