ಬೀದರ: ಮರಾಠಾ ಭವನ ನಿರ್ಮಿಸಲು ಉದ್ದೇಶಿಸಿರುವ ಔರಾದ ತಾಲೂಕಿನ ಗಣೇಶಪುರ ಬಳಿಯಿಂದ ಔರಾದ-ಉದಗಿರ ಮುಖ್ಯರಸ್ತೆ ವರೆಗೆ ರಸ್ತೆ ನಿರ್ಮಾಣ ಪೂರ್ಣಗೊಂಡಿದೆ.
ನಾಲ್ಕು ದಿನಗಳ ಅವಧಿಯಲ್ಲಿ ಜೆಸಿಬಿ ಬಳಸಿ ಎರಡೂ ಬದಿಯಲ್ಲಿ ಚರಂಡಿ ತೋಡಿ, ಭೂಮಿ ಸಮತಟ್ಟುಗೊಳಿಸಿ, 26 ಅಡಿ ಅಗಲ ಹಾಗೂ 600 ಮೀಟರ್ ಉದ್ದದ ರಸ್ತೆ ನಿರ್ಮಿಸಲಾಗಿದೆ.
ಭವನದ ನಿವೇಶನ ಅಕ್ಕಪಕ್ಕದ ಜಮೀನಿನ ಮಾಲೀಕರಾದ ರಮೇಶ ಏಕನಾಥರಾವ್ ಜಾಧವ್, ನಂದಕುಮಾರ ಭೋಸ್ಲೆ, ರಮೇಶ ಉಪಾಸೆ ಹಾಗೂ ಶಿವಾಜಿ ಬೋಗಾರ್ ಅವರು ಸ್ವ ಇಚ್ಛೆಯಿಂದ ಜಾಗ ಬಿಟ್ಟುಕೊಟ್ಟು ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ರಸ್ತೆ ನಿರ್ಮಾಣದಿಂದ ಭವನದ ಕಾರ್ಯ ಸುಗಮವಾಗಿದೆ ಎಂದು ಮರಾಠಾ ಸಮಾಜದ ಮುಖಂಡ ದೀಪಕ ಪಾಟೀಲ ಚಾಂದೋರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸಚಿವ ಭಗವಂತ ಖೂಬಾ ಅವರು ಈಗಾಗಲೇ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ. ಜಿಲ್ಲೆಯ ವಿಧಾನ ಪರಿಷತ್ ಸದಸ್ಯರು, ಶಾಸಕರ ಅನುದಾನ ಹಾಗೂ ಮರಾಠಾ ಸಮಾಜದವರಿಂದ ದೇಣಿಗೆ ಸಂಗ್ರಹಿಸಿ ಗಣೇಶಪುರದ 32 ಗುಂಟೆ ನಿವೇಶನದಲ್ಲಿ ಸುಸಜ್ಜಿತ ಭವನ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು.
ನಿವಾರಣೆಯಾದ ದಾರಿ ಸಮಸ್ಯೆ
ಕೇಂದ್ರ ಸಚಿವ ಭಗವಂತ ಖೂಬಾ ಅವರು ರೈತರ ಮನವೊಲಿಸಿ ಭವನ ನಿರ್ಮಾಣಕ್ಕೆ ಇದ್ದ ದಾರಿ ತೊಡಕು ನಿವಾರಿಸಿದ್ದಾರೆ. ನಾಲ್ವರು ರೈತರು ಜಾಗ ಬಿಟ್ಟುಕೊಟ್ಟ ಕಾರಣ ಗಣೇಶಪುರ ಬಳಿಯ ಮರಾಠಾ ಭವನದ ದಾರಿ ಸಮಸ್ಯೆ ಬಗೆಹರಿದಿದೆ. ಉದ್ಯಮಿ ಗುರುನಾಥ ಕೊಳ್ಳೂರ ಅವರ ಸಹಕಾರ ಹಾಗೂ ಸಮಾಜದವರ ದೇಣಿಗೆಯಿಂದ ಇದೀಗ ಸಂಪರ್ಕ ರಸ್ತೆ ನಿರ್ಮಾಣಗೊಂಡಿದೆ ಎಂದು ಹೇಳಿದ್ದಾರೆ.