ಕುದೂರು: ಕುದೂರಿನ ಶಿವಗಂಗೆ ರಸ್ತೆಯ ಸಮೀಪ ಲೋಡ್ ಗಟ್ಟಲೆ ಕೋಳಿ ಕಲುಷಿತ ತ್ಯಾಜ್ಯ ಸುರಿದಿದ್ದು ಜನತೆ ಆತಂಕ ವ್ಯಕ್ತಪಡಿಸಿದ್ದಾರೆ. ಕುದೂರು ಪಟ್ಟಣದಲ್ಲಿ ಕಸದ ಸಮಸ್ಯೆ ತೀವ್ರವಾಗಿದ್ದು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ತ್ಯಾಜ್ಯ ರಾಶಿ ದುರ್ವಾಸನೆ ಬೀರುತ್ತಿದ್ದರೂ ಗ್ರಾಪಂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ.
ಮಳೆಯಿಂದ ದುರ್ವಾಸನೆ:ಕಸದ ರಾಶಿ ನಿನ್ನೆ ಬಿದ್ದದ್ದಲ್ಲ. ಬಹಳ ಕಾಲದಿಂದಲೂ ಬೀಳುತ್ತಿದೆ. ಪಟ್ಟಣದ ತುಮಕೂರು ರಸ್ತೆ, ಶಿವಗಂಗೆ ರಸ್ತೆಯ ಎಡಭಾಗದ ರಸ್ತೆಯ ಪಕ್ಕದಲ್ಲಿ ಕೋಳಿ ತ್ಯಾಜ್ಯ, ಪ್ಲಾಸ್ಟಿಕ್, ಗೃಹ ಬಳಕೆ ತ್ಯಾಜ್ಯವನ್ನು ಸುರಿಯಲಾಗಿದೆ. ಕಳೆದ ಒಂದು ವಾರದಿಂದಮಳೆ ಬರುತ್ತಿರುವ ಕಾರಣ ರಸ್ತೆ ಬದಿ ಮೂಟೆಯಲ್ಲಿಎಸೆಯಲಾಗಿದ್ದ ಕೋಳಿ ತ್ಯಾಜ್ಯ ಕೊಳೆತು ದುರ್ನಾತಬೀರುತ್ತಿದೆ.
ವರ್ಷಕ್ಕೆ ಸಾವಿರಾರು ರೂಪಾಯಿಯನ್ನುತ್ಯಾಜ್ಯ ವಿಲೇವಾರಿಗೆಂದು ಮೀಸಲಿಡಲಾಗುತ್ತದೆ. ಗ್ರಾಪಂನವರು ಸರಿಯಾಗಿ ವಿಲೇಮಾರಿ ಮಾಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರತಿ ನಿತ್ಯ ನೂರಾರು ಮಂದಿ ಬರುತ್ತಾರೆ ಹೋಗುತ್ತಾರೆ. ಒಮ್ಮೆ ಈ ಕಸದ ರಾಶಿ ನೋಡಿದರೆ ಪಟ್ಟಣದ ಗೌರವ ಘನತೆಯನ್ನು ಗೇಲಿ ಮಾಡುವಂತೆ ಇರುತ್ತದೆ ಎಂಬುದು ನೊಂದ ನಾಗರಿಕರ ಅಭಿಮತ. ಈಗ ಕೊರೊನಾ ವೈರಾಣು ಎಲ್ಲಾ ಕಡೆ ಹಬ್ಬಿದೆ. ಅದಕ್ಕೆ ಕುದೂರು ಸಹಹೊರತಲ್ಲ. ಇಂತಹ ಸಮಯದಲ್ಲಿ ಸ್ವತ್ಛತೆಗೆ ಹೆಚ್ಚಿನಗಮನ ಕೊಡಬೇಕಾಗಿದೆ. ಕಸದ ರಾಶಿಯನ್ನು ವಿಲೇವಾರಿಮಾಡುವ ಕಾರ್ಯ ಆಗಿಂದಾಗ್ಗೆ ನಡೆಯುತ್ತಿರಬೇಕು.
ಎಚ್ಚೆತ್ತುಕೊಳ್ಳಿ:ಗ್ರಾಪಂ ಎಚ್ಚೆತ್ತು ಗಮನ ಹರಿಸಿ ಮುಂದೆಇಂತಹ ತ್ಯಾಜ್ಯ ಬೀಳದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಬಿದ್ದಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕಾಗಿದೆ.
ಕೆ.ಎಸ್.ಮಂಜುನಾಥ್ ಕುದೂರು