ನಾಗಮಂಗಲ: ಪಟ್ಟಣದ ಹೃದಯ ಭಾಗದಲ್ಲಿ ಪುರಸಭೆಯ ವತಿಯಿಂದ ನಿರ್ಮಾಣವಾಗಿರುವ ವಾಣಿಜ್ಯ ಸಂಕೀರ್ಣದ ಅಕ್ಕ ಪಕ್ಕದಲ್ಲಿ ಹಾಗು ಮುಂಭಾಗದಲ್ಲಿ ವ್ಯಾಪಾರ ಮಾಡುತ್ತಿದ್ದ ಸಣ್ಣಪುಟ್ಟ ಅಂಗಡಿ ಮುಂಗಟ್ಟುಗಳನ್ನು ಪುರಸಭೆಯ ಅಧಿಕಾರಿಗಳು ತೆರವುಗೊಳಿಸುವಂತೆ ಆದೇಶಿಸಿದರು.
ಕೆಲವು ಅಂಗಡಿಗಳನ್ನು ಸ್ಥಳದಲ್ಲಿಯೇ ನಿಂತು ತೆರವುಗೊಳಿಸಿದರು. ಕೆಲವು ಅಂಗಡಿಗಳನ್ನು ಡ್ರೈನೇಜ್ ಮೇಲೆ ಸ್ಥಳಾಂತರಿಸಿಕೊಳ್ಳಿ. ವಾಣಿಜ್ಯ ಸಂಕೀರ್ಣದ ಮುಂದೆ ಟೈಲ್ಸ್ ಕೆಲಸ ಮುಗಿಸಿದ ಬಳಿಕ ವಾಪಸ್ ಅಂಗಡಿಗಳನ್ನು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಅಂಗಡಿಯವರು ತಮ್ಮ ಅಳಲು ವ್ಯಕ್ತ ಪಡಿಸಿದರು.
ಮಾರುಕಟ್ಟೆ ವ್ಯವಸ್ಥೆ: ಕಳೆದ 40 ವರ್ಷಗಳಿಂದ ನಾವು ಇದೇ ಸ್ಥಳದಲ್ಲಿಯೇ ವ್ಯಾಪಾರ ನಡೆಸುತ್ತಿದ್ದೇವೆ. ನಾವು ಇಲ್ಲಿ ವ್ಯಾಪಾರ ಶುರು ಮಾಡಿದ ಮೇಲೆ ಇಲ್ಲೊಂದು ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಗಿದೆ. 40 ವರ್ಷಗಳ ಹಿಂದೆ ಸರ್ಕಾರಿ ಆಸ್ಪತ್ರೆ ಇತ್ತು. ತದ ನಂತರ ಪೊಲೀಸ್ ಠಾಣೆಯಾಗಿ ಪರಿವರ್ತನೆಯಾಯಿತು. ಅದರ ಹಿಂದೆ ಟಿ.ಸಿಎಚ್ ಕಾಲೇಜು ಇತ್ತು. ಈಗ ವಾಣಿಜ್ಯ ಸಂಕೀರ್ಣವಾಗಿ ಪರಿವರ್ತನೆಯಾಗಿದೆ.
ಒಂದೇ ಕಡೆ ವ್ಯಾಪಾರ: ಹಳೆಯ ಪಟ್ಟಣ ಪೊಲೀಸ್ ಠಾಣೆ ಈಗ ಖಾಲಿ ಇದೆ. ಇಷ್ಟೆಲ್ಲಾ ಬದಲಾವಣೆ ಕಂಡಿದ್ದೇವೆ. ಇಲ್ಲಿ ಹೂ ಮಾರಾಟ ಮಾಡುವವರಿದ್ದಾರೆ. ಎಲೆ, ಅಡಕೆ, ತೆಂಗಿನಕಾಯಿ ಅಂಗಡಿ ಇದೆ, ಹಣ್ಣಿನ ಅಂಗಡಿ ಇದೆ, ತರಕಾರಿ ವ್ಯಾಪಾರ ಮಾಡುವ ಅಂಗಡಿಯವರು ಇದ್ದಾರೆ. ಇಷ್ಟೆಲ್ಲಾ ವ್ಯಾಪಾರಸ್ಥರು ಇಲ್ಲಿ ಒಂದು ಕಡೆ ಸೇರಿ ವ್ಯಾಪಾರ ಮಾಡಿಕೊಂಡು ಬಂದಿದ್ದರಿಂದ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಗಿದೆ.
