Advertisement

ಆಮೆಗತಿಯ ರಸ್ತೆ ಕಾಮಗಾರಿ: ಜನರಿಗೆ ನಿತ್ಯ ಕಿರಿಕಿರಿ

01:00 AM Feb 19, 2019 | Team Udayavani |

ಗಂಗೊಳ್ಳಿ: ಮೇಲ್‌ ಗಂಗೊಳ್ಳಿ ವಾಟರ್‌ ಟ್ಯಾಂಕ್‌ನಿಂದ ಗಂಗೊಳ್ಳಿ ಪಂಚಾಯತ್‌ ಕಚೇರಿವರೆಗಿನ ಸುಮಾರು 700 ಮೀಟರ್‌ ಉದ್ದದ ಮುಖ್ಯರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಸವಾರರು, ಶಾಲಾ – ಕಾಲೇಜು ಮಕ್ಕಳು, ಕೆಲಸಕ್ಕೆ ಹೋಗುವ ಜನರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. 
ನೆರೆ ಪರಿಹಾರದಲ್ಲಿ ಮಂಜೂರಾದ ಸುಮಾರು 1.08 ಕೋಟಿ ರೂ. ವೆಚ್ಚದಲ್ಲಿ ಕಳೆದ 15 ದಿನಗಳಿಂದ ಈ ಕಾಂಕ್ರೀಟಿಕರಣ ಕಾಮಗಾರಿ ನಡೆಯುತ್ತಿದೆ. ಮುಖ್ಯ ರಸ್ತೆ ಕಾಮಗಾರಿ ನಡೆಯುತ್ತಿ ರುವ ಹಿನ್ನಲೆಯಲ್ಲಿ ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. 

Advertisement

ಟ್ರಾಫಿಕ್‌ ಜಾಂ
ಇದು ಗಂಗೊಳ್ಳಿ ಬಂದರಿಗೆ ತೆರಳುವ ಮುಖ್ಯ ರಸ್ತೆಯಾಗಿದ್ದು, ಮೀನು ಸಾಗಾಟದ ಲಾರಿಗಳು, ಸಾರ್ವಜನಿಕ ಸಾರಿಗೆ ಬಸ್‌ಗಳು, ಶಾಲಾ ವಾಹನಗಳು, ಕಾರು, ಆಟೋರಿûಾ ಸೇರಿದಂತೆ ಸಾವಿರಾರು ವಾಹನಗಳು ಪ್ರತಿನಿತ್ಯ ಇದೇ ಮಾರ್ಗವಾಗಿ ಸಂಚರಿಸುತ್ತವೆ. ಒಂದು ಬದಿ ಕಾಂಕ್ರೀಟಿಕರಣ ನಡೆಯುತ್ತಿರುವುದರಿಂದ ಒಂದು ಬದಿಯಿಂದ ಮಾತ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದರಿಂದ ಆಗಾಗ ಟ್ರಾಫಿಕ್‌ ಜಾಂ ಉಂಟಾಗುತ್ತಿದೆ. ಇಕ್ಕಟ್ಟಾದ ರಸ್ತೆಯಾಗಿರುವುದರಿಂದ ನಿತ್ಯ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. 

ಬಸ್‌ ಸಂಚಾರ ಅರ್ಧಕ್ಕೆ ಮೊಟಕು
ವಾಹನ ದಟ್ಟಣೆಯಿಂದ ಸಂಚಾರಕ್ಕೆ ಕಷ್ಟವಾಗುತ್ತಿರುವ ಹಿನ್ನಲೆಯಲ್ಲಿ ಖಾಸಗಿ ಮತ್ತು ಸರಕಾರಿ ಬಸ್‌ಗಳು ಮೇಲ್‌ ಗಂಗೊಳ್ಳಿಯ ಶ್ರೀ ರಾಮ ಮಂದಿರದ ಬಳಿಯವರೆಗೆ ಅಂದರೆ ಗಂಗೊಳ್ಳಿಯ ಮುಖ್ಯ ಪೇಟೆಗಿಂತ 2 ಕಿ.ಮೀ. ದೂರದವರೆಗೆ ಮಾತ್ರ ಸಂಚರಿಸುತ್ತವೆ. ಅಲ್ಲಿಂದ ಮುಂದಕ್ಕೆ ಹೋಗುವುದಿಲ್ಲ. ಇದರಿಂದ ಮುಂದಕ್ಕೆ ತೆರಳಬೇಕಾದವರು ಅನಿವಾರ್ಯವಾಗಿ ರಿಕ್ಷಾ ಬಾಡಿಗೆ ಮಾಡಿಕೊಂಡು ಹೋಗಬೇಕಾಗಿದೆ. 

ಬೇರೆ ಪರ್ಯಾಯ  ರಸ್ತೆಗಳಿಲ್ಲದ ಕಾರಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಲಿ ಎಂದು ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ವಹಿವಾಟಿಗೂ ಹೊಡೆತ
ಮುಖ್ಯರಸ್ತೆಯಲ್ಲಿ ಬಸ್‌ಗಳ ಸಂಚಾರ ಇಲ್ಲದೆ ಜನರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಗಂಗೊಳ್ಳಿ ಪೇಟೆ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಗಣನೀಯವಾಗಿ ಕುಸಿತಗೊಂಡಿದೆ. ಇದರಿಂದ ವ್ಯಾಪಾರಸ್ಥರಿಗೂ ಹೊಡೆತ ಬಿದ್ದಿದೆ.  

Advertisement

ಮತ್ತೆ 1 ಕಿ.ಮೀ. ವಿಸ್ತರಣೆ
700 ಮೀಟರ್‌ ಕಾಂಕ್ರೀಟಿಕರಣ ಕಾಮಗಾರಿ ಮುಗಿದ ಬಳಿಕ 1.50 ಕೋ.ರೂ. ವೆಚ್ಚದಲ್ಲಿ ಗಂಗೊಳ್ಳಿ ಬಂದರು ಕಡೆಯಿಂದ ಗಂಗೊಳ್ಳಿ ಪೇಟೆಯವರೆಗಿನ ಸುಮಾರು 1 ಕಿ.ಮೀ. ಉದ್ದದ ರಸ್ತೆ ಅಗಲೀಕರಣ ಹಾಗೂ ಕಾಂಕ್ರೀಟಿಕರಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ. 

ಮಾರ್ಚ್‌ನೊಳಗೆ ಪೂರ್ಣ
ಈಗ ಒಂದು ಕಡೆಯ ಕಾಂಕ್ರೀಟಿಕರಣ ನಡೆಸಿ ಆ ಬಳಿಕ 28 ದಿನ ಬಿಟ್ಟು ಮತ್ತೂಂದು ಬದಿಯ ಕಾಮಗಾರಿ ನಡೆಸಲಾಗುವುದು. ಇದು ಕಾಂಕ್ರೀಟಿಕರಣ ಆಗಿರುವುದರಿಂದ ವೇಗವಾಗಿ ಮಾಡಲು ಸಾಧ್ಯವಿಲ್ಲ. ಆದರೂ ಗರಿಷ್ಠ ಪ್ರಯತ್ನ ಮಾಡುತ್ತಿದ್ದೇವೆ. ಜನರು ಸಹಕರಿಸಬೇಕು. ಮಾರ್ಚ್‌ನೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. 
– ಕೆ. ಮಂಜುನಾಥ್‌, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

ಕಾಮಗಾರಿ ಚುರುಕುಗೊಳ್ಳಲಿ
ಗಂಗೊಳ್ಳಿ ಮುಖ್ಯರಸ್ತೆ ಕಾಮಗಾರಿಯಿಂದ ಬಹಳ ತೊಂದರೆಯಾಗುತ್ತಿದೆ. ಬಸ್‌ ಸಂಚಾರವು ಅರ್ಧಕ್ಕೆ ಮಾತ್ರ ಇರುವುದರಿಂದ ಅಲ್ಲಿಂದ ಮುಂದಕ್ಕೆ ಅನಿವಾರ್ಯವಾಗಿ ಆಟೋ ರಿûಾವನ್ನು ಅವಲಂಬಿಸಬೇಕಾಗಿದೆ. ಕಳೆದ 15 ದಿನಗಳಿಂದ ಕಾಂಕ್ರೀಟಿರಕಣ ಕಾಮಗಾರಿ ನಡೆಯುತ್ತಿದ್ದರೂ ನಿರೀಕ್ಷಿತ ಮಟ್ಟದ ವೇಗದಲ್ಲಿ ನಡೆಯುತ್ತಿಲ್ಲ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತ್ವರಿತಗತಿಯಲ್ಲಿ ಕಾಮಗಾರಿಯನ್ನು ನಡೆಸಲು ಸೂಚನೆ ನೀಡಬೇಕು ಎನ್ನುವುದಾಗಿ ಗಂಗೊಳ್ಳಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next