ಹೆಬ್ರಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಬುಕ್ಕಿಗುಡ್ಡೆಯಿಂದ ಕೈರು, ಹೊಸಂಗಡಿ ಬಜೆಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ನಿತ್ಯ ಸಂಚಾರಕ್ಕೆ ಸಮಸ್ಯೆಯಾಗಿದೆ.
ಮಳೆಗಾಲದಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತಿದ್ದು, ಹೊಂಡಗುಂಡಿಗಳಾಗಿದೆ. ಕೆಸರಿನಿಂದ ಈ ಕೂಡಿದ ಮಾರ್ಗದಲ್ಲೇ ಉದ್ಯೋಗಿಗಳು, ವಿದ್ಯಾರ್ಥಿಗಳು, ಇತರ ಕೆಲಸಕ್ಕೆ ಹೋಗುವವರು ಸಂಚರಿಸ ಬೇಕಾಗಿದೆ.
ಪ್ರತಿಭಟಿಸಿದರೂ ಪ್ರಯೋಜನವಿಲ್ಲ
ಕಳೆದ ಬಾರಿ ಸುಮಾರು 500 ಕ್ಕಿಂತ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಬಜೆಯಿಂದ ಪೆರ್ಡೂರು ಗ್ರಾ.ಪಂ.ವರೆಗೆ ಕಾಲ್ನಡಿಗೆಯ ಮೂಲಕ ಪ್ರತಿಭಟನೆ ನಡೆಸಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೂ ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ.
Advertisement
ಕಳೆದ ಒಂದು ವರ್ಷಗಳಿಂದಲೂ ಸಮಸ್ಯೆಗೆ ಮುಕ್ತಿಸಿಗದಿದ್ದರಿಂದ ಗ್ರಾಮಸ್ಥರೇ ಈಗ ಹೊಂಡ ಗುಂಡಿಗಳಿಗೆ ಕಾಂಕ್ರೀಟ್ ಹಾಕಿ ತಾತ್ಕಾಲಿಕ ದುರಸ್ತಿಗೆ ಮುಂದಾಗಿದ್ದಾರೆ.
Related Articles
Advertisement
ಮನವಿಗೂ ಸ್ಪಂದಿಸಿಲ್ಲ
ರಸ್ತೆ ಅಭಿವೃದ್ಧಿ ಪಡಿಸುವಂತೆ ತಾ.ಪಂ., ಜಿ.ಪಂ, ಶಾಸಕರು, ಡಿಸಿಗೆ ಮನವಿ ಸಲ್ಲಿಸಿದ್ದರೂ ಯಾರೂ ಮನವಿಗೆ ಓಗೊಟ್ಟಿಲ್ಲ. ರಸ್ತೆ ಪರಿಸ್ಥಿತಿ ಪರಿಶೀಲನೆಗೂ ಯಾರೂ ಬಂದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಬಸ್ಸುಗಳ ಸಂಚಾರ ಸ್ಥಗಿತ
ಈ ಮಾರ್ಗದಲ್ಲಿ 6 ಬಸ್ಸುಗಳಿಗೆ ಸಂಚಾರಕ್ಕೆ ಪರವಾನಗಿ ಇದ್ದು, 2 ಬಸ್ಸುಗಳು ಮಾತ್ರ ಸಂಜೆ ವೇಳೆ ಓಡಾಡುತ್ತಿವೆ. ಕಲೆಕ್ಷನ್‌ಗಿಂತ ಬಸ್ಸುಗಳ ರಿಪೇರಿಗೆ ಹೆಚ್ಚು ವೆಚ್ಚವಾಗುವುದರಿಂದ ಬಸ್ಸು ಸಂಚಾರ ಸ್ಥಗಿತಗೊಳಿಸಿರುವುದಾಗಿ ಬಸ್ಸಿನವರು ಹೇಳುತ್ತಾರೆ. ಇದರೊಂದಿಗೆ ಖಾಸಗಿ ಬಸ್‌ನವರು, ರಿಕ್ಷಾದವರೂ ಬರುತ್ತಿಲ್ಲ. ಪರಿಣಾಮ ನಿತ್ಯ ಸಂಚರಿಸುವ ನಾಗರಿಕರು ಮತ್ತು ವಿದ್ಯಾರ್ಥಿಗಳ ಮೇಲಾಗಿದೆ.
ಮುಖ್ಯ ರಸ್ತೆಗೆ ತಡೆ ಎಚ್ಚರಿಕೆ
ಇನ್ನಾದರೂ ಸಂಬಂಧ ಪಟ್ಟ ಇಲಾಖೆ ರಸ್ತೆ ದುರಸ್ತಿಗೆ ಮುಂದಾಗದಿದ್ದಲ್ಲಿ, ಮುಖ್ಯ ರಸ್ತೆ ತಡೆದು ಪ್ರತಿಭಟಿಸುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.
ಕೊನೆಗೆ ಗ್ರಾಮಸ್ಥರೇ ತಾತ್ಕಾಲಿಕ ದುರಸ್ಥಿಗೆ ಮುಂದಾದರು!
ಶಾಸಕರ ಅನುದಾನ ಬೇಕು
ನಮ್ಮ ವ್ಯಾಪ್ತಿಯಲ್ಲಿ 6 ಗ್ರಾಮ ಪಂಚಾಯತ್ ಕ್ಷೇತ್ರ ಬರುವುದರಿಂದ ನಮಗೆ ಸಿಗುವ ಸುಮಾರು 20 ಲಕ್ಷ ಅನುದಾನದಿಂದ ಹಂಚಿ ಹಾಕಬೇಕಾಗುತ್ತದೆ. ಆದ್ದರಿಂದ ಜಿ.ಪಂ. ಅನುದಾನದಿಂದ ಬಜೆ ರಸ್ತೆಯ ಸಂಪೂರ್ಣ ದುರಸ್ತಿ ಕಷ್ಟಸಾಧ್ಯವಾಗಿದ್ದು ಶಾಸಕರ ಅನುದಾನ ಬೇಕಾಗಿದೆ.
– ಮೈರ್ಮಾಡಿ ಸುಧಾಕರ ಶೆಟ್ಟಿ, ಜಿ.ಪಂ.ಸದಸ್ಯರು