Advertisement

ರಸ್ತೆ ಕಾಮಗಾರಿ ಕಳಪೆ: ದಿಢೀರ್‌ ಪ್ರತಿಭಟನೆ

11:57 AM Sep 17, 2019 | Team Udayavani |

ಲಕ್ಷ್ಮೇಶ್ವರ: ಕೇಂದ್ರ ರಸ್ತೆ ನಿಧಿ ಯೋಜನೆಯಡಿ (ಸಿಆರ್‌ಫ್‌) ಕಳೆದ ಮೂರ್‍ನಾಲ್ಕು ತಿಂಗಳ ಹಿಂದಷ್ಟೇ ಕೈಗೊಳ್ಳಲಾದ ಲಕ್ಷ್ಮೇಶ್ವರ-ದೊಡ್ಡೂರ ಮಾರ್ಗದ 2.3 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿ ತಾಲೂಕು ಕರವೇ ಕಾರ್ಯಕರ್ತರು ಸೋಮವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

Advertisement

ಸಿಆರ್‌ಎಫ್‌ ಯೋಜನೆಯಡಿ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ರಸ್ತೆಯು ಗುತ್ತಿಗೆದಾರರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿರ್ಮಾಣಗೊಂಡ ಮೂರ್‍ನಾಲ್ಕು ತಿಂಗಳಲ್ಲಿಯೇ ಕಿತ್ತು ಹಾಳಾಗಿದೆ. ಗುತ್ತಿಗೆದಾರರು ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ರಸ್ತೆ ಮೇಲ್ಪದರವನ್ನು ತೆಗೆದು ಹಾಕದೇ ಅದರ ಮೇಲೆಯೇ ಖಡೀಕರಣ ಮಾಡಿದ್ದರಿಂದ ರಸ್ತೆ ಕೀಳಲು ಕಾರಣವಾಗಿದೆ. ರಸ್ತೆ ನಿರ್ಮಾಣದ ಸಂದರ್ಭದಲ್ಲಿಯೇ ಈ ಕುರಿತು ಕರವೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಇಂಜಿನಿಯರ್‌ ಅವರ ಗಮನಕ್ಕೂ ತಂದು ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಒತ್ತಾಯಪಡಿಸಲಾಗಿತ್ತು. ಆದರೆ ಗುತ್ತಿಗೆದಾರರು ಯಾರ ಮಾತನ್ನೂ ಲೆಕ್ಕಿಸದೇ ತಮ್ಮ ಪ್ರಭಾವ ಬಳಸಿ ಮನಬಂದಂತೆ ಕಾಮಗಾರಿ ಕೈತೊಳೆದುಕೊಂಡಿದ್ದಾರೆ.

ರಸ್ತೆ ಕಳಪೆ ಕಾಮಗಾರಿಗೆ ಕಾರಣರಾದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ಅವರ ಬಿಲ್ ತಡೆಹಿಡಿದು ಉತ್ತಮ ಗುಣಮಟ್ಟದ ರಸ್ತೆಯನ್ನು ಪುನರ್‌ ನಿರ್ಮಿಸಿಕೊಡುವಂತೆ ಕಟ್ಟುನಿಟ್ಟಿನ ಆದೇಶ ಮಾಡಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಂದ್ರ ಸಿಂಗ್‌ ಅವರನ್ನು ಒತ್ತಾಯಿಸಿ 15/20 ದಿನಗಳಲ್ಲಿ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಜೈಲ್ಭರೋ ಚಳವಳಿ ಮಾಡುವುದಾಗಿ ಎಚ್ಚರಿಸಿದರು.

ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಸಹಾಯಕ ಇಂಜಿನಿಯರ್‌ ರಾಜೇಂದ್ರ, ಎಲ್ಲೆಲ್ಲಿ ರಸ್ತೆ ಹಾಳಾಗಿದೆಯೋ ಅದನ್ನು ಪುನರ್‌ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಈ ರಸ್ತೆ ಕಾಮಗಾರಿಗೆ ಸಂಬಂಧಪಟ್ಟಂತೆ ಇದುವರೆಗೂ ಬಿಲ್ ಪಾವತಿಸಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನೆ ನೇತೃತ್ವವನ್ನು ಜಿಲ್ಲಾ ಕರವೇ ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ತಾಲೂಕಾಧ್ಯಕ್ಷ ನಾಗೇಶ ಅಮರಾಪುರ ವಹಿಸಿದ್ದರು. ಪ್ರಕಾಶ ಕೊಂಚಿಗೇರಿಮಠ, ಸಿ.ಎಫ್‌. ಗಡ್ಡದೇವರಮಠ, ಶಂಕರಗೌಡ ಪಾಟೀಲ, ಕಾರ್ತಿಕ ಕುಳಗೇರಿ, ದಾವುದ್‌ ಕಾರಡಗಿ, ಆಸ್ಪಾಕ್‌ ಬಾಗೋಡಿ, ಪ್ರವೀಣ ಗಾಣಿಗೇರ, ಗಂಗಾಧರ ಕೊಂಚಿಗೇರಿಮಠ, ಹನಮಂತ ದುತ್ತರಗಿ, ನವೀನ ಚಿತ್ರಗಾರ, ಮುತ್ತು ಗಾಣಿಗೇರ, ಬಸವರಾಜ ಅಮರಾಪುರ, ರಾಜು ಬೆಳ್ಳಟ್ಟಿ, ರವಿಕುಮಾರ ಕೋರಿ, ಸುಧಾಕರ ಮತ್ತೂರ, ಕೈಸರ್‌ ಮಹಮ್ಮದಲಿ ಸೇರಿ ಹಲವರಿದ್ದರು. ಸಿಪಿಐ ಆರ್‌.ಎಚ್. ಕಟ್ಟಿಮನಿ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next