ಗದಗ: ಇಲ್ಲಿನ ಜನರಲ್ ಕಾರ್ಯಪ್ಪ ವೃತ್ತದಿಂದ ಹೊಸ ಬಸ್ ನಿಲ್ದಾಣದ ವರೆಗೆ ಹದಗೆಟ್ಟಿರುವ ರಸ್ತೆ ದುರಸ್ತಿಗೆ ಆಗ್ರಹಿಸಿ ವಿವಿಧ ಆಟೋ ಚಾಲಕರ ಸಂಘದಿಂದ ಗುರುವಾರ ಜ|ಕಾರ್ಯಪ್ಪ ವೃತ್ತದಲ್ಲಿ ರಸ್ತೆ ತಡೆಸಿದ್ದರಿಂದ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ವಾಹನ ಸವಾರರು ಪರದಾಡುವಂತಾಯಿತು.
ಗುರುವಾರ ಮಧ್ಯಾಹ್ನ ನಗರಸಭೆ ತುರ್ತು ಸಭೆಗ ಮುತ್ತಿಗೆ ಹಾಕಿದ್ದ ಆಟೋ ಚಾಲಕರು, ಬಳಿಕ ನೂರಾರು ಸಂಖ್ಯೆಯಲ್ಲಿ ಜ|ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿ ಪ್ರತಿಭಟನೆಗಿಳಿದರು. ರಸ್ತೆ ದುರಸ್ತಿಗೆ ಮುಂದಾಗದ ನಗರ ಕುಡಿಯುವ ನೀರು ಮತ್ತು ಒಳಚರಂಡಿ ನಿಗಮ, ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಈ ವೇಳೆ ಆಟೋ ಚಾಲಕರ ಸಂಘಟನೆಗಳ ಪ್ರಮುಖರು ಮಾತನಾಡಿ, ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ಬೆಲೆಗಳು ಗಗನಕ್ಕೇರುತ್ತಿವೆ. ಮತ್ತೂಂದೆಡೆ ಪ್ರಯಾಣಿಕರೂ ಆಟೋ ಸೇವಾ ಶುಲ್ಕ ಹೆಚ್ಚಿಸುತ್ತಿಲ್ಲ. ಇಂತಹ ಸಂಕಷ್ಟದ ಮಧ್ಯೆಯೂ 10, 20 ರೂ. ದರದಲ್ಲಿ ಸೇವೆ ಒದಗಿಸುತ್ತಿದ್ದೇವೆ. ನಿರೀಕ್ಷಿತ ಆದಾಯವಿಲ್ಲದೇ ಸಂಕಷ್ಟದಲ್ಲೇ ನಿತ್ಯ ಜೀವನ ಸಾಗಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಗರದ ಹದಗೆಟ್ಟಿರುವ ರಸ್ತೆಗಳಿಂದಾಗಿ ಆಟೋಗಳು ಪದೇ ಪದೇ ರಿಪೇರಿಗೆ ಬರುತ್ತಿದ್ದು, ನಮ್ಮ ಬದುಕಿನಲ್ಲಿ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ ಎಂದು ದೂರಿದರು.
ಕಳೆದ ವರ್ಷವಷ್ಟೇ ದುರಸ್ತಿಗೊಳಿಸಿದ್ದ ಇಲ್ಲಿನ ಜ|ಕಾರ್ಯಪ್ಪ ವೃತ್ತದಿಂದ ಹೊಸ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದವರೆಗಿನ ಮಾರ್ಗ ಮತ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯ ಒಂದು ಭಾಗ ಸಂಪೂರ್ಣ ತೆಗ್ಗು ದಿನ್ನೆಗಳಿಂದ ಕೂಡಿದ್ದು, ಕೊಳಚೆ ನೀರು ತುಂಬಿಕೊಂಡಿದೆ. ನಿನ್ನೆಯಷ್ಟೇ ಪೊಲೀಸ್ ಪೇದೆಯೊಬ್ಬರು ಬಿದ್ದು ಗಾಯಗೊಂಡಿದ್ದಾರೆ. ಪ್ರತಿನಿತ್ಯ ಆಟೋಗಳೂ ಹದಗೆಡುತ್ತಿವೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೆ, ಒಬ್ಬರ ಮೇಲೊಬ್ಬರು ಬೊಟ್ಟು ತೋರುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಸುದ್ದಿ ತಿಳಿಯುತ್ತಿದ್ದಂತೆ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಪೌರಾಯುಕ್ತ ರಮೇಶ ಸುಣಗಾರ ಹಾಗೂ ಹಿರಿಯ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು. ಆದಷ್ಟು ಬೇಗ ರಸ್ತೆ ದುರಿಸ್ತಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.