ಅಹವಾಲು ಸಲ್ಲಿಸಿದ್ದೆವು: ಕಳೆದ ಹಲವು ವರ್ಷಗಳಿಂದ ನಾವು ಪುರಸಭೆಗೆ ಅಹವಾಲು ಸಲ್ಲಿಸಿದ್ದೆವು. ನಮಗೆ ಅಂಗಡಿ ಮಳಿಗೆ ಕಟ್ಟಿಕೊಡಿ ಎಂದಾಗ ಸ್ಪಂದಿಸಲಿಲ್ಲ. ಈಗ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಿದೆ. ನಮ್ಮನ್ನು ನಮ್ಮ ವ್ಯಾಪಾರದ ಜಾಗಗಳಿಂದ ಗುಳೇ ಎಬ್ಬಿಸುತ್ತಿದ್ದಾರೆ. ಈ ವ್ಯಾಪಾರದ ಜಾಗ ಬಿಟ್ಟು ನಾವು ಹೋಗುವುದಾದರು ಎಲ್ಲಿಗೆ ಎಂದು ವ್ಯಾಪಾರಸ್ಥರು ತಮ್ಮ ಅಳಲು ತೋಡಿಕೊಂಡರು.
ಹರಾಜು ಪ್ರಕ್ರಿಯೆಯಲ್ಲಾದರೂ ಪ್ರಾತಿನಿಧ್ಯ ನೀಡಲಿ: ವಾಣಿಜ್ಯ ಸಂಕೀರ್ಣದ ಹರಾಜು ಪ್ರಕ್ರಿಯೆಯಲ್ಲಾದರು ಮಾನವೀಯತೆ ದೃಷ್ಟಿಯಿಂದ ಹಳಬರಿಗೆ ಮೊದಲ ಪ್ರಾತಿನಿಧ್ಯ ನೀಡಲಿ. ನಮಗೆ ಹರಾಜು ಪ್ರಕ್ರಿಯೆಯಲ್ಲಿ ರಿಯಾಯಿತಿ ದರದಲ್ಲಿ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪುರಸಭೆ ಅದಿಕಾರಿಗಳು, ಸದಸ್ಯರು ಶಾಸಕರು ಔದಾರ್ಯ ತೋರಲಿ ಎಂದು ಮನವಿ ಮಾಡಿಕೊಂಡರು.
ಕರೆ ಸ್ವೀಕರಿಸದ ಶಾಸಕರು, ಸ್ಪಂದಿಸದ ಸದಸ್ಯರು: ವ್ಯಾಪಾರಸ್ಥರು ಸಮಸ್ಯೆಯನ್ನು ಶಾಸಕ ಸುರೇಶ್‌ಗೌಡರಿಗೆ ತಿಳಿಸಲು ಅನೇಕ ಬಾರಿ ಕರೆ ಮಾಡಿದರು ಶಾಸಕ ಸುರೇಶ್‌ಗೌಡ ಕರೆ ಸ್ವೀಕರಿಸಲಿಲ್ಲ ಎಂದು ವ್ಯಾಪಾರಸ್ಥರು ದೂರಿದರು. ಯಾವುದೇ ಒಬ್ಬ ಪುರಸಭಾ ಸದಸ್ಯ ಕೂಡ ಸೂಕ್ತವಾಗಿ ಸ್ಪಂದಿಸಲೇ ಇಲ್ಲ ಎಂದು ತಮ್ಮ ಪರಿಸ್ಥಿತಿ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು.