Advertisement

ತಳ್ಳು ಗಾಡಿ ವ್ಯಾಪಾರಿಗಳಲ್ಲಿ ಆತಂಕದ ಕಾರ್ಮೋಡ

10:48 AM Nov 26, 2021 | Team Udayavani |

ಬೆಂಗಳೂರು: ಟೊಮ್ಯಾಟೋ ಸೇರಿದಂತೆ ಇನ್ನಿತರ ತರಕಾರಿ ಬೆಲೆ ಏರಿಕೆಯ ಎಫೆಕ್ಟ್ ಕೇವಲ ಗ್ರಾಹಕರ ಮೇಲೆ ಅಷ್ಟೇ ಅಲ್ಲದೆ ತಳ್ಳುಗಾಡಿ ಮೂಲಕ ತರಕಾರಿ, ಹೂವು, ಹಣ್ಣುಗಳನ್ನು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿರುವ ನೂರಾರು ಬಡ ವ್ಯಾಪಾರಿಗಳ ಬದುಕಿನ ಮೇಲೂ ಆತಂಕದ ಕಾರ್ಮೋಡ ಕವಿಯುವಂತೆ ಮಾಡಿದೆ.

Advertisement

ಒಂದೆಡೆ ಸಾಲಗಾರರ ಕಾಟ ಮತ್ತೂಂದೆಡೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಹೋರಾಟ ಪರಿಸ್ಥಿತಿ ಹೀಗೆ ಮುಂದುವರಿದರೆ ಹೇಗಪ್ಪಾ ಎಂದು ಆತಂಕ ಅವರನ್ನು ಕಾಡುತ್ತಿದೆ. ಕಳೆದ ಹಲವು ದಿನಗಳಿಂದ ಮಾರುಕಟ್ಟೆಯಲ್ಲಿ ಟೊಮ್ಯಾಟೋ, ಬೀನ್ಸ್‌ ಸೇರಿದಂತೆ ಇನ್ನಿತರ ತರಕಾರಿಗಳ ಬೆಲೆ ಶತಕದ ಗಡಿದಾಟಿದ್ದು ಅಧಿಕ ಬೆಲೆಕೊಟ್ಟು ಖರೀದಿಸಿ ಅವುಗಳನ್ನು ತಳ್ಳುವ ಗಾಡಿಯಲ್ಲಿಟ್ಟುಕೊಂಡು ಮಾರಾಟ ಮಾಡುವ ಮನಸ್ಥಿತಿ ವ್ಯಾಪಾರಿಗಳಲಿಲ್ಲ.

ಬಿಬಿಎಂಪಿಯಲ್ಲಿ ಸುಮಾರು 60 ಸಾವಿರ ಜನ ಬೀದಿ ಬದಿ ವ್ಯಾಪಾರಿಗಳು ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದಾರೆ. ಅದರಲ್ಲಿ ಸುಮಾರು 22 ಸಾವಿರ ಮಂದಿ ಬೀದಿ ವ್ಯಾಪಾರಿಗಳಿಗೆ ಮಾತ್ರ ಪಾಲಿಕೆ ವತಿಯಿಂದ ಗುರುತಿನ ಚೀಟಿ ನೀಡಲಾಗಿದೆ. ಅದರಲ್ಲಿ ಶೇ.70ರಷ್ಟು ಮಂದಿ ತಳ್ಳುವ ಗಾಡಿಯಲ್ಲಿ ಬೀದಿ ಬದಿಗಳಲ್ಲಿ ತರಕಾರಿ, ಹಣ್ಣು ಹಂಪಲುಗಳನ್ನು ಮಾರಾಟ ಮಾಡುವವರು ಇದ್ದಾರೆ.

ಇದನ್ನೂ ಓದಿ:- ಹಾಜರಿ ಹಾಕಿ ಶಾಲೆಗೆ ಚಕ್ಕರ್‌ ಹೊಡೆದ ಶಿಕ್ಷಕರು

ಆದರೆ ಈಗ ಟೊಮ್ಯಾಟೋ ಸೇರಿದಂತೆ ಇನ್ನಿತರ ತರಕಾರಿ ದರಗಳು ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಶೇ.80ರಷ್ಟು ತಳ್ಳುಗಾಡಿ ವ್ಯಾಪಾರಿಗಳು ಸದಸ್ಯ ಪರಿಸ್ಥಿತಿಯಲ್ಲಿ ಮಾರಾಟವನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಬೆಲೆ ಇಳಿಕೆ ಆಗುವ ವರೆಗೂ ತಳ್ಳುವಬಂಡಿಗಳಲ್ಲಿ ವ್ಯಾಪಾರ ಅಸಾಧ್ಯ ಎಂಬುವುದು ವ್ಯಾಪಾರಿಗಳ ಮಾತಾಗಿದೆ. ಸಾಲಗಾರರು ಸುಮ್ಮನೆ ಬಿಡುವುದಿಲ್ಲ: ಬಡ್ಡಿ ರೂಪದಲ್ಲಿ ಪ್ರತಿ ನಿತ್ಯ 2 ಸಾವಿರ ರೂ. ಸಾಲ ತಂದು ತಳ್ಳುಗಾಡಿಗಳ ಮೂಲಕ ಬೀದಿ, ಬೀದಿ ತಿರುಗಿ ಟೊಮ್ಯಾಟೋ ಸೇರಿದಂತೆ ಇನ್ನಿತರ ತರಕಾರಿಗಳನ್ನು ಮಾರಾಟ ಮಾಡಿ ದಿನಕ್ಕೆ 500 ರೂ. ಸಂಪಾದಿಸುತ್ತಿದ್ದೆ.

Advertisement

ಆದರೆ ಈಗ ತಳ್ಳುಗಾಡಿಗಳ ವ್ಯಾಪಾರಕ್ಕೆ ತೆರಳಿದರೆ ಅಸಲು ಕೂಡ ಬರುವುದು ಕಷ್ಟ ಎಂದು ಪೀಣ್ಯದ 2ನೇ ಹಂತದ ತರಕಾರಿ ವ್ಯಾಪಾರಿ ಜಗದೀಶ್‌ ಅಳಲು ತೋಡಿಕೊಳ್ಳುತ್ತಾರೆ. ಜತೆಗೆ ಸಾಲ ಕೊಟ್ಟವರಿಗೆ ಅವತ್ತೆ ಬಡ್ಡಿ ಸಮೇತ ಹಣ ನೀಡದೆ ಹೋದರೆ ಅವರು ಕೂಡ ಸುಮ್ಮನಿರುವುದಿಲ್ಲ. ವ್ಯಾಪಾರ ಆಗದೆ ಹೋದರೆ ಸಾಲಗಾರರಿಗೆ ಹಣ ಮರಳಿಸುವುದು ಕಷ್ಟ ವಾಗಲಿದೆ. ಹಾಗಾಗಿ ಇನ್ನೂ ಕೆಲವು ದಿನಗಳವರೆಗೆ ವ್ಯಾಪಾರ ಮಾಡುವುದನ್ನು ನಿಲ್ಲಿಸಿಬಿಡುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳುತ್ತಾರೆ.

ಹೆಂಡತಿ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ತರಕಾರಿ ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇನೆ. ಆದರೆ ಬೆಲೆ ಹೆಚ್ಚಳದಿಂದಾಗಿ ತರಕಾರಿ ವ್ಯಾಪಾರ ನಿಲ್ಲಿಸಿದ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ವ್ಯಾಪಾರ ಮಾಡುವುದನ್ನು ನಿಲ್ಲಿಸಿದ್ದೇನೆ. ಹೀಗಾಗಿ ಮನೆ ಬಾಡಿಗೆ ಹೇಗಪ್ಪ ಕಟ್ಟುವುದು ಎಂಬ ಚಿಂತೆ ಶುರುವಾಗಿದೆ ಎಂದು ಹೆಗ್ಗನಹಳ್ಳಿಯ ವ್ಯಾಪಾರಿ ಪುಟ್ಟಸ್ವಾಮಿ ಹೇಳುತ್ತಾರೆ.

 ಟೊಮ್ಯಾಟೋ ಸೇರಿದಂತೆ ಇನ್ನಿತರ ತರಕಾರಿಗಳ ದರಗಳು ಕೈ ಸುಡುತ್ತಿರುವ ಹಿನ್ನೆಲೆಯಲ್ಲಿ ಅದು ಗ್ರಾಹಕರಿಗೆ ಅಷ್ಟೇ ಅಲ್ಲ ತಳ್ಳುಗಾಡಿಯಲ್ಲಿ ಮಾರಾಟ ಮಾಡಿ ಜೀವನ ನಡೆಸುತ್ತಿರುವ ಮಾರಾಟಗಾರರ ಮೇಲೆ ಪ್ರಭಾವ ಬೀರಿದೆ. ಸಾಲ ಮಾಡಿ ವ್ಯಾಪಾರ ಮಾಡುತ್ತಿದ್ದವರು ಸದ್ಯದ ಮಟ್ಟಿಗೆ ತಳ್ಳುಗಾಡಿಯಲ್ಲಿನ ವ್ಯಾಪಾರ ನಿಲ್ಲಿಸಿದ್ದಾರೆ. – ಸಿ.ಇ. ರಂಗಸ್ವಾಮಿ, ಕರ್ನಾಟಕ ಬೀದಿ ಬದಿ, ವ್ಯಾಪಾರಿ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯರು

 “ಕಳೆದೆಡು ದಿನಗಳಿಂದ ಮಹಾರಾಷ್ಟ್ರದ ನಾಸಿಕ್‌ ಭಾಗದಿಂದ ಟೊಮ್ಯಾಟೋ ಬೆಂಗಳೂರು ಮಾರುಕಟ್ಟೆಗೆ ಪೂರೈಕೆ ಆಗುತ್ತಿದೆ. ಐದು ಲಾರಿಗಳಲ್ಲಿ ಟೊಮ್ಯಾಟೊ ಪೂರೈಕೆ ಆಗುತ್ತಿದೆ. ಹೀಗಾಗಿ ಶೀಘ್ರದಲ್ಲೇ ಟೊಮ್ಯಾಟೋ ಬೆಲೆ ನಿಯಂತ್ರಣಕ್ಕೆ ಬರುವ ನಿರೀಕ್ಷೆಯಿದೆ.” – ಆರ್‌.ವಿ.ಗೋಪಿ, ಕೆ.ಆರ್‌.ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next