ಕಲಬುರಗಿ: ಜಿಲ್ಲೆಯ ಕಮಲಾಪುರ ಪಟ್ಟಣದ ಸಂಗಮೇಶ್ವರ ಜ್ಯುವೆಲರ್ಸ್ ಅಂಗಡಿ ಮಾಲೀಕ ವಿಜಯಕುಮಾರ ಸಿದ್ರಾಮಯ್ಯ ಮಠ ಅವರ ಮೇಲೆ ಗುಂಡು ಹಾರಿಸಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ನೆಹರು ಗಂಜ್‌ನ ಸಂಜೀವ ನಗರದ ಭರತ ವಿವೇಕಾನಂದ ಗಾಯಕವಾಡ, ಹುಮನಾಬಾದ ನಿವಾಸಿ ರಾಜು ಕಾಣೆ, ಬೀದರ್‌ನ 17 ವರ್ಷದ ಅಪ್ರಾಪ್ತನೊಬ್ಬನನ್ನು ಬಂಧಿಸಲಾಗಿದೆ. ಕಳುವಾದ ಚಿನ್ನಾಭರಣ, ಒಂದು ಪಿಸ್ತೂಲ್ ಮತ್ತು ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ತಿಳಿಸಿದರು.
ಪೊಲೀಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜ.28ರಂದು ಸಂಜೆ 6:30ಕ್ಕೆ ಚಿನ್ನ ಖರೀದಿ ನೆಪದಲ್ಲಿ ಸಂಗಮೇಶ್ವರ ಜ್ಯುವೆಲರ್ಸ್ ಮಾಲೀಕ ವಿಜಯಕುಮಾರ ಮಠ ತಲೆಗೆ ಗುಂಡು ಹಾರಿಸಿ ಅಂಗಡಿಯಲ್ಲಿದ್ದ 2ರಿಂದ 2.5 ತೊಲೆ ಬಂಗಾರದ ಆಭರಣ ದೋಚಿಕೊಂಡು ಹೋಗಿದ್ದರು.ಈ ಸಂಬಂಧ ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ, ಗ್ರಾಮೀಣ ಉಪ ವಿಭಾಗದ ಡಿಎಸ್‌ಪಿ ಎಸ್.ಎಸ್. ಹುಲ್ಲೂರು ಮಾರ್ಗದರ್ಶನದಲ್ಲಿ ಗ್ರಾಮೀಣ ವೃತ್ತದ ಸಿಪಿಐ ರಾಘವೇಂದ್ರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಆರೋಪಿಗಳು ಹುಮನಾಬಾದ ನಿವಾಸಿ ರಾಜು ಕಾಣೆ ಎನ್ನುವರ ಸಹಾಯದಿಂದ ಬೀದರ್‌ನಲ್ಲಿ ಎರಡು ಪಿಸ್ತೂಲ್ ಮತ್ತು ಎರಡು ಜೀವಂತ ಗುಂಡು ಖರೀದಿಸಿದ್ದು, ನಂತರ ನಗರದ ಶಾಂತಿನಗರದಲ್ಲಿ ಒಂದು ಪಲ್ಸರ್ ಬೈಕ್ ಕದ್ದು ಕಮಲಾಪುರಕ್ಕೆ ತೆರಳಿ ಕೃತ್ಯ ಎಸಗಿದ್ದರು. ದೋಚಿದ ನಾಲ್ಕು ಜೊತೆ ಕಿವಿಯೋಲೆಗಳನ್ನು ಮಾರಾಟ ಮಾಡಿದ್ದು, ಇನ್ನುಳಿದ ಆಭರಣಗಳಲ್ಲಿ ಕೆಲವನ್ನು ರಾಜು ಡಾಂಗೆ ಹತ್ತಿರ, ಕೆಲವೊಂದು ಮನೆಯಲ್ಲಿ ಇರಿಸಿಲಾಗಿ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
ಕೃತ್ಯಕ್ಕೆ ಬಳಸಿದ ಪಿಸ್ತೂಲ್‌ನ್ನು ಶರಣಬಸವೇಶ್ವರ ಕೆರೆಯ ಪಕ್ಕದ ಖೀಲ್ಲಾದ ಸುತ್ತಲು ಇರುವ ನೀರಿನಲ್ಲಿ ಎಸೆದಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಆರೋಪಿಗಳು ನೀಡಿದ ಮಾಹಿತಿಯಂತೆ ಕೆಲವೊಂದು ಆಭರಣ, ಒಂದು ಪಿಸ್ತೂಲ್ ಮತ್ತು ಬೈಕ್ ಜಪ್ತಿ ಮಾಡಲಾಗಿದೆ. ಪಿಸ್ತೂಲ್ ಮಾರಾಟ ಮಾಡಿದ ರಾಜು ಕಾಣೆಯನ್ನು ವಶಕ್ಕೆ ಪಡೆಯಲಾಗಿದೆ. ಜ್ಯುವೆಲರ್ಸ್ ಪಕ್ಕದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.
ಕಮಲಾಪುರ ಪಿಎಸ್‌ಐ ಶಿವಶಂಕರ ಸಾಹು, ಗ್ರಾಮೀಣ ಠಾಣೆ ಪಿಎಸ್‌ಐ ಚಂದ್ರಶೇಖರ ತಿಗಡಿ, ಅಪರಾಧ ವಿಭಾಗದ ಪಿಎಸ್‌ಐ ವಾತ್ಸಲ್ಯಾ, ಮಹಾಗಾಂವ ಪಿಎಸ್‌ಐ ಜಗದೇವಪ್ಪಾ ಪಾಳಾ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ, ಡಿಎಸ್‌ಪಿ ಎಸ್.ಎಸ್. ಹುಲ್ಲೂರು ಇದ್ದರು.