ಹಾರೋಹಳ್ಳಿ: ಹಾರೋಹಳ್ಳಿ ಸಮೀಪದ ಬಿ.ಡಬ್ಲ್ಯು.ಎಸ್. ಎಸ್.ಬಿ. ಮುಂಭಾಗ ಗುಂಡಿ ಬಿದ್ದ ರಸ್ತೆಯಲ್ಲಿ ನಿತ್ಯ ಅಪಘಾತಗಳಾಗಿ ಸಾರ್ವಜನಿಕರು ಸಾವು ನೋವು ಅನುಭವಿಸುತ್ತಿದ್ದರು. ಇಂತಹ ಗುಂಡಿಯನ್ನು ಮುಚ್ಚುವ ಮೂಲಕ ಹಾರೋಹಳ್ಳಿ ಇಬ್ಬರು ಯುವ ಪೊಲೀಸರು ಮಾನವೀಯತೆ ಮೆರೆಯುವ ಮೂಲಕ ಸುಗಮ ರಸ್ತೆ ಸಂಚಾರಕ್ಕೆ ನೆರವಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 209ರ ಕನಕಪುರ-ಹಾರೋಹಳ್ಳಿ ಮುಖ್ಯರಸ್ತೆಯಲ್ಲಿನ ಬಿ.ದಯಾನಂದ ಸಾಗರ ಆಸ್ಪತ್ರೆಯಿಂದ ಬಿ.ಡಬ್ಲ್ಯು.ಎಸ್.ಎಸ್.ಬಿ. ವರೆಗೂ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳಿಗೆ ವೈಯಕ್ತಿಕವಾಗಿ ಕಾಂಕ್ರಿಟ್ ಬೆರೆಸಿದ ಸಿಮೆಂಟನ್ನು ಚೀಲದಲ್ಲಿ ತಂದು ಗುಂಡಿಗಳಿಗೆ ತುಂಬುವ ಮೂಲಕ ಗುಂಡಿಯನ್ನು ಮುಚ್ಚಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಇಬ್ಬರು ಯುವ ಪೊಲೀಸ್ ತಮ್ಮ ಹೆಸರನ್ನೂ ಸಹ ಹೇಳಲು ಇಚ್ಛಿಸದೇ ಇಂತಹ ಗುಂಡಿ ಮುಚ್ಚುವ ಕೆಲಸಕ್ಕೆ ಮುಂದಾಗಿರುವುದು ಅವರ ಸೇವಾ ಮನೋಭಾವಕ್ಕೆ ಹಿಡಿದ ಕನ್ನಡಿಯಾಗಿದೆ.
ಇತ್ತೀಚೆಗೆ ಈ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಸಾವು-ನೋವುಗಳನ್ನು ಅನುಭವಿಸುತ್ತಿದ್ದರು. ಮಂಗಳವಾರ ರಾತ್ರಿಯೂ ಸಹ ಇದೇ ಮಾರ್ಗದಲ್ಲಿ ದ್ವಿಚಕ್ರ ವಾಹನದಲ್ಲಿ ಇಬ್ಬರು ಸವಾರರು ಗುಂಡಿ ಕಾಣದೇ ಕತ್ತಲಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದರು. ಇವರನ್ನು ಹಾರೋಹಳ್ಳಿ ಪೊಲೀಸರೇ ದಯಾನಂದ ಸಾಗರ
ಆಸ್ಪತ್ರೆಗೆ ಸೇರಿಸಿದ್ದರು. ಅಪಘಾತಕ್ಕೆ ಆಹ್ವಾನ ಉಂಟುಮಾಡುತ್ತಿದ್ದ ಇಂತಹ ಗುಂಡಿಗಳನ್ನು ಸ್ವತಃ ಇಬ್ಬರು ಯುವ ಪೊಲೀಸರು ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ನೆರವಾಗಿದ್ದಾರೆ.
ಕಾಮಗಾರಿ ಪೂರ್ಣಗೊಳಿಸಿ:ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ 5-6 ವರ್ಷದಿಂದ ಕುಂಟುತ್ತಾ ಸಾಗಿದ್ದು, ಈ ಕಾಮಗಾರಿಯಿಂದ ಜನರು ಹಲವಾರು ಕಡೆ ರಸ್ತೆ ಅಪಘಾತದಲ್ಲಿ ಸಾವು-ನೋವುಗಳನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಹೊಣೆಯಾರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು. ಇಲ್ಲಿನ ಗುತ್ತಿಗೆದಾರ ಮತ್ತು ತುಂಡು ಗುತ್ತಿಗೆದಾರರ ಕಾಮಗಾರಿ ಅವ್ಯವಹಾರದಲ್ಲಿ ಸಾರ್ವಜನಿಕರು ಈ ರೀತಿ ನೋವು ಅನುಭವಿಸಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.