Advertisement

ಕಾಣಿಕೆ ಹುಂಡಿ ಕಳ್ಳರಿಂದಲೇ ದರೋಡೆ ಕೃತ್ಯ

12:05 PM Jan 22, 2018 | |

ಕಾಪು: ಶನಿವಾರ ಪೊಲೀಸರು ಬಂಧಿಸಿರುವ ಕಳವು ಆರೋಪಿಗಳು ದರೋಡೆ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಶಿರ್ವ, ಕಾಪು ಮತ್ತು ಕಾರ್ಕಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ  ನಡೆದಿದ್ದ ಹಲವು  ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿ  ಮಟ್ಟಾರು ಜನತಾ ಕಾಲನಿ ಪರಿಸರದ ನಿವಾಸಿ ಗುರುಪ್ರಸಾದ್‌ (22) ಮತ್ತು ಮಲ್ಲಾರು ನಿವಾಸಿ 17 ವರ್ಷದ ಬಾಲಕನನ್ನು ಬಂಧಿಸಿದ್ದು,  ಅವಿನಾಶ್‌ ಅಲಿಯಾಸ್‌ ಅಬಿ ಎಂಬಾತ ತಲೆಮರೆಸಿಕೊಂಡಿದ್ದಾನೆ.

Advertisement

ದರೋಡೆ ಪ್ರಕರಣ ಬಯಲು
ಜ. 10ರಂದು ನಡೆದಿದ್ದ ಕಳತ್ತೂರು ಶಾಂತಿಗುಡ್ಡೆ ಬಳಿ  ದಿನೇಶ್‌ ಆಚಾರ್ಯ  ಅವರ ಮೇಲಿನ ಹಲ್ಲೆ ಮತ್ತು  ಎಟಿಎಂ ಕಾರ್ಡ್‌  ಲೂಟಿ ಮಾಡಿ  6 ಸಾ.ರೂ.  ಲಪಟಾಯಿಸಿದ್ದು  ಇದೇ ತಂಡದ ಕೃತ್ಯ ಎಂಬುದು ತಿಳಿದು ಬಂದಿದೆ. 

ಕಾಣಿಕೆ ಡಬ್ಬಿ ಕಳವು
ಕಾರ್ಕಳ ಉಪ ವಿಭಾಗದ ವ್ಯಾಪ್ತಿಯ ಸೂಡ ಸುಬ್ರಹ್ಮಣ್ಯ ದೇವಸ್ಥಾನ, ಕಾಪು ಲಕ್ಷ್ಮೀ ಜನಾರ್ದನ ದೇವಸ್ಥಾನ, ಪೊಲಿಪು ಲಕ್ಷ್ಮೀ  ನಾರಾಯಣ ಭಜನ ಮಂದಿರ ಸಹಿತ ಇನ್ನಂಜೆ ಮತ್ತು ಪಳ್ಳಿ ಸಮೀಪದ ದೇವ ಸ್ಥಾನವೊಂದರ ಕಾಣಿಕೆ ಡಬ್ಬಿ ಕಳವು ಪ್ರಕರಣದಲ್ಲೂ ಇವರ ಪಾತ್ರವಿದೆ. ಇವರು  ಪೊಲಿಪುನಲ್ಲಿ ಕಾಣಿಕೆ ಡಬ್ಬಿ ಕದಿಯಲು ಯತ್ನಿಸುತ್ತಿರುವಾಗಲೇ ಸಾರ್ವಜನಿಕರ ಮೂಲಕ  ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ದರೋಡೆ ಪ್ರಕರಣದ ಬಗ್ಗೆ ಸಂಶಯ ಬಂದು ವೃತ್ತ ನಿರೀಕ್ಷಕರ ಮೂಲಕ ತನಿಖೆ ನಡೆಸಿದಾಗ ಇವರು ಮಾಡಿರುವ ಹಲವು ಕುಕೃತ್ಯಗಳು ಬಯಲಿಗೆ ಬಂದವು.

ರಿಕ್ಷಾದ ಸಾಲ ಕಟ್ಟಲು ಕಳವು
ಆರೋಪಿಗಳ ಪೈಕಿ ಮೂಲತಃ ಮಟ್ಟಾರು ನಿವಾಸಿಯಾಗಿದ್ದು, ಪ್ರಸ್ತುತ ಮಲ್ಲಾರಿನಲ್ಲಿ ಬಾಡಿಗೆ ಮನೆಯಲ್ಲಿರುವ ಗುರುಪ್ರಸಾದ್‌  ರಿಕ್ಷಾ ಚಾಲಕನಾಗಿದ್ದಾನೆ. ರಿಕ್ಷಾದ  ಬ್ಯಾಂಕ್‌ ಸಾಲದ ಕಂತು ಕಟ್ಟಲು  ಪರದಾಡುತ್ತಿದ್ದ ಆತ ಕಳವು ಮಾಡಲು ತೊಡಗಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್‌ ನೇತೃತ್ವದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next