Advertisement

ದರೋಡೆ ಪ್ರಕರಣ: ಬಂಧಿತರಿಂದ ಸೊತ್ತು ವಶ,  ಪೊಲೀಸರಿಗೆ ಬಹುಮಾನ

09:55 AM Apr 17, 2018 | Team Udayavani |

ಉಪ್ಪಿನಂಗಡಿ: ಜಿಲ್ಲೆಯ ಮೂರು ಕಡೆಗಳಲ್ಲಿ ನಡೆದ ಮನೆ ದರೋಡೆ ಪ್ರಕರಣವನ್ನು  ಭೇದಿಸಿರುವ ಉಪ್ಪಿನಂಗಡಿ ಪೊಲೀಸರು, ಇಬ್ಬರು ಕುಖ್ಯಾತ ಅಂತಾರಾಜ್ಯ ದರೋಡೆ ಕೋರರನ್ನು ಬಂಧಿಸಿ ದರೋಡೆ ನಡೆಸಿರುವ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

Advertisement

ಕೇರಳದ ತ್ರಿಶ್ಶೂರ್‌ ಜಿಲ್ಲೆಯ ಪುತ್ತನ್‌ ವೀಟಿಲ್‌ ಮನೆ ನಿವಾಸಿ ದಿ| ಅಬ್ದುಲ್‌ ರಝಾಕ್‌  ಅವರ ಪುತ್ರ ಇಲ್ಯಾಸ್‌ (34) ಹಾಗೂ ಅದೇ ಜಿಲ್ಲೆಯ ಕಾರ್ಪೊರೇಷನ್‌ ಪ್ಲಾಟ್‌ ನಂ. 1-6 ನಿವಾಸಿ ವಿಲ್ಸನ್‌ ಅವರ ಪುತ್ರ ನೆಲ್ಸನ್‌ ಸಿ.ವಿ. (30) ಬಂಧಿತರು. ಇವರು ಪೆರಿಯಶಾಂತಿ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಉಪ್ಪಿನಂಗಡಿ  ಉಪನಿರೀಕ್ಷಕ ನಂದಕುಮಾರ್‌ ನೇತೃತ್ವದ ಠಾಣಾ ಅಪರಾಧ ಪತ್ತೆ ಕರ್ತವ್ಯದ ತಂಡ ಎ.9ರಂದು ಬಂಧಿಸಿದೆ. ಮತ್ತೋರ್ವ ಆರೋಪಿ ಕೇರಳದ ಸಲೀಂ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ  ನಡೆಯುತ್ತಿದೆ.

ಬಂಧಿತರನ್ನು ಪೊಲೀಸ್‌ ಕಸ್ಟಡಿಗೆ  ಪಡೆದು ಹೆಚ್ಚಿನ ವಿಚಾರಣೆ ನಡೆಸಿ,  ದರೋಡೆ ನಡೆಸಿದ 237 ಗ್ರಾಂ ಚಿನ್ನಾಭರಣವನ್ನು ತ್ರಿಶ್ಶೂರ್‌ನಿಂದ ವಶಪಡಿಸಲಾಗಿದೆ. ಇದರಲ್ಲಿ ಕೆದಿಲ ದಲ್ಲಿ ದರೋಡೆ ನಡೆಸಿದ 144 ಗ್ರಾಂ, ಪಟ್ರಮೆಯಲ್ಲಿ ದರೋಡೆ ನಡೆಸಿದ 28 ಗ್ರಾಂ  ಹಾಗೂ ಉಪ್ಪಿನಂಗಡಿ ಯಿಂದ  ದರೋಡೆ ನಡೆಸಿದ 65 ಗ್ರಾಂ ಚಿನ್ನಾಭರಣಗಳು ಸೇರಿವೆ.  ಕೃತ್ಯಕ್ಕೆ ಬಳಸಿದ ಎರಡು ಬೈಕ್‌, ಒಂದು ಆಟಿಕೆ ಪಿಸ್ತೂಲ್‌, ಎರಡು ಚಾಕು ಹಾಗೂ ಪ್ಲಾಸ್ಟರನ್ನು  ಕೂಡ ವಶಕ್ಕೆ ಪಡೆಯಲಾಗಿದೆ.

ಪಟ್ರಮೆ ಪ್ರಕರಣ
2017 ನ. 28ರಂದು ಧರ್ಮಸ್ಥಳ ಠಾಣೆ ವ್ಯಾಪ್ತಿಯ ಪಟ್ರಮೆ ದೇಂತನಾಜೆಯ ನಾಗೇಂದ್ರ ಪ್ರಸಾದ್‌  ಅವರ ಮನೆಗೆ ನುಗ್ಗಿದ ಈ  ತಂಡ  ನಾಗೇಂದ್ರ ಪ್ರಸಾದ್‌ ಅವರನ್ನು ಕುರ್ಚಿಗೆ ಕಟ್ಟಿ ಹಾಕಿ, ಪಿಸ್ತೂಲ್‌, ಚೂರಿ ತೋರಿಸಿ ಬೆದರಿಸಿ ಹಲ್ಲೆ ನಡೆಸಿ, ಮನೆಯಲ್ಲಿದ್ದ 28 ಗ್ರಾಂ ಚಿನ್ನಾಭರಣ, 1.40 ಲ.ರೂ, ಬೆಳ್ಳಿಯ ಪೂಜಾ ದೀಪ, ಮೂರು ವಾಚ್‌, ಎಟಿಎಂ ಕಾರ್ಡ್‌ (ಪಿನ್‌ ನಂಬರ್‌ ಸಹಿತ) 3 ಹಾಗೂ ಮೊಬೈಲ್‌ಗ‌ಳನ್ನು ದರೋಡೆ ನಡೆಸಿತ್ತು. ಬಳಿಕ ಉಪ್ಪಿನಂಗಡಿ ಹಾಗೂ ನೆಲ್ಯಾಡಿಯ ಎಟಿಎಂನಿಂದ ಹಣ ಡ್ರಾ ಮಾಡಿದ್ದರು.

ಕೆದಿಲ ಪ್ರಕರಣ
2017 ಡಿ. 22ರಂದು ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೆದಿಲದ ಶಿವಕುಮಾರ್‌ ಪುತ್ತೂರಾಯ  ಅವರ ಮನೆಗೆ ನುಗ್ಗಿ ಪಿಸ್ತೂಲ್‌, ಚೂರಿ ತೋರಿಸಿ ಬೆದರಿಸಿ, 144 ಗ್ರಾಂ ಚಿನ್ನಾಭರಣ ಹಾಗೂ 60 ಸಾ. ರೂ. ಹಾಗೂ 3 ಎಟಿಎಂ ಕಾರ್ಡ್‌ಗಳನ್ನು ದರೋಡೆ ನಡೆಸಿ, ಕಲ್ಲಡ್ಕದಲ್ಲಿ ಎಟಿಎಂನಿಂದ ಹಣ ತೆಗೆದಿದ್ದರು.

Advertisement

ಇಚ್ಲಂಪಾಡಿ ಪ್ರಕರಣ
2018 ಮಾ.  21ರಂದು ಉಪ್ಪಿ ನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಇಚ್ಲಂಪಾಡಿಯ ನಾರಾಯಣ ಪಿಳ್ಳೆ  ಅವರ ಮನೆಗೆ ನುಗ್ಗಿ ನಾರಾಯಣ ಪಿಳ್ಳೆ ಹಾಗೂ ಅವರ ಪತ್ನಿಯನ್ನು ಪಿಸ್ತೂಲ್‌, ಚೂರಿ ತೋರಿಸಿ ಬೆದರಿಸಿ ಕಟ್ಟಿ ಹಾಕಿ  65 ಗ್ರಾಂ ಚಿನ್ನಾಭರಣ, 37,500 ರೂ. ಹಾಗೂ 1 ಎಟಿಎಂ ಕಾರ್ಡ್‌ ಅನ್ನು ದರೋಡೆ ನಡೆಸಿ ಪರಾರಿಯಾಗಿತ್ತು. 
ಕೆದಿಲ ಹಾಗೂ ಪಟ್ರಮೆಯ ಪ್ರಕರಣದಲ್ಲಿ ಸಲೀಂ  ಸಹಿತ ಮೂವರು ದರೋಡೆಕೋರರು ಭಾಗವಹಿಸಿದ್ದರೆ, ಇಚ್ಲಂಪಾಡಿಯ ಪ್ರಕರಣದಲ್ಲಿ ಈಗ ಬಂಧಿತರಾಗಿರುವ ಇಬ್ಬರು  ಮಾತ್ರ ಭಾಗವಹಿಸಿದ್ದರು.

ದ.ಕ. ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ| ರವಿಕಾಂತೇ ಗೌಡ, ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಜಿತ್‌ ಕುಮಾರ್‌ ಮಾರ್ಗದರ್ಶನದಲ್ಲಿ ಪುತ್ತೂರು ಉಪ ವಿಭಾಗದ ಪೊಲೀಸ್‌ ಉಪ ಅಧೀಕ್ಷಕ  ಶ್ರೀನಿವಾಸ್‌ ಬಿ.ಎಸ್‌. ಹಾಗೂ ಪುತ್ತೂರು ಗ್ರಾಮಾಂತರ ವೃತ್ತದ ವೃತ್ತ ನಿರೀಕ್ಷಕ ಗೋಪಾಲ ನಾಯ್ಕ ಅವರ ನೇತೃತ್ವದಲ್ಲಿ  ಉಪ್ಪಿನಂಗಡಿ ಪೊಲೀಸ್‌ ಠಾಣಾ ಉಪ ನಿರೀಕ್ಷಕ ನಂದಕುಮಾರ್‌, ಠಾಣಾ ಅಪರಾಧ ಪತ್ತೆ ಕರ್ತವ್ಯದ ಸಿಬಂದಿ ಹರೀಶ್ಚಂದ್ರ, ಶೇಖರ ಗೌಡ, ಪ್ರವೀಣ್‌ ರೈ, ಇರ್ಷಾದ್‌ ಪಿ., ಜಗದೀಶ್‌ ಎ., ಶ್ರೀಧರ ಸಿ.ಎಸ್‌., ಜಿಲ್ಲಾ ಗಣಕ ಯಂತ್ರ ಸಿಬಂದಿ ದಿವಾಕರ, ಸಂಪತ್‌ ಹಾಗೂ ಜೀಪು ಚಾಲಕರಾದ ನಾರಾಯಣ್‌  ಅವರು  ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಉಪ್ಪಿನಂಗಡಿ ಪೊಲೀಸರ ಸಾಧನೆ
ಉಪ್ಪಿನಂಗಡಿ ಠಾಣೆಯ ಉಪನಿರೀಕ್ಷಕರಾಗಿ ನಂದಕುಮಾರ್‌ ಹಾಗೂ ಪುತ್ತೂರು ಗ್ರಾಮಾಂತರ ಪೊಲೀಸ್‌ ವೃತ್ತ ನಿರೀಕ್ಷಕರಾಗಿ ಗೋಪಾಲ ನಾಯ್ಕ ಅಧಿಕಾರ ವಹಿಸಿಕೊಂಡ ಬಳಿಕ ಉಪ್ಪಿನಂಗಡಿ  ಠಾಣೆಯಲ್ಲಿ ದಾಖಲಾದ ಒಂದೆರಡು ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರಕರಣಗಳನ್ನು ಭೇದಿಸಲಾಗಿದೆ.  ಅತ್ಯಂತ ಕ್ಲಿಷ್ಟಕರ ಪ್ರಕರಣಗಳನ್ನೂ ಭೇದಿಸುವ ಮೂಲಕ  ಇವರು  ವ್ಯಾಪಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ತಂಡಕ್ಕೆ  10 ಸಾ.ರೂ. ನಗದು ಬಹುಮಾನ ಘೋಷಣೆ
ಮೂರು ಮನೆ ದರೋಡೆ ಪ್ರಕರಣವನ್ನು  ಭೇದಿಸಿರುವ  ನಂದಕುಮಾರ್‌ ಮತ್ತವರ ತಂಡವನ್ನು ಪ್ರಶಂಸಿಸಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ,  ಈ ತಂಡಕ್ಕೆ 10 ಸಾ.ರೂ. ನಗದು ಬಹುಮಾನ ಘೋಷಿಸಿದ್ದಾರೆ.

ದರೋಡೆ ನಿಪುಣರು
ಮಿಕ್ಸಿ ರಿಪೇರಿ ನೆಪದಲ್ಲಿ  ಶ್ರೀಮಂತರ ಮನೆಯನ್ನು ಗುರುತಿಸಿ ಬಳಿಕ ದರೋಡೆ ನಡೆಸುತ್ತಿದ್ದರು. ಪ್ಲಾಸ್ಟರ್‌ ಬಳಸಿ ಬಾಯಿ ಮತ್ತು ಕೈಗಳನ್ನು ಕಟ್ಟಿ ಹಾಕಿ ದರೋಡೆ ಮಾಡುತ್ತಿದ್ದ  ಇವರು  ಯಾವುದೇ ಸುಳಿವು ನೀಡದೆ ಪರಾರಿಯಾಗುವಲ್ಲಿ ನಿಸ್ಸೀಮರಾಗಿದ್ದರು.  ದರೋಡೆಗೆ ತೆರಳುವಾಗ  ಮೊಬೈಲ್‌ಗ‌ಳನ್ನು ಬಳಸುತ್ತಿರಲಿಲ್ಲ.  ಮನೆಗಳಿಂದ ದರೋಡೆ ಮಾಡಿದ ಮೊಬೈಲ್‌ಗ‌ಳ ಸಿಮ್‌ಗಳನ್ನು ತೆಗೆದು ಬೇರೆ ಮೊಬೈಲ್‌ಗೆ ಅಳವಡಿಸಿ ಎಲ್ಲೆಲ್ಲೋ  ಬಿಸಾಡಿ ಪೊಲೀಸ್‌ ತನಿಖೆಯ ಹಾದಿ ತಪ್ಪಿಸುತ್ತಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next