ಹುಮನಾಬಾದ: ನಗರದ ಹಣಕುಣಿ ರಸ್ತೆಯಲ್ಲಿರುವ ಶಿಕ್ಷಕರ ಬಡಾವಣೆಯಲ್ಲಿ ಚರಂಡಿ ಸೌಲಭ್ಯವಿಲ್ಲದ ಕಾರಣ ಸಾರ್ವಜನಿಕ ತ್ಯಾಜ್ಯ ರಸ್ತೆ ಮಧ್ಯ ಸಂಗ್ರಹಗೊಂಡು ನಿವಾಸಿಗಳಲ್ಲಿ ರೋಗ ಭೀತಿ ಕಾಡುತ್ತಿದೆ.
ಕಲ್ಲೂರ ರಸ್ತೆಯಿಂದ ಶಿಕ್ಷಕರ ಬಡಾವಣೆ ದೀನೆ ನಿವಾಸ ಮಾರ್ಗದಿಂದ ತೆರಳುವ ಮಾರ್ಗ ಮಧ್ಯದಲ್ಲಿ ರಸ್ತೆ ಸೌಲಭ್ಯವಿಲ್ಲದ ಕಾರಣ ದ್ವಿಚಕ್ರವಾಹನ ಸವಾರರು ವಾಹನ ಹೊತ್ತುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಅಪ್ಪಿತಪ್ಪಿ ಧೈರ್ಯ ಮಾಡಿ ಹೋದರೂ ಬಿದ್ದು ಪೆಟ್ಟು ಮಾಡಿಕೊಳ್ಳುವುದು ಖಚಿತ. ಹಾಗೆ ಹೋದವರು ಮನೆ ಬದಲಿಗೆ ಆಸ್ಪತ್ರೆಗೆ ಹೋಗುತ್ತಾರೆ. ಪುರಸಭೆ ಹಾಗೂ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು ನಿತ್ಯ ಅದೇ ಮಾರ್ಗದಿಂದ ತೆರಳಿದರೂ ಕೂಡ ಅದನ್ನು ಅಭಿವೃದ್ಧಿಪಡಿಸುವತ್ತ ಮಾತ್ರ ಚಿತ್ತ ಹರಿಸುತ್ತಿಲ್ಲ ಎಂಬುದು ಬಡಾವಣೆ ನಿವಾಸಿಗಳ ಆರೋಪ. ಐದು ವರ್ಷಗಳ ಹಿಂದೆ ಚುನಾವಣೆ ಸಂದರ್ಭದಲ್ಲಿ ನಮಗೆ ಇನ್ನಿಲ್ಲದ ಭರವಸೆ ಕೊಟ್ಟ ಯಾರೊಬ್ಬರೂ ಸಮಸ್ಯೆಗಳಿಗೆ ಸ್ಪಂದಿಸದಿರುವುದು ನೋವಿನ ಸಂಗತಿ ಎಂದು ಸ್ಥಳೀಯರಾದ ಖೇಳ್ಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ವರೆಗೆ ಮಾತಿನ ಮಂಟಪ ಕಟ್ಟಿ ಮೋಸ ಮಾಡಿದ ಚುನಾಯಿತ ಪ್ರತಿನಿಧಿಗಳಿಗೆ ಬರುವ ಚುನವಣೆಯಲ್ಲಿ ಮನೆಗೆ ಕಳಿಸಿ, ತಕ್ಕಪಾಠ ಕಲಿಸುವುದು ಖಚಿತ ಎಂದು ಆಕ್ರೋಶದಿಂದ ಎಚ್ಚರಿಸಿರುವ ನಿವಾಸಿಗಳು, ಈಗಲೂ ಕಾಲ ಮಿಂಚಿಲ್ಲ. ಚುನಾವಣೆಗೂ ಮುನ್ನ ಸಮಸ್ಯೆ ಬಗೆ ಹಜರಿಸಿ ಜನರ ವಿಶ್ವಾಸ ಉಳಿಸಿಕೊಳಂಡಲ್ಲಿ ಮುಂದೆಯೂ ಭವಿಷ್ಯ ನಿಮ್ಮದಾಗುತ್ತದೆ. ಇಲ್ಲದಿದ್ದರೇ ಮನೆ ವಿಳಾಸ ಹುಡುಕಬೇಕಾಗುತ್ತದೆ ಎಂದು ಅಲ್ಲಿನ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ನಿತ್ಯ ಸಂಜೆಯಾದರೆ ಸಾಕು ಸೊಳ್ಳೆ ಕಾಟ ಹೆಚ್ಚುತ್ತದೆ. ಮಕ್ಕಳು, ವೃದ್ಧರು ಜ್ವರ, ಟಾಯಿಫಾಯಿಡ್ ಮತ್ತಿತರ ಕಾಯಿಲೆಗಳಿಂದ ನರಳುತ್ತಿದ್ದು, ಸಂಬಂಧಪಟ್ಟವರು ಈಗಲಾದರೂ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅಂಬರೀಶ ಗುಳಶಟ್ಟಿ, ಎಚ್.ಪ್ರಶಾಂತ, ಪಿ.ಜಿ. ವೈಜಿನಾಥ, ರಾಜೇಂದ್ರ ಕುಮಾರ, ಸುಮಾ ರಾಜೇಶ್ವರ ಅವರು ಎಚ್ಚರಿಸಿದ್ದಾರೆ.
ಬಡಾವಣೆ ಅಸ್ತಿತ್ವಕ್ಕೆ ಬಂದು ಎರಡು ದಶಕ ಕಳೆದಿದೆ. ಸಂಬಂಧಪಟ್ಟ ವಾರ್ಡ್ ಸದಸ್ಯರು ಮತ್ತು ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮಾಡಿಕೊಂಡ ಮನವಿಯಿಂದ ಯಾವುದೇ ಪ್ರಯೋಜನವಾಗಿಲ್ಲ. ಸೊಳ್ಳೆಕಾಟದ ಪರಿಣಾಮ ಮಕ್ಕಳು, ವೃದ್ಧರು ಟಾಯಿಫಾಡ್ ಮತ್ತಿತರ ಕಾಯಿಲೆಗಳಿಂದ ನರಳುತ್ತಿದ್ದಾರೆ.
•ಎಸ್.ಎಂ. ಖೇಳ್ಗಿ, ಬಡಾವಣೆ ನಿವಾಸಿ