ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ 8ನೇ ವಾರ್ಡ್‌ನ ಹಳೆ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ರಸ್ತೆಯು ನಗರೋತ್ಥಾನ ಯೋಜನೆ ಯಡಿ ಅಭಿವೃದ್ಧಿಗೆ ಕೈಗೆತ್ತಿಕೊಂಡು ಬಳಿಕ ಅರ್ಧಕ್ಕೆ ಕಾಮಗಾರಿ ನಿಂತು ಆರು ತಿಂಗಳಾದರೂ ರಸ್ತೆ ದುರಸ್ತಿ ಕಾಣದೇ ಸ್ಥಳೀಯ ನಿವಾಸಿಗಳು ಪರದಾಡುವಂತಾಗಿದೆ.
ಈ ಹಿಂದೆ ಮಣ್ಣು ರಸ್ತೆಯಾದರೂ ಸಂಚಾರಕ್ಕೆ ಯೋಗ್ಯವಾಗಿತ್ತು. ಆದರೆ ಸಿಮೆಂಟ್ ರಸ್ತೆ ಮಾಡಬೇಕೆಂದು ನಗರಸಭೆ ಅಧಿಕಾರಿಗಳು ರಸ್ತೆಯನ್ನು ಅಗೆದು ರಸ್ತೆ ಅಕ್ಕಪಕ್ಕ ಚರಂಡಿ ನಿರ್ಮಿಸಿದ್ದಾರೆ. ಆದರೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಚರಂಡಿ ಕೂಡ ಈ ಮೊದಲಿನಂತೆ ಕಸಕಡ್ಡಿ ತುಂಬಿ ಮುಚ್ಚಿ ಹೋಗಿದೆ.
ರಸ್ತೆ ಕಾಮಗಾರಿ ಸ್ಥಗಿತದಿಂದ ವಾರ್ಡ್‌ನ ನಾಗರಿಕರು ಸುಗಮ ಸಂಚಾರಕ್ಕೆ ಇನ್ನಿಲ್ಲದ ಪಡಿಪಾಟಲು ಪಡುವಂತಾಗಿದೆ. 8ನೇ ವಾರ್ಡ್‌ನ ನಾಗರಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸದ್ಯ ರಸ್ತೆಗೆ ನಗರೋತ್ಥಾನ ಯೋಜನೆಯಡಿ ಲಕ್ಷಾಂತರ ರೂ. ಸುರಿದಿರುವ ನಗರಸಭೆ ಅಧಿಕಾರಿಗಳು ರಸ್ತೆ ಕಾಮಗಾರಿ ಪೂರ್ಣಗೊಳಿಸದಿರುವುದಕ್ಕೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ರಸ್ತೆ ಮಧ್ಯೆಯಲ್ಲಿ ಒಳಚರಂಡಿ ಕಾಮಗಾರಿಗಾಗಿ ಮ್ಯಾನ್‌ಹೋಲ್ಗೆ ಗುಂಡಿ ಅಗೆದಿದ್ದು, ಹಾಗೆ ಬಿಟ್ಟಿರುವುದರಿಂದ ರಸ್ತೆಯಲ್ಲಿ ಯಾವುದೇ ವಾಹನ ಸಂಚಾರ ಸಾಧ್ಯವಾಗದೇ ಬಡಾವಣೆಯ ನಿವಾಸಿಗಳು ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಮನೆಗಳಿಂದ ಹೊರ ತರಲಾಗದೇ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ನಗರಸಭೆ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಆರು ತಿಂಗಳನಿಂದ ರಸ್ತೆ ಕಾಮಗಾರಿ ಪೂರ್ಣಗೊಳ್ಳದೇ ಸ್ಥಗಿತಗೊಂಡಿದೆ. ಈಗಾಗಲೇ ಹೊಸದಾಗಿ ನಿರ್ಮಿಸಿರುವ ಚರಂಡಿ ಗಳು ಕೂಡ ಘನ ತಾಜ್ಯ ವಸ್ತುಗಳಿಂದ ತುಂಬಿ ಹೋಗಿವೆ. ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ. ಜಿಲ್ಲಾ ಕೇಂದ್ರದಲ್ಲಿ ಬಹುತೇಕ ಕಡೆ ಇದೇ ದುಸ್ಥಿತಿ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ.
● ಚಂದ್ರಶೇಖರ್, ಸ್ಥಳೀಯ ನಿವಾಸಿ
Advertisement
ಜೆಲ್ಲಿಕಲ್ಲುಗಳ ಮೇಲೆ: ಜಿಲ್ಲಾಸ್ಪತ್ರೆ ಮುಂಭಾಗ ಇರುವ ಈ ರಸ್ತೆಯನ್ನು ಆರು ತಿಂಗಳ ಹಿಂದೆಯೇ ಅಗೆದು ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಸಿದ್ಧತೆ ಮಾಡಲಾಗಿತ್ತು. ಆದರೆ ಅನುದಾನದ ಕೊರತೆಯೋ ಅಥವಾ ಗುತ್ತಿಗೆದಾರರ ನಿರ್ಲಕ್ಷ್ಯವೋ ರಸ್ತೆ ಕಾಮಗಾರಿ ಮಾತ್ರ ಅರ್ಧಕ್ಕೆ ನಿಂತು ಸ್ಥಳೀಯ ನಾಗರಿಕರನ್ನು ನಿತ್ಯ ಹೈರಾಣ ಮಾಡುತ್ತಿದೆ. ರಸ್ತೆಗೆ ಹಾಕಿರುವ ಜೆಲ್ಲಿ ಕಲ್ಲುಗಳು ಮೇಲೆ ಬಂದಿದ್ದು, ಸಾರ್ವಜನಿಕರು, ವಯೋ ವೃದ್ಧರು, ಮಕ್ಕಳು ಈ ರಸ್ತೆಯಲ್ಲಿ ನಡೆಯಲು ಹಿಂದೇಟು ಹಾಕುವಂತಾಗಿದೆ.
Related Articles
● ಚಂದ್ರಶೇಖರ್, ಸ್ಥಳೀಯ ನಿವಾಸಿ
Advertisement