ಬೆಂಗಳೂರು: ನಗರದಲ್ಲಿ ಮಳೆ ಬಿಡುವು ನೀಡಿದ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಬಿಬಿಎಂಪಿ ವೇಗ ನೀಡಿದ್ದು ಶನಿವಾರ 5,070 ಗುಂಡಿಗಳನ್ನು ಮುಚ್ಚಲಾಗಿದೆ.
ನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದ ಕಾರಣದಿಂದಾಗಿ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಜತೆಗೆ ಬಿಬಿಎಂಪಿಯ ಬಿಟುಮಿನ್ ಮಿಕ್ಸ್ ಪ್ಲ್ರಾಂಟ್ ಕಾರ್ಯಸ್ಥಗಿತವಾಗಿ ಗುಂಡಿ ಮುಚ್ಚಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಸೋಮವಾರದಿಂದ ಬಿಟುಮಿನ್ ಮಿಕ್ಸ್ ಪ್ಲ್ರಾಂಟ್ ಕೆಲಸ ಆರಂಭಿಸಿದ್ದು ಗುಂಡಿ ಮುಚ್ಚುವ ಕಾರ್ಯಕ್ಕೆ ವೇಗ ನೀಡಲಾಗಿದೆ. ಶನಿವಾರ ನಗರದ ಬಹುತೇಕ ಕಡೆ ಗುಂಡಿಗಳನ್ನು ಮುಚ್ಚಲಾಗಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಎಲ್ಲ ಗುಂಡಿ ಮುಚ್ಚಲು ನಿರ್ಧರಿಸಲಾಗಿದೆ.
5,070 ಗುಂಡಿಗಳಿಗೆ ಮುಕ್ತಿ: ಬಿಬಿಎಂಪಿ ಗುರುತಿಸಿದ 10,861 ಗುಂಡಿಗಳ ಪೈಕಿ ಶನಿವಾರ 5,070 ಗುಂಡಿಗಳನ್ನು ಕೋಲ್ಡ್ ಮತ್ತು ಹಾಟ್ ಬಿಟುಮಿನ ಮಿಕ್ಸ್ ಹಾಕಿ ಮುಚ್ಚಲಾಗಿದೆ. 2,148 ಗುಂಡಿಗಳನ್ನು ಬಿಬಿಎಂಪಿ ಸಹಾಯಕ ಎಂಜಿನಿಯರ್ ಪರಿಶೀಲಿಸಿದ್ದಾರೆ. 2,260 ಗುಂಡಿಗಳಿಗೆ ಯೋಜನಾ ವರದಿ ಸಿದ್ಧಪಡಿಸಲಾಗಿದೆ. 1094 ಗುಂಡಿಗಳು ಮುಚ್ಚುವ ಅವಶ್ಯಕತೆ ಇಲ್ಲ ಎಂದು ತಿರಸ್ಕರಿಸಲಾಗಿದೆ. 289 ಗುಂಡಿಗಳನ್ನು ಪ್ರತ್ಯೇಕ ಯೋಜನೆ ಸಿದ್ಧಪಡಿಸಿ ಸರಿಪಡಿಸಬೇಕಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಮಳೆ ಬಿಡುವು ನೀಡಿದರೆ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಗುಂಡಿ ಮುಚ್ಚುವ ಕಾಮಗಾರಿಗೆ ಪೂರ್ಣಗೊಳ್ಳಲಿದೆ. ಶನಿವಾರ 5 ಸಾವಿರಕ್ಕೂ ಅಧಿಕ ಗುಂಡಿಗಳಿಗೆ ಕೋಲ್ಡ್ ಬಿಟುಮಿನ್ ಹಾಕಿ ಮುಚ್ಚಲಾಗಿದೆ ಎಂದು ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ರವೀಂದ್ರ ತಿಳಿಸಿದರು.