Advertisement

ನಗರಾಭಿವೃದ್ಧಿಗೆ ರಸ್ತೆ ಅಗಲೀಕರಣ ಅನಿವಾರ್ಯ

02:07 PM Jul 21, 2019 | Team Udayavani |

ಕೋಲಾರ: ಜಿಲ್ಲಾ ಕೇಂದ್ರವನ್ನು ಅಭಿವೃದ್ಧಿಪಡಿಸಲು ನಗರದ ವಿವಿಧ ರಸ್ತೆಗಳನ್ನು ಅಗಲೀಕರಣಗೊಳಿಸಲು ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಶನಿವಾರ ರಸ್ತೆಗಳ ಅಗಲೀಕರಣ ಮತ್ತು ಅಭಿವೃದ್ಧಿ ಕುರಿತಂತೆ ನಡೆದ ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು. ಒಂದು ನಗರವು ಅಭಿವೃದ್ಧಿಯಾಗಲು ಅಲ್ಲಿನ ರಸ್ತೆಗಳು, ಸಾರಿಗೆ ವ್ಯವಸ್ಥೆ ಉತ್ತಮವಾಗಿರಬೇಕು. ಆದರೆ, ನಗರವು ಜಿಲ್ಲಾ ಕೇಂದ್ರವಾಗಿದ್ದರೂ, ಒಂದು ದೊಡ್ಡ ಹಳ್ಳಿಯಂತೆ ಇದೆ. ಆದ್ದರಿಂದ ಈಗಲಾದರೂ ರಸ್ತೆ ಅಗಲೀಕರಣಗೊಳಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ತಿಳಿಸಿದರು.

ಹಣ ಪೋಲಾಗುವುದು ತಪ್ಪುತ್ತೆ: ಸರ್ಕಾರದಿಂದ ಬರುವ ಅನುದಾನ ಸಮರ್ಪಕವಾಗಿ ಬಳಕೆಯಾಗಬೇಕು. ಕಾಮಗಾರಿಗಳು ನಡೆಯುವಾಗ ಅಂದಾಜು ಮೊತ್ತ, ಕಾಮಗಾರಿಗಳ ವಿವರಗಳನ್ನು ಕಡ್ಡಾಯವಾಗಿ ಪ್ರಚುರ ಪಡಿಸಬೇಕು.ಸಾರ್ವಜನಿಕರು ಕಾಮಗಾರಿಯ ಗುಣ ಮಟ್ಟವನ್ನು ಪ್ರಶ್ನಿಸಬೇಕು. ಇದರಿಂದ ಸರ್ಕಾರದ ಹಣ ಅನಗತ್ಯವಾಗಿ ಪೋಲಾಗುವುದು ತಪ್ಪುತ್ತದೆ ಎಂದರು.

ಅನುದಾನ: ಕೋಲಾರದ ನಗರದ ಅಭಿವೃದ್ಧಿಗೆ ಕುಡಿಯುವ ನೀರಿನ ಕಾಮಗಾರಿಗಳಿಗೆ 3.66 ಕೋಟಿ ರೂ. ಕಲ್ಯಾಣಿ ಮತ್ತು ಚರಂಡಿಗಳ ಪುನಶ್ಚೇತನಕ್ಕೆ 13 ಕೋಟಿ ರೂ., 12 ಉದ್ಯಾನ ಹಾಗೂ 2 ಬಸ್‌ ನಿಲ್ದಾಣಗಳ ಅಭಿವೃದ್ಧಿಗೆ 138 ಕೋಟಿ ರೂ. ಅನುದಾನ ಬಂದಿದೆ ಎಂದು ಮಾಹಿತಿ ನೀಡಿದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಕೋಲಾರ ನಗರದಲ್ಲಿ ಚರಂಡಿಗಳನ್ನು ಮುಚ್ಚಿ, ರಸ್ತೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ರಸ್ತೆಗಳು ಕಿರಿದಾಗಿದೆ. ಮಳೆಗಾಲದಲ್ಲಿ ನೀರು ರಸ್ತೆಗಳಲ್ಲಿ ಹರಿಯುವಂತಾಗಿದೆ. ನಗರಸಭೆಯವರು ಇತ್ತ ಗಮನ ಹರಿಸಿ ಒತ್ತುವರಿ ತೆರವುಗೊಳಿಸಬೇಕು ಎಂದು ಸೂಚಿಸಿದರು.

Advertisement

ಅಭಿವೃದ್ಧಿ ಮೂಲ ಉದ್ದೇಶ: ರಸ್ತೆಗಳ ಅಗಲೀಕರಣ ಸಂದರ್ಭದಲ್ಲಿ ಯಾವುದೇ ದೇವಸ್ಥಾನ, ಚರ್ಚ್‌, ಮಸೀದಿಗಳು ಇದ್ದರೂ ಅವುಗಳನ್ನು ತೆರವುಗೊಳಿಸಲು ಎಲ್ಲಾ ಸಮುದಾಯದವರು ಸಹಕರಿಸಬೇಕು. ಒಟ್ಟಾರೆ ನಗರದ ಅಭಿವೃದ್ಧಿಯನ್ನು ಮೂಲ ಉದ್ದೇಶವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಒತ್ತುವರಿದಾರರಿಗೆ ಪರಿಹಾರವಿಲ್ಲ: ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿ, 1870ರಲ್ಲಿ ಬ್ರಿಟಿಷರು ರಸ್ತೆಗಳ ವಿಸ್ತಾರವನ್ನು ಗುರುತಿಸಿದ್ದಾರೆ. ಅದರಂತೆ ರಾಜ್ಯ ಹೆದ್ದಾರಿಗಳಿಗೆ 50 ಮೀಟರ್‌ ಅಗಲ ತೆಗೆದುಕೊಳ್ಳಬೇಕು. ಆದರೆ, ಸಾರ್ವಜನಿಕ ಹಿತದೃಷ್ಟಿಯಿಂದ ಹೆಚ್ಚಿನ ಜನರಿಗೆ ಅನಾನುಕೂಲವಾಗಬಾರದು ಎಂದು 24 ಮೀಟರ್‌ ರಸ್ತೆಯನ್ನು ಅಗಲೀಕರಣ ಮಾಡಲಾಗುವುದು. ರಸ್ತೆಗೆ ಜಾಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿರುವವರಿಗೆ ಯಾವುದೇ ರೀತಿಯ ಪರಿಹಾರ ಸಿಗುವುದಿಲ್ಲ ಎಂದು ಮಾಹಿತಿ ನೀಡಿದರು. ಎಸ್ಪಿ ಕಾರ್ತಿಕ್‌ ರೆಡ್ಡಿ, ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next