Advertisement

ಆಮೆಗತಿಯಲ್ಲಿ ಕಾಮಗಾರಿ: ಸಂಚಾರಕ್ಕೆ ಸಂಚಕಾರ

12:54 PM Jun 12, 2022 | Team Udayavani |

ಗುಂಡ್ಲುಪೇಟೆ: ಗುಂಡ್ಲುಪೇಟೆ-ಚಾಮರಾಜನಗರ ರಸ್ತೆ ಮಾರ್ಗ ಮಧ್ಯೆದ ತ್ರಿಯಂಬಕಪುರ ಬಸ್‌ ನಿಲ್ದಾಣದ ಬಳಿ ಆರಂಭವಾಗಿರುವ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ.

Advertisement

ಗುಂಡ್ಲುಪೇಟೆ ಮೂಲಕ ತೆರಳುವ ತೆರಕಣಾಂಬಿ ಬಳಿ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿ ಆರಂಭಿಸಿ ಎರಡು ತಿಂಗಳು ಸಮೀಪಿಸುತ್ತಿದ್ದರೂ ಗುತ್ತಿಗೆದಾರರು ಪೂರ್ಣಗೊಳಿಸದೇ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಈಗಾಗಲೇ ರಸ್ತೆಯಲ್ಲಿ ಹಾಕಿದ್ದ ಜೆಲ್ಲಿಕಲ್ಲು ಮೇಲೆದ್ದು, ದೂಳು ಆವರಿಸಿಕೊಳ್ಳುತ್ತಿದೆ. ದ್ವಿಚಕ್ರ ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಗಿದೆ.

ಜನದಟ್ಟಣೆ ರಸ್ತೆ: ಗುಂಡ್ಲುಪೇಟೆ – ಚಾಮರಾಜ ನಗರ ರಸ್ತೆ ಜನದಟ್ಟಣೆಯಿಂದ ಕೂಡಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಈ ಸಂಚಾರ ಮಾಡುತ್ತಿವೆ. ಜಲ್ಲಿಕಲ್ಲುಗಳು ಮೇಲೆದ್ದಿರುವ ಹಿನ್ನೆಲೆ ಒಂದು ಕಿ.ಮೀ. ಸಂಚರಿಸಲು ಹತ್ತು ನಿಮಿಷಗಳೇ ಬೇಕಾಗುತ್ತದೆ. ಕಳಪೆ ಕಾಮಗಾರಿ ಆರೋಪ: ನಿಗದಿಯಂತೆ ಜಲ್ಲಿ ಸೇರಿ ಇತರೆ ವಸ್ತುಗಳನ್ನು ಬಳಕೆ ಮಾಡದೆ, ಈ ಹಿಂದೆ ಡಾಂಬರ್‌ ತೆಗೆದು ಜಲ್ಲಿ ಹಾಕಲಾಗುತ್ತಿದ್ದು, ಕಾಮಗಾರಿ ಕಳಪೆ ಆಗಿದೆ. ಇದರ ಅರಿವಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ತ್ರಿಯಂಬಕಪುರದ ನಿವಾಸಿಗಳು ಆರೋಪಿಸಿದ್ದಾರೆ.

ಶಾಸಕರೇ ಇತ್ತ ಗಮನಿಸಿ: ಪ್ರಸ್ತುತ ದಕ್ಷಿಣ ಪದವೀ ಧರ ಕ್ಷೇತ್ರ, ಚಾಮುಲ್‌ ಚುನಾವಣೆ ಇರುವುದರಿಂದ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಈ ಮಾರ್ಗವಾಗಿ ಹಲವು ಬಾರಿ ಸಂಚರಿಸುತ್ತಿದ್ದಾರೆ. ಹೀಗಿದ್ದರೂ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಮತ್ತು ಕಳಪೆಯಿಂದ ನಿರ್ಮಾಣವಾಗುತ್ತಿರುವ ಬಗ್ಗೆ ಯಾವುದೇ ರೀತಿಯ ಚಕಾರ ಎತ್ತುತ್ತಿಲ್ಲ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಶೀಘ್ರ ಮುಗಿಸುವಂತೆ ಒತ್ತಾಯ: ಗುತ್ತಿಗೆದಾರ ರಸ್ತೆ ಕಾಮಗಾರಿ ಶೀಘ್ರ ಮುಗಿಸಬೇಕು. ಇಲ್ಲವೆ, ದೂಳು ಮೇಲೆಳದಂತೆ ನೀರು ಹಾಕಿಸಿ, ವಾಹನ ಸವಾರರು, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ವಾಹನ ಸವಾರ ಆನಂದ್‌ ಒತ್ತಾಯಿಸಿದ್ದಾರೆ.

Advertisement

ತ್ರಿಯಂಬಕಪುರ ಬಸ್‌ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ ಕಳಪೆ ಆಗಿದೆ. ಜೊತೆಗೆ ರಸ್ತೆ ಕಿತ್ತು ಹೋಗಿ ತಿಂಗಳು ಕಳೆದ್ರೂ ಗುತ್ತಿಗೆದಾರ ಶೀಘ್ರ ಮುಗಿಸುತ್ತಿಲ್ಲ. ಇದರಿಂದ ಜನರ ಓಡಾಟ, ವಾಹನ ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ. ಸದ್ಯದಲ್ಲೆ ಕಾಮಗಾರಿ ಮುಗಿಸದಿದ್ದರೆ ರಸ್ತೆ ತಡೆದು ಪ್ರತಿಭಟಿಸಲಾಗುವುದು. -ಕಡಬೂರು ಮಂಜು, ರೈತ ಮುಖಂಡ.

 

– ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